ಎಸ್‌ಟಿ ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಇನ್ ಸೈಟ್ಸ್ ಸಂಸ್ಥಾಪಕ ಜಿ.ಬಿ.ವಿನಯ್ ಸಲಹೆ
ಐಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ವ್ಯಕ್ತಿತ್ವ ವಿಕಸನವೂ ಅಷ್ಟೇ ಮುಖ್ಯವಾಗಿದ್ದು, ಬೆಳೆಯಲು ಅವಕಾಶವಿದ್ದ ಕಡೆ ಮಾತ್ರ ಬೆಳೆಯಲು ಸಾಧ್ಯ ಎಂದು ಬೆಂಗಳೂರಿನ ಇನ್ ಸೈಟ್ಸ್ ಐಎಎಸ್-ಐಪಿಎಸ್ ತರಬೇತಿ ಕೇಂದ್ರದ ಸಂಸ್ಥಾಪಕ ಜಿ.ಬಿ.ವಿನಯಕುಮಾರ ತಿಳಿಸಿದರು.
ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ವಾಲ್ಮೀಕಿ ನಾಯಕ ಎಸ್‌ಟಿ ಸಮುದಾಯದ ಎಸ್ಸೆಸ್ಸೆಲ್ಸಿ-ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಉನ್ನತ ಹುದ್ದೆ ಆಕಾಂಕ್ಷಿ ಅಭ್ಯರ್ಥಿಗಳು, ವಿದ್ಯಾರ್ಥಿಗಳು ನಿತ್ಯ ದಿನಪತ್ರಿಕೆ ಓದುವ, ಉತ್ತಮ ಕಾಲೇಜುಗಳ ಆಯ್ಕೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ಕೇವಲ ಪುಸ್ತಕದ ಬದನೆಕಾಯಿಯಿಂದ ಐಎಎಸ್, ಐಪಿಎಸ್ ಮಾಡಲಾಗದು. ಬದಲಾಗಿ ಆತ್ಮವಿಶ್ವಾಸ, ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಯೋಚನೆ ಬೆಳೆಸಿಕೊಂಡರೆ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.ವಿದ್ಯಾರ್ಥಿಗಳು ದೊಡ್ಡ ಕನಸುಗಳ ಕಾಣಬೇಕು. ಆ ಕನಸು ಸಾಕಾರಗೊಳ್ಳಲು ಶ್ರಮ, ಶ್ರದ್ಧೆಯನ್ನೂ ಮೈಗೂಡಿಸಿಕೊಳ್ಳಬೇಕು. ವಿಪರ್ಯಾಸವೆಂದರೆ ಇಂದು ಕನಸು ಕಾಣಲು ಜನರು ಹೆದರುವ ವಾತಾವರಣವಿದೆ. ಇದೆಲ್ಲದಕ್ಕೂ ಭಯಪಡದೇ, ನಿಮ್ಮ ಕನಸು, ಗುರಿ ನನಸಾಗಿಸಿಕೊಳ್ಳುವತ್ತ ನಿಮ್ಮ ಗಮನ ಕೇಂದ್ರೀಕರಿಸಬೇಕು. ನಮ್ಮ ಸಮಾಜ, ಕುಟುಂಬ ಯಾಕೆ ಹಿಂದುಳಿದಿದೆಯೆಂಬ ಬಗ್ಗೆ ಸ್ವಯಂ ಜಾಗೃತಿ ಮೂಡಬೇಕು. ಆಗ ಮಾತ್ರ ಸ್ವಯಂ ಬೆಳವಣಿಗೆ ಜತೆಗೆ ಸಮಾಜ ಬದಲಿಸಬಹುದು ಎಂದು ವಿನಯಕುಮಾರ ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಸಿ.ಶ್ರೀನಿವಾಸ ಮೂರ್ತಿ ಮಾತನಾಡಿ, ನಮ್ಮದು ಅತ್ಯಂತ ತಳ ಸಮುದಾಯ. ಮಕ್ಕಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಇನ್ನೂ ಹಿಂದುಳಿದಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ, ಜಾಗೃತರಾಗದಿದ್ದರೆ ಮಕ್ಕಳು ಹಿಂದುಳಿಯುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಸಮಾಜದ ಆಸ್ತಿಯಾಗಿ ರೂಪಿಸಬೇಕು ಎಂದು ಮನವಿ ಮಾಡಿದರು.
ರಾಜಕೀಯವಾಗಿ ಒಬ್ಬ ಯುವಕ ಮುಂದೆ ಬರಲು ಬಿಡುವುದಿಲ್ಲ. ಆತ ಎಲ್ಲಿ ಬೆಳೆದು ಬಿಡುತ್ತಾನೋ ಎಂಬ ಭಯವೋ ಅಥವಾ ಅಭದ್ರತೆಯೋ ಗೊತ್ತಿಲ್ಲ. ದೇಶದಲ್ಲಿ ಇಂತಹ ಜನರ ನಾವು ಕಾಣಬಹುದು. ಈಚೆಗಂತೂ ಕನಸು ಕಾಣುವುದಕ್ಕೂ ಭಯಪಡುವಂತಾಗಿದೆ. ಆದರೆ, ಯಾವುದಕ್ಕೂ ಧೃತಿಗೆಡದೇ ನಾವು ಮುನ್ನುಗ್ಗಬೇಕಿದೆ.
ಇನ್‌ಸೈಟ್ ಅಂದರೆ ಒಳದೃಷ್ಟಿಯೆಂದರ್ಥ, ಕೇವಲ 40 ವಿದ್ಯಾರ್ಥಿಗಳಿಂದ ಹುಟ್ಟುಹಾಕಿದ ಸಂಸ್ಥೆ ದೇಶದ 9 ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾ ರ್ಥಿಗಳಿಗೆ ಆಸರೆಯಾಗಿದೆ. ಜಮ್ಮು ಕಾಶ್ಮೀರದ ಶ್ರೀನಗರದಿಂದ ಬೆಂಗಳೂರುವರೆಗೂ ನಮ್ಮ ಸಂಸ್ಥೆ ಇದೆ 9 ವರ್ಷದಲ್ಲಿ 1200ಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳ ನೀಡಿದ ಸಂಸ್ಥೆ ತಮ್ಮದು. ಈಗ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ 10 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವೆ ಎಂದು ಇನ್‌ಸೈಟ್ಸ್ ಅಕಾಡೆಮಿಯ ಜಿ.ಬಿ.ವಿನಯಕುಮಾರ ಹೇಳಿದರು.