ಒಂದೇ ಕುಟುಂಬದ ಮೂವರು ಆತ್ಮಹತ್ಯೆ- ಶವಾಗಾರದ ಬಳಿ ಉದ್ವಿಗ್ನ, ಪ್ರತಿಭಟನೆ

KannadaprabhaNewsNetwork |  
Published : Jun 24, 2026, 01:15 AM IST
10 | Kannada Prabha

ಸಾರಾಂಶ

ಕುಟುಂಬಕ್ಕೆ ಪರಿಹಾರ ಒದಗಿಸುವುದರೊಂದಿಗೆ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ತಿಳಿಸುತ್ತೇನೆ ಎಂದು ಭರವಸೆ

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕೆ.ಆರ್. ಆಸ್ಪತ್ರೆ ಶವಾಗಾರದ ಬಳಿ ಮಂಗಳವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಮೃತರಾದ ಶಿವಣ್ಣ, ನಾಗರತ್ನ ಮತ್ತು ರಕ್ಷಿತಾ ಅವರ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಗ್ರಾಮಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ದಿಢೀರನೇ ಸಂಬಂಧಿಕರು ಹಾಗೂ ಗ್ರಾಮಸ್ಥರು ಪ್ರತಿಭಟಿಸಿದರು.ಮೂವರ ಸಾವಿಗೆ ಕಾರಣ ಎಂದು ಡೆತ್‌ ನೋಟ್‌ ನಲ್ಲಿ ಆರೋಪಿಸಲಾಗಿರುವ ಉಲ್ಲಾಸ್ ಗೌಡ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನಿಲ್ ಬೋಸ್, ಶಾಸಕ ಪುಟ್ಟರಂಗಶೆಟ್ಟಿ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು, ಜಿಲ್ಲಾ ಎಸ್ಪಿಯೊಂದಿಗೆ ಫೋನ್‌ ನಲ್ಲಿ ಮಾತನಾಡಿ ಮಾಹಿತಿ ಪಡೆದರು. ಈ ಕುರಿತು ಸರ್ಕಾರದ ಗಮನಕ್ಕೂ ತರಲಾಗುವುದು. ಕುಟುಂಬಕ್ಕೆ ಪರಿಹಾರ ಒದಗಿಸುವುದರೊಂದಿಗೆ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.ಆರೋಪಿ ಉಲ್ಲಾಸ್ ಗೌಡ ತಂದೆ ನನಗೂ ಸ್ನೇಹಿತ. ಇಲ್ಲಿಗೆ ಬರುವ ಮುನ್ನ ಅವರ ಜೊತೆ ಮಾತನಾಡಿದ್ದೇನೆ. ವಿವಾದಿತ ಜಾಗವನ್ನು ಮೃತರ ಕುಟುಂಬಕ್ಕೆ ಬರೆದು ಕೊಡುವುದಾಗಿ ಒಪ್ಪಿದ್ದಾರೆ. ನಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಒಪ್ಪಿಗೆ ಇದೆ ಎಂದು ಹೇಳಿದ್ದಾರೆ. ತಕ್ಷಣದಲ್ಲಿ ಎಲ್ಲವನ್ನು ಮಾಡಲು ಆಗಲ್ಲ. ಕಾನೂನು ಇದೆ, ಅದರ ಮೂಲಕ ಎಲ್ಲವನ್ನು ಸರಿ ಮಾಡುತ್ತೇವೆ ಎಂದು ಅವರು ಪ್ರತಿಭಟನಾಕಾರರ ಮನವೊಲಿಸಿದರು. 5 ಲಕ್ಷ ಪರಿಹಾರಇದೇ ವೇಳೆ ಶವಾಗಾರಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಸಾ.ರಾ. ಮಹೇಶ್ ಅವರು, ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೃತ ಶಿವಣ್ಣ ತಾಯಿಗೆ 5 ಲಕ್ಷ ನೀಡಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ದೆಹಲಿಯಿಂದ ಬಂದ ಬಳಿಕ ಅವರು ಮನೆಗೆ ಭೇಟಿ ನೀಡಲಿದ್ದಾರೆ ಎಂದರು.ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟ ಬಳಿಕ ಪೊಲೀಸರ ಸಮ್ಮುಖದಲ್ಲಿ ಆಂಬುಲೆನ್ಸ್ ಮೂಲಕ ಮೂವರ ಶವಗಳನ್ನು ಗ್ರಾಮಕ್ಕೆ ರವಾನಿಸಲಾಯಿತು. ಆರೋಪಿ ನ್ಯಾಯಾಂಗ ಬಂಧನಕ್ಕೆ ಒಂದೇ ಕುಟುಂಬದ ಮೂವರ ಆತ್ಮಹತ್ಯೆಗೆ ಕಾರಣನಾದ ಆರೋಪಿ ಉಲ್ಲಾಸ್ ಗೌಡ ಎಂಬಾತನನ್ನು ಟಿ. ನರಸೀಪರ ಠಾಣೆ ಪೊಲೀಸರು ಸೋಮವಾರ ರಾತ್ರಿಯೇ ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಖಾಸಗೀಕರಣ ನೇಕಾರರಿಗೆ ಕಂಟಕ
ಕೋಮುವಾದಕ್ಕೆ ಬಳಕೆಯಾಗುವ ಭಕ್ತಿ ಅಪ್ರಸ್ತುತ: ಕಾ.ತ.ಚಿಕ್ಕಣ್ಣ