ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪಂಚಾಯಿತಿ ಅಧ್ಯಕ್ಷೆ ತಾರಾ ಸುದೀರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ರೆಸಾರ್ಟ್ ನಿರ್ಮಾಣದಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಶಿವಕುಮಾರ್, ರೋಷನ್ ಮತ್ತಿತರರು ಹೇಳಿದರು.
೨೦೧೮ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ಮಕ್ಕಳಗುಡಿಬೆಟ್ಟ ಕುಸಿದಿತ್ತು. ಈಗ ಪಕ್ಕದಲ್ಲೇ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ನೂರಾರು ಮರಗಳನ್ನು ಕಡಿದಿದ್ದಾರೆ. ಬೆಟ್ಟ ಕುಸಿದರೆ ಅನೇಕ ಮನೆಗಳು ಭೂಸಮಾಧಿಯಾಗಲಿವೆ ಎಂದು ಎಚ್ಚರಿಕೆ ನೀಡಿದರು. ಚರ್ಚೆಯ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು ಎಂದು ಅಧ್ಯಕ್ಷೆ ಸಭೆಗೆ ಭರವಸೆ ನೀಡಿದರು.ಕಿರಗಂದೂರು, ತಾಕೇರಿ, ಬಿಳಿಗೇರಿ ಗ್ರಾಮದಲ್ಲಿ ಕಾಫಿ ತೋಟದೊಳಗೆ ವಿದ್ಯುತ್ ಮಾರ್ಗ ಹಾದುಹೋಗಿದ್ದು, ಮಳೆಗಾಲದಲ್ಲಿ ಮರಬಿದ್ದರೆ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ. ವಿದ್ಯುತ್ ಮಾರ್ಗವನ್ನು ಮುಖ್ಯರಸ್ತೆ ಬದಿಯಲ್ಲಿ ಹಾಕಬೇಕು ಎಂದು ತಾಕೇರಿ ಗ್ರಾಮದ ಕುಟ್ಟಪ್ಪ ಬೇಡಿಕೆಯಿಟ್ಟರು.
ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿಲ್ಲ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕೂಡಲೆ ಕಿರಗಂದೂರು, ತಾಕೇರಿ, ಬಿಳಿಗೇರಿ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಪೊನ್ನಪ್ಪ ಆಗ್ರಹಿಸಿದರು.