ಕನ್ನಡಪ್ರಭ ವಾರ್ತೆ ಮೈಸೂರುಬ್ಲೂ– ನೀರು ಮತ್ತು ಗ್ರೀನ್– ಹಸಿರು ಈ ಎರಡು ಮೂಲಗಳು ನಗರ ಬೆಳವಣಿಗೆಯಲ್ಲಿ ಅಪಾಯ ಎದುರಿಸುತ್ತಿವೆ ಎಂದು ಮೈಸೂರು ಪ್ರಾದೇಶಿಕ ಆಯುಕ್ತ ಹಾಗೂ ನಗರ ಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.ಮಾನಸಗಂಗೋತ್ರಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್, ಐಟಿಪಿಐ- ಮೈಸೂರು ಕೇಂದ್ರ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ನಗರ ಪ್ರದೇಶಗಳಲ್ಲಿ ಬ್ಲೂ– ಗ್ರೀನ್ ನೆಟ್ ವರ್ಕ್ ಸುಧಾರಿಸುವ ತಂತ್ರಗಳು ಕುರಿತ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.ನಗರಗಳು ಆರ್ಥಿಕ ಬೆಳವಣಿಗೆಯ ಎಂಜಿನ್ ಗಳು. ಇದನ್ನು ರೂಪಿಸುವಲ್ಲಿ ವೈಜ್ಞಾನಿಕ, ಹವಾಮಾನ ಪ್ರಜ್ಞೆಯ ಯೋಜನೆ ಮುಖ್ಯ. ಪಾಲಿಕೆಯು ಸೌರ ಫಲಕಗಳ ಅಳವಡಿಕೆ, ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಜೈವಿಕ ಅನಿಲ ಘಟಕಗಳು, ಮಳೆನೀರು ಕೊಯ್ಲು ಸೌಲಭ್ಯಗಳ ಅಳವಡಿಕೆಗೆ ಪ್ರೋತ್ಸಾಹಿಸುತ್ತಿದೆ ಎಂದರು.ಮೈಸೂರು ಈಗ ತ್ವರಿತ ವಿಸ್ತರಣೆ, ಸಾರಿಗೆ ಒತ್ತಡ, ಉದಯೋನ್ಮುಖ ಸವಾಲುಗಳಿಗೆ ಸಾಕ್ಷಿಯಾಗುತ್ತಿದೆ. ಭವಿಷ್ಯ ಯೋಜನೆಯು ನೈಸರ್ಗಿಕ ವ್ಯವಸ್ಥೆಗಳನ್ನು ಸಂಯೋಜಿಸುವಂತಹ ತಂತ್ರ ಹೊಂದಿರಬೇಕು. ಹಸಿರು ಸ್ಥಳಗಳ ಬಲವರ್ಧನೆ, ಪಾದಚಾರಿ ಸ್ನೇಹಿ ಮಾರ್ಗ ಅಭಿವೃದ್ಧಿ, ಮುಕ್ತ ಸ್ಥಳಗಳ ಸಂರಕ್ಷಣೆಯು ಮೈಸೂರು ನಗರ ಯೋಜನೆಯಲ್ಲಿ ಅತ್ಯಗತ್ಯ ಮಾನದಂಡ ಎಂದು ಅವರು ಹೇಳಿದರು.ಪಾಲಿಕೆಯು ತ್ಯಾಜ್ಯದಿಂದ ಇಂಧನ ಉತ್ಪಾದಿಸಲು ಸುಮಾರು 7 ಎಕರೆ ಭೂಮಿಯನ್ನು ಗುರುತಿಸಿ ಯೋಜನೆ ಆರಂಭಿಸುತ್ತಿದೆ. ನೀಲಿ– ಹಸಿರು ಕಾರಿಡಾರ್ ಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಜನರನ್ನು ಪ್ರೋತ್ಸಾಹಿಸಲು ಹಸಿರು ಟ್ಯಾಗ್ ಉಪಕ್ರಮ ಜಾರಿಗೆ ತಂದಿದ್ದು, 33 ಅರ್ಜಿಗಳು ಬಂದಿವೆ ಎಂದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ನೀರು, ಹಸಿರು ಸ್ಥಳಗಳ ಉಳಿವಿನೊಂದಿಗೆ ನಗರಗಳನ್ನು ಸುಸ್ಥಿರವಾಗಿಸಲು ಸುಸ್ಥಿರ ಚಿಂತನೆಯು ಜನರ ವೈಯಕ್ತಿಕ ನಡವಳಿಕೆಯ ಭಾಗವಾಗಬೇಕು ಎಂದು ತಿಳಿಸಿದರು.ಐಟಿಪಿಐ ಮೈಸೂರು ಕೇಂದ್ರ ಸಂಚಾಲಕ ಬಿ. ಶಂಕರ್, ಶಾಲೆಯ ನಿರ್ದೇಶಕ ಪ್ರೊ.ಎಚ್.ಎಸ್. ಕುಮಾರ್, ಪ್ರೊ. ಪ್ರಮೋದ್ ಎಂ. ಗವಾರಿ, ಎಸ್.ಬಿ. ಹೊನ್ನೂರ್, ಪ್ರೊ.ಎಚ್.ಎನ್. ನಾಗೇಂದ್ರ, ಪ್ರೊ.ಎನ್. ಶ್ರೀಧರನ್, ಡಾ.ಎಸ್. ಯಶಸ್ವಿನಿ ಮೊದಲಾದವರು ಇದ್ದರು.