ವ್ಯಕ್ತಿ, ಕುಟುಂಬ ಕೇಂದ್ರಿತ ರಾಜಕಾರಣ ಮಾರಕ: ಸುಧೀಂದ್ರ

KannadaprabhaNewsNetwork | Updated : Apr 20 2024, 02:15 PM IST

ಸಾರಾಂಶ

ಏಕಚಕ್ರಾಧಿಪತ್ಯ ಪ್ರಜಾಪ್ರಭುತ್ವಕ್ಕೆ ಪೂರಕ ಅಲ್ಲ ಎಂದಿರುವ ಹಿರಿಯ ಪತ್ರಕರ್ತ ಸುಧೀಂದ್ರ ಕುಲಕರ್ಣಿ, ವ್ಯಕ್ತಿ, ಕುಟುಂಬ ರಾಜಕಾರಣವೂ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

 ಬೆಂಗಳೂರು :  ವ್ಯಕ್ತಿ ಮತ್ತು ಪರಿವಾರ ಕೇಂದ್ರಿತ ರಾಜಕಾರಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಏಕಚಕ್ರಾಧಿಪತ್ಯವೂ ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ ಎಂದು ಹಿರಿಯ ಪತ್ರಕರ್ತ ಸುಧೀಂದ್ರ ಕುಲಕರ್ಣಿ ಎಚ್ಚರಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಮತ್ತು ಪತ್ರಕರ್ತರು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಕ್ತಿ ಮತ್ತು ಪರಿವಾರ ಕೇಂದ್ರಿತ ರಾಜಕಾರಣವು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದಾಗಿದೆ. ಅದೇ ರೀತಿ ಏಕಚಕ್ರಾಧಿಧಿಪತ್ಯದ ನಾಯಕತ್ವವೂ ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ. ಇಂದಿರಾ ಗಾಂಧಿ ಅವರ ಕಾಲದಲ್ಲಿನ ತುರ್ತು ಪರಿಸ್ಥಿತಿಯ ಬಗ್ಗೆ ಉಲ್ಲೇಖಿಸಿದ ಅವರು, ಈಗ ಎಲ್ಲದಕ್ಕೂ ಮೋದಿ, ಮೋದಿ ಎಂಬ ವಾತಾವರಣ ನಿರ್ಮಾಣವಾಗಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟರು.

ವ್ಯಕ್ತಿ ಮತ್ತು ಪರಿವಾರ ಕೇಂದ್ರಿತ ರಾಜಕಾರಣ ಹಾಗೂ ಭ್ರಷ್ಟಾಚಾರದಿಂದ ಕಾಂಗ್ರೆಸ್‌ ಜನಮನ್ನಣೆ ಕಳೆದುಕೊಂಡಿದೆ. ಆತ್ಮಾವಲೋಕನ ಮಾಡಿಕೊಳ್ಳದಿರುವುದೂ ಕಾಂಗ್ರೆಸ್‌ ಅವನತಿಗೆ ಕಾರಣವಾಗಿದೆ. ಐಟಿ, ಇ.ಡಿ., ಸಿಬಿಐಗಳನ್ನು ಹಿಂದಿನ ಸರ್ಕಾರಗಳೂ ದುರುಪಯೋಗ ಮಾಡಿಕೊಂಡಿವೆ. ಆದರೆ ಇಂದು ಅದರ ಪ್ರಮಾಣ ಹೆಚ್ಚಾಗಿದೆ. ಹಿಂದೆ ಕಾಂಗ್ರೆಸ್‌ ಮಾಡಿದ ಕೆಲಸವನ್ನೇ ಈಗ ಬಿಜೆಪಿ ಮಾಡುತ್ತಿದೆ. ಇದು ಹೀಗೆಯೇ ಮುಂದುವರಿದರೆ ಕಾಂಗ್ರೆಸ್‌ ಪರಿಸ್ಥಿತಿಯೂ ಬಿಜೆಪಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಬಹಳ ಮುಖ್ಯವಾದುದು. ಕಾಂಗ್ರೆಸ್‌ನಲ್ಲಿ ಹಿಂದೆ ಕಾಣೆಯಾಗಿದ್ದ ಆಂತರಿಕ ಪ್ರಜಾಪ್ರಭುತ್ವ ಈಗ ಸ್ವಲ್ಪ ಕಾಣಿಸುತ್ತಿದೆ. ಆದರೆ ಬಿಜೆಪಿಯಲ್ಲಿ ಮಾಯವಾಗಿದ್ದು ಏಕವ್ಯಕ್ತಿ ನಿರ್ಧಾರಗಳೇ ಪ್ರಾಮುಖ್ಯತೆ ಪಡೆಯುತ್ತಿವೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಜನಸಂಘ ಸಾಕಷ್ಟು ಕೆಲಸ ಮಾಡಿತು. ರಾಜಕೀಯ ಪಕ್ಷವಾದ ಬಳಿಕ ಅಟಲ್‌ ಬಿಹಾರಿ ವಾಜಪೇಯಿ ಅದನ್ನು ಸಮರ್ಥವಾಗಿ ಮುನ್ನಡೆಸಿದರು. ಆದರೆ ಈಗ ಸಾಕಷ್ಟು ಬದಲಾವಣೆಗಳಾಗಿವೆ ಎಂದು ವ್ಯಾಖ್ಯಾನಿಸಿದರು.

ಇದೇ ಸಂದರ್ಭದಲ್ಲಿ ಸುಧೀಂದ್ರ ಕುಲಕರ್ಣಿ ಮತ್ತು ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಅವರನ್ನು ಗೌರವಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಎನ್.ನರಸಿಂಹಮೂರ್ತಿ ಹಾಜರಿದ್ದರು.

Share this article