ಸಾಗರ: ಪೋಷಕರು ಮಕ್ಕಳಿಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಓದಿನ ಜೊತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸಹ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪೋಷಕರು ಮಕ್ಕಳ ಮೇಲೆ ಓದಿನ ಒತ್ತಡ ಹಾಕಬಾರದು. ಸಹಜವಾಗಿ ಮಕ್ಕಳು ಬುದ್ದಿವಂತರಾಗಿದ್ದು, ಪಠ್ಯವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅವರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಅಭಿವೃದ್ಧಿಗೆ ಮೈದಾನದಲ್ಲಿನ ಚಟುವಟಿಕೆ ತೀರ ಅಗತ್ಯ ಎಂದು ಹೇಳಿದರು.
ರಾಜ್ಯದಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದು, ಅದನ್ನು ಭರ್ತಿ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಸುಮಾರು ೧ಸಾವಿರ ದೈಹಿಕ ಶಿಕ್ಷಕರ ನೇಮಕಕ್ಕೆ ಸಿದ್ಧತೆ ನಡೆದಿದ್ದು ಸಾಗರಕ್ಕೂ ಸಹ ದೈಹಿಕ ಶಿಕ್ಷಕರ ನೇಮಕವಾಗಲಿದೆ. ನಮ್ಮ ಮಕ್ಕಳು ಕ್ರೀಡೆಯಲ್ಲಿ ಸ್ಥಳೀಯವಾಗಿರದೇ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ಮಿಂಚುವಂತೆ ಆಗಬೇಕು ಎಂದು ಕರೆ ನೀಡಿದರು.ಮುಖ್ಯ ಶಿಕ್ಷಕಿ ರೇಷ್ಮಾ ಅಧ್ಯಕ್ಷತೆ ವಹಿಸಿದ್ದರು. ಓಂಕಾರಪ್ಪ, ಭೂಮೇಶ್, ರಮೇಶ್, ಮಾಲತೇಶಪ್ಪ, ಮದನ್, ಗಣಪತಿ ಮಂಡಗಳಲೆ, ವಿಕ್ಟೋರಿಯಾ ಫರ್ನಾಂಡಿಸ್, ಡಾ. ಅನ್ನಪೂರ್ಣ ಇನ್ನಿತರರು ಹಾಜರಿದ್ದರು.