ಔರಾದ ಪಾಲಿಟೆಕ್ನಿಕ್‌ನಲ್ಲಿ ಸಿಪಿ ಕೋರ್ಸ್‌ಗೆ ಅನುಮತಿ: ಪ್ರಭು ಚವ್ಹಾಣ

KannadaprabhaNewsNetwork | Published : Feb 5, 2024 1:50 AM

ಸಾರಾಂಶ

ನಮ್ಮ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ನಮ್ಮ ತಾಲೂಕಿನಲ್ಲಿಯೇ ಸಿಪಿ ಕೋರ್ಸ್ ಆರಂಭಿಸಬೇಕೆಂದು ಹಿಂದೆ ಸಚಿವನಾಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಯವರಿಗೆ ಮತ್ತು ಇಲಾಖೆಗೆ ಪತ್ರ ಬರೆದಿದ್ದೆ ಎಂದು ಶಾಸಕ ಪ್ರಭುಚವ್ಹಾಣ ಹೇಳಿದರು.

ಕನ್ನಡಪ್ರಭ ವಾರ್ತೆ ಔರಾದ್

ಔರಾದ್‌(ಬಿ) ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಮರ್ಷಿಯಲ್ ಪ್ರ್ಯಾಕ್ಟೀಸ್ (ಸಿಪಿ) ವಿಭಾಗ ತೆರೆಯಲು ಉನ್ನತ ಶಿಕ್ಷಣ ಇಲಾಖೆ ಅನುಮತಿ ನೀಡಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಪ್ರಭು.ಬಿ.ಚವ್ಹಾಣ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ ಔರಾದ(ಬಿ) ಪಾಲಿಟೆಕ್ನಿಕ್‌ನಲ್ಲಿ ಈಗಾಗಲೇ ಸಿವಿಲ್ ಇಂಜಿನೀಯರಿಂಗ್, ಅಟೋಮೇಶನ್ & ರೋಬೋಟಿಕ್ಸ್, ಅಲ್ಟರ್ನೆಟಿವ್ ಎನರ್ಜಿ ಟೆಕ್ನಾಲಜಿ ಹಾಗೂ ಮೆಕ್ಯಾನಿಕಲ್ ಇಂಜಿನೀಯರಿಂಗ್ ಕೋರ್ಸ್‌ಗಳಿವೆ. ಆದರೆ ಕಮರ್ಷಿಯಲ್ ಪ್ರ್ಯಾಕ್ಟೀಸ್ ಕೋರ್ಸ್‌ ಸಹ ಬೇಕೆಂದು ಅನೇಕ ವಿದ್ಯಾರ್ಥಿಗಳ ಬೇಡಿಕೆ ಇತ್ತು ಎಂದು ಹೇಳಿದರು.

ಈ ಕೋರ್ಸಿಗಾಗಿ ವಿದ್ಯಾರ್ಥಿಗಳು ಬೀದರ್‌ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು. ನಮ್ಮ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ನಮ್ಮ ತಾಲೂಕಿನಲ್ಲಿಯೇ ಸಿಪಿ ಕೋರ್ಸ್ ಆರಂಭಿಸಬೇಕೆಂದು ಹಿಂದೆ ಸಚಿವನಾಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಯವರಿಗೆ ಮತ್ತು ಇಲಾಖೆಗೆ ಪತ್ರ ಬರೆದಿದ್ದೆ. ನಂತರವೂ ಇಲಾಖೆ ಮೇಲೆ ನಿರಂತರ ಒತ್ತಡ ಹಾಕುತ್ತಲೇ ಬಂದಿದ್ದೆ. ನನ್ನ ನಿರಂತರ ಪ್ರಯತ್ನದಿಂದ ಹೊಸ ಕೋರ್ಸ್‌ ತೆರೆಯಲು ಅನುಮತಿ ಸಿಕ್ಕಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ಕೋರ್ಸ್ ಆರಂಭವಾಗಲಿದ್ದು, 30 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಕಮರ್ಷಿಯಲ್ ಪ್ರ್ಯಾಕ್ಟೀಸ್ ವಿಭಾಗಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್‌ನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮಾತ್ರ ಈ ಕೋರ್ಸ್‌ ಇರುವುದರಿಂದ 371( ಜೆ) ನಮ್ಮ ತಾಲೂಕಿನ ವಿದ್ಯಾರ್ಥಿಗಳಿಗೂ ಈಗ ಉದ್ಯೋಗವಕಾಶಗಳ ಬಾಗಿಲು ತೆರೆಯಲಿವೆ. ಈ ಕೋರ್ಸ್ ಪೂರ್ಣಗೊಳಿಸಿದವರು ಬಹುಬೇಗ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೀಘ್ರಲಿಪಿಗಾರರಾಗಿ, ದತ್ತಾಂಶ ನಮೂದು ಸಹಾಯಕರಾಗಿ ಹಾಗೂ ಖಾಸಗಿ ವಲಯದಲ್ಲಿ ವಿವಿಧ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.

Share this article