ಕನ್ನಡಪ್ರಭ ವಾರ್ತೆ ಮೈಸೂರು
ನಗರದ ರಾಮಾನುಜ ರಸ್ತೆಯ ಜೆಎಸ್ಎಸ್ ಬಾಲಜಗತ್ ಆವರಣದಲ್ಲಿ ಚಿತ್ರಕಲಾ ಶಿಬಿರ ನಡೆಯುತ್ತದೆ.
ಈ ಶಿಬಿರಕ್ಕೆ ನಗರದ ವಿವಿಧ ಬಡಾವಣೆಗಳಿಂದ ವಿದ್ಯಾರ್ಥಿಗಳು ಬರುತ್ತಿರುವುದು ವಿಶೇಷ. ಏ. 3 ರಂದು ಪ್ರಾರಂಭವಾದ ಚಿತ್ರಕಲಾ ಶಿಬಿರ ಏ.22 ರಂದು ಮುಕ್ತಾಯವಾಗುತ್ತದೆ.ಶಿಬಿರವು ಮೂರು ವಿಭಾಗಗಳಲ್ಲಿ ಅಂದರೆ 1-4, 5-7, 8-11 ರವರೆಗಿನ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯುತ್ತಿದೆ. ಶಾಲೆಯ ಆವರಣದಲ್ಲಿ ಬೆಳೆದ ಬಹಳ ದೊಡ್ಡದಾದ ಮರದ ನೆರಳಿನಲ್ಲಿ ಚಿತ್ರಕಲಾ ಶಿಕ್ಷಕರು ಕುಳಿತು ಮಕ್ಕಳಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುವರು. ಮಕ್ಕಳೂ ಕೂಡ ಶಿಕ್ಷಕರ ಮಾರ್ಗದರ್ಶನದಂತೆ ಚಿತ್ರಗಳನ್ನು ತದೇಕ ಚಿತ್ತದಿಂದ ಬಿಡಿಸಿ ನಂತರ ಬಣ್ಣಗಳನ್ನು ತುಂಬಿ ಸಂಭ್ರಮಸುವ ಖುಷಿ ನೋಡಿಯೇ ಸಂತಸಪಡಬೇಕು. ಈ ಶಿಬಿರದಲ್ಲಿ ಚಿತ್ರಬಿಡಿಸುವ ವೇಳೆ ಪೆನ್ಸಿಲ್ ಬಳಕೆ, ಬ್ರಷ್ ಗಳ ಬಳಕೆಯ ವಿಶೇಷತೆಯನ್ನು ಮಕ್ಕಳಿಗೆ ತಿಳಿಸಿಕೊಡಲಾಗುತ್ತಿದೆ.
ಶಿಬಿರದಲ್ಲಿ ಒಂದು ದಿನ ಪ್ರಕೃತಿ ಚಿತ್ರ ಬಿಡಿಸುವ ಸಲುವಾಗಿ ಸೋಮನಾಥಪುರ, ಮುಡುಕುತೊರೆ, ಸುತ್ತೂರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಲಾಗುವುದು. ಒಟ್ಟು 8 ಜನ ಶಿಕ್ಷಕರ ನೇತೃತ್ವದಲ್ಲಿ ನಡೆಯುತ್ತಿರುವ ಶಿಬಿರದ ಸಮಾರೋಪ ಸಮಾರಂಭವು ಏ. 22ರಂದು ಬೆಳಗ್ಗೆ 10.30ಕ್ಕೆ ರಾಜೇಂದ್ರ ಭವನದಲ್ಲಿ ನಡೆಯಲಿದೆ. ಅಂದು ಮಕ್ಕಳು ಶಿಬಿರದಲ್ಲಿ ಬಿಡಿಸಿದ ಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಲಾಗುವುದು. ಜೊತೆಗೆ ಪ್ರತಿ ವಿಭಾಗದಲ್ಲೂ ಉತ್ತಮವಾಗಿ ಚಿತ್ರಿಸಿದ 3 ಚಿತ್ರಗಳಿಗೆ ನಗದು ಬಹುಮಾನ ನೀಡಿ ಕಲೆಗೆ ಉತ್ತೇಜನ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಹಾಗೂ ಇಲ್ಲಿಯವರೆಗೆ ಸುಮಾರು 900 ಮಕ್ಕಳು ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದಿರುವುದು ವಿಶೇಷ.
- ಎಸ್.ಎಂ. ಜಂಬುಕೇಶ್ವರ, ಹಿರಿಯ ಕಲಾವಿದರು ಹಾಗೂ ಶಿಬಿರದ ಸಂಚಾಲಕರು.