ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕು: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Jul 28, 2025, 12:34 AM IST
ಫೋಟೋ : ೨೭ಕೆಎಂಟಿ_ಜೆಯುಎಲ್_ಕೆಪಿ೧ : ಪುರಭವನದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನವನ್ನು ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಆನಂದ ಅಸ್ನೋಟಿಕರ್, ಸೂರಜ ನಾಯ್ಕ, ವೀಣಾ ನಾಯ್ಕ, ರಶ್ಮಿ ರಾಮೇಗೌಡ, ಉಪೇಂದ್ರ ಪೈ, ಸಿ.ಜಿ.ಹೆಗಡೆ, ವೀರಭದ್ರಪ್ಪ, ಪಿ.ಟಿ.ನಾಯ್ಕ ಇತರರು ಇದ್ದರು.  | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲೆಗೆ ಮತ್ತೆ ಮತ್ತೆ ಬರಲಿದ್ದೇನೆ. ಎಲ್ಲರೂ ಕೆಲಸ ಮಾಡುವ ಮೂಲಕ ನೂರಕ್ಕೆ ನೂರರಷ್ಟು ಗೆಲುವಿಗೆ ಕೈಜೋಡಿಸಬೇಕಿದೆ

ಕುಮಟಾ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ನಂಬಿದರೆ ಬದುಕಿಲ್ಲ. ಜನರಿಗೆ ತಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳು ಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಪುರಭವನದಲ್ಲಿ ಭಾನುವಾರ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ವಿಚಾರವನ್ನು ಮುಂದಿಟ್ಟುಕೊಂಡು ನಿರೀಕ್ಷಿತ ಪಂಚಾಯಿತಿ, ತಾಪಂ, ಜಿಪಂ, ಚುನಾವಣೆಗಳಿಗೆ ಹೆಚ್ಚಿನ ಗೆಲುವಿಗಾಗಿ ಸಂಘಟನೆ ಮಾಡಿದರೆ ಅದು ಮುಂದಿನ ವಿಧಾನಸಭೆ ಚುನಾವಣೆಗೆ ಶಕ್ತಿಯಾಗಲಿದೆ. ಉತ್ತರ ಕನ್ನಡ ಜಿಲ್ಲೆಗೆ ಮತ್ತೆ ಮತ್ತೆ ಬರಲಿದ್ದೇನೆ. ಎಲ್ಲರೂ ಕೆಲಸ ಮಾಡುವ ಮೂಲಕ ನೂರಕ್ಕೆ ನೂರರಷ್ಟು ಗೆಲುವಿಗೆ ಕೈಜೋಡಿಸಬೇಕಿದೆ ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರಿರುವ ಈ ಭಾಗದಲ್ಲಿ ಒಂದೇ ಒಂದು ಕೋಲ್ಡ್‌ ಸ್ಟೋರೇಜ್ ಇಲ್ಲ ಎಂದು ತಿಳಿಸಿದ್ದಾರೆ. ಸರ್ಕಾರ ಜನರ ಇಂಥ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಕಳೆದ ಬಾರಿ ಸೂರಜ ನಾಯ್ಕರ ಸೋಲನ್ನು ಸೋಲೆಂದು ಭಾವಿಸಬಾರದು. ಕ್ಷೇತ್ರದಲ್ಲಿ ಜನತಾದಳ ಗಟ್ಟಿಯಾಗಿದ್ದು ಗೆಲುವಿನ ಶಕ್ತಿಯಿದೆ. ಮುಂದಿನ ದಿನದಲ್ಲಿ ಹೆಚ್ಚಿನ ಸ್ಥಾನಮಾನಗಳನ್ನು ಗಳಿಸಬೇಕಿದೆ. ಕುಮಾರಸ್ವಾಮಿಯವರ ಇಚ್ಛೆಯೂ ಇದೇ ಆಗಿದೆ. ಇದಕ್ಕಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಎಂದರು.

ಇಂದು ಆರಂಭಗೊಂಡಿರುವ ಸದಸ್ಯತ್ವ ಅಭಿಯಾನದಲ್ಲಿ ಈ ಕ್ಷೇತ್ರದ ೨೧೫ ಬೂತ್‌ಗಳಲ್ಲಿ ಕಾರ್ಯಕರ್ತರ ತಂಡಗಳನ್ನು ರಚಿಸಿಕೊಂಡು, ದಿನಕ್ಕೆ ೪-೫ ತಾಸು ದುಡಿದು ಮುಂದಿನ ೩೦ ದಿನಗಳಲ್ಲಿ ೨೦ ಸಾವಿರ ಸಕ್ರಿಯ ಸದಸ್ಯರನ್ನು ನೋಂದಾಯಿಸಬೇಕು ಎಂದು ಸೂರಜ ನಾಯ್ಕ ಅವರಿಗೆ ಸೂಚಿಸಿದರು.

ಮಾಜಿ ಸಚಿವ ಕಾರವಾರದ ಆನಂದ ಅಸ್ನೋಟಿಕರ್ ಮಾತನಾಡಿ, ಯಾವುದೇ ಸರ್ಕಾರ ಬಂದರೂ ಉತ್ತರ ಕನ್ನಡ ಜಿಲ್ಲೆಯನ್ನು ಒಂದು ಬದಿಗಿಟ್ಟಿದ್ದಾರೆ. ಅಭಿವೃದ್ಧಿಯಲ್ಲಿ ಮಂಗಳೂರನ್ನು ಅಮೆರಿಕಕ್ಕೆ ಹೋಲಿಸಬಹುದಾದರೆ, ನಮ್ಮ ಜಿಲ್ಲೆ ಶ್ರೀಲಂಕಾ ಆಗಿದೆ. ನಾನು ಸಚಿವನಿದ್ದಾಗ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳಿಗೆ ಮಂಜೂರಿ ತಂದಿದ್ದು ಹರಸಾಹಸವೇ ಆಗಿತ್ತು. ಸೀಬರ್ಡ್‌, ಕೈಗಾದಂತಹ ದೊಡ್ಡ ಯೋಜನೆಗಳು ಬಂದಿದ್ದರೂ ಜನರು ಸಂತ್ರಸ್ತರಾಗಿದ್ದಾರೆ. ನ್ಯಾಯ ಆಗಿಲ್ಲ. ಜಿಲ್ಲೆ ಶೋಷಣೆಗೊಳಗಾಗಿದೆ ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರಜ ನಾಯ್ಕ ಮಾತನಾಡಿ, ಹಿಂದೆ ಬಿಜೆಪಿ ಕಟ್ಟಿ ಬೆಳೆಸಿದ ನನಗೆ ಕೊನೆ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿ ಮೂಲೆಗುಂಪು ಮಾಡಿದರು. ತಾಲೂಕಿನಲ್ಲಿ ಒಂದೂ ಜಿಪಂ ಕ್ಷೇತ್ರ ಗೆದ್ದಿರದಿದ್ದ ಬಿಜೆಪಿಯಲ್ಲಿ ನನ್ನ ಪತ್ನಿಯನ್ನು ನಿಲ್ಲಿಸಿ ಎರಡು ಬಾರಿ ಗೆಲ್ಲಿಸಿದ್ದೆ. ಜೆಡಿಎಸ್‌ನಲ್ಲಿ ೩೫ ಸಾವಿರದಷ್ಟಿದ್ದ ಮತಗಳಿಕೆ ೫೯ ಸಾವಿರಕ್ಕೆ ಏರಿಸಿದ್ದೇನೆ ಎಂದರು.

ರಾಜ್ಯ ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ, ಗುರುರಾಜ ಹುಣಶಿಮರದ, ರಾಜ್ಯ ವಕ್ತಾರೆ ಪೂರ್ಣಿಮಾ, ಅಳಕೋಡ ಹನುಮಂತಪ್ಪ, ವೀರಭದ್ರಪ್ಪ, ಶಿರಸಿಯ ಉಪೇಂದ್ರ ಪೈ, ಗುಲ್ಬರ್ಗದ ರೋಶನ್, ಹೊನ್ನಾವರದ ಸುಬ್ರಾಯ ಗೌಡ, ಶ್ರೀಪಾದ ನಾಯ್ಕ, ಮೋಹಿನಿ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಜಿ.ಕೆ.ಪಟಗಾರ, ಉಡುಪಿಯ ಉದಯ ಶೆಟ್ಟಿ, ವೀಣಾ ನಾಯ್ಕ ಇದ್ದರು.

ಕುಮಟಾ ತಾಲೂಕಾಧ್ಯಕ್ಷ ಸಿ.ಜಿ.ಹೆಗಡೆ, ಹೊನ್ನಾವರ ತಾಲೂಕಾಧ್ಯಕ್ಷ ಪಿ.ಟಿ.ನಾಯ್ಕ ಸ್ವಾಗತಿಸಿದರು. ದತ್ತ ಪಟಗಾರ, ಸತೀಶ ಮಹಾಲೆ ನಿರ್ವಹಿಸಿದರು. ಸದಸ್ಯತ್ವ ಅಭಿಯಾನಕ್ಕೂ ಮುನ್ನ ಗಿಬ್ ವೃತ್ತದಿಂದ ಪುರಭವನದ ವರೆಗೆ ಬೈಕ್ ಹಾಗೂ ರಿಕ್ಷಾ ರ‍್ಯಾಲಿಯ ಮೂಲಕ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆತರಲಾಯಿತು. ನಿಖಿಲ್ ಕುಮಾರಸ್ವಾಮಿ ಮಿರ್ಜಾನದ ಆದಿಚುಂಚನಗಿರಿ ಶಾಖಾ ಮಠಕ್ಕೆ ತೆರಳಿ ನಿಶ್ಚಲಾನಂದ ನಾಥ ಸ್ವಾಮೀಜಿ ಹಾಗೂ ಕೋನಳ್ಳಿಗೆ ತೆರಳಿ ಚಾತುರ್ಮಾಸ್ಯ ನಿರತ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ದರ್ಶನದೊಂದಿಗೆ ಆಶೀರ್ವಾದ ಪಡೆದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ