ಕನ್ನಡಪ್ರಭ ವಾರ್ತೆ ವಿಜಯಪುರ
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ನಮ್ಮ ಸಿದ್ದಸಿರಿ ಪವರ್ ಹಾಗೂ ಎಥೆನಾಲ್ ಕಾರ್ಖಾನೆ ಆರಂಭವಾಗುವುದರಿಂದ ನೂರಾರು ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ರೈತರ ಏಳಿಗೆಗೆ ನಾಂದಿಯಾಗುತ್ತದೆ ಎಂದು ಕಾರ್ಖಾನೆ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸುಪ್ರೀಂ ಕೋರ್ಟ್ ಆದೇಶಾನುಸಾರ ಚಿಂಚೋಳಿಯ ಸಿದ್ದಸಿರಿ ಪವರ್ ಹಾಗೂ ಎಥೆನಾಲ್ ಕಾರ್ಖಾನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ನಾಡದೇವತೆ ಮೈಸೂರು ಚಾಮುಂಡೇಶ್ವರಿ ದೇವಿಗೆ ಶಾಸಕ ಯತ್ನಾಳ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಾರ್ಖಾನೆ ಸ್ಥಗಿತದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಬ್ಬು ಬೆಳೆಯುವ ರೈತರು 100 ಕಿಮೀ ಹೆಚ್ಚು ದೂರದ ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗುವಂತಾಗಿತ್ತು. ಇದರಿಂದ ಗಾಡಿ ಬಾಡಿಗೆ ಹೊರೆಯಾಗುವ ಜೊತೆಗೆ ಸರಿಯಾದ ಸಮಯಕ್ಕೆ ಕಟಾವು ಮಾಡದೆ ಕಬ್ಬು ಒಣಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಲವು ರೈತರು ಕಬ್ಬು ಕಟಾವು ವಿಳಂಬದಿಂದ ಬೇಸತ್ತು ಸುಟ್ಟು ಹಾಕಿರುವ ಪ್ರಕರಣಗಳು ನಡೆದಿರುವುದು ಬೇಸರ ಸಂಗತಿಯಾಗಿತ್ತು ಎಂದು ಶಾಸಕರು ವಿಷಾದಿಸಿದ್ದಾರೆ.ಅಲ್ಲದೆ, ನಮ್ಮ ಸಿದ್ದಸಿರಿ ಘಟಕವು ರೈತರಿಗೆ ಅತೀ ಹೆಚ್ಚು ಬೆಲೆ ನೀಡುವ ಏಕೈಕ ಕಾರ್ಖಾನೆಯಾಗಿ ಆ ಭಾಗದಲ್ಲಿ ಹೊರಹೊಮ್ಮಿದಲ್ಲದೆ, ರೈತರಿಗೆ ತಕ್ಷಣವೇ ಕಬ್ಬಿನ ಬಿಲ್ ಪಾವತಿ ಮಾಡಲಾಗುತ್ತಿತ್ತು. ಇದನ್ನು ಸಹಿಸದ ಆ ಪ್ರದೇಶದಲ್ಲಿ ತಮ್ಮ ಸ್ವಂತ ಸಕ್ಕರೆ ಕಾರ್ಖಾನೆ ಹೊಂದಿರುವ ಸಚಿವರೊಬ್ಬರು, ಪರಿಸರ ಖಾತೆಯನ್ನು ಹೊಂದಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಭಾವ ಬೀರಿ ನಮ್ಮ ಕಾರ್ಖಾನೆ ಪ್ರಾರಂಭಕ್ಕೆ ಅಡೆತಡೆ ಉಂಟು ಮಾಡಿದ್ದರು. ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಕೂಡ ಕಾರ್ಖಾನೆಗೆ ಅನುಮತಿ ನೀಡಲು ಆದೇಶ ನೀಡುವ ಮೂಲಕ ಸತ್ಯಕ್ಕೆ ಜಯ ಸಿಕ್ಕಿತ್ತು. ನಂತರವೂ ಕೆಲ ದಿನಗಳ ಕಾಲ ಅನುಮತಿ ನೀಡಲು ವಿಳಂಬ ಮಾಡಿದ್ದರು. ಇದೀಗ ನಮ್ಮ ಕಾರ್ಖಾನೆಗೆ ಸುಪ್ರೀಂ ಕೋರ್ಟ್ ಆದೇಶಾನುಸಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದ್ದರಿಂದ ರೈತರ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗಿದೆ ಎಂದು ತಿಳಿಸಿದ್ದಾರೆ.