ಚನ್ನಗಿರಿ ಶಿಲಾಮಠಕ್ಕೆ ಪೆಟಾದಿಂದ ರೋಬೋಟ್‌ ಆನೆ ದಾನ

KannadaprabhaNewsNetwork |  
Published : Feb 23, 2025, 12:32 AM IST
ತಾಲೂಕಿನ ತಾವರೆಕೆರೆ ಶಿಲಾಮಠಕ್ಕೆ ಬರಲಿರುವ ರೋಬೂಟಿಕ್ ಆನೆ | Kannada Prabha

ಸಾರಾಂಶ

ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿರುವ ಶಿಲಾಮಠಕ್ಕೆ ಶ್ರೀ ಉಮಾಮಹೇಶ್ವರ ನಾಮಾಂಕಿತ ರೋಬೋಟ್ ಆನೆಯೊಂದನ್ನು ಮುಂಬೈ ಮೂಲಕ ಕ್ಯೂಪ-ಅಂಡ್ ಪೆಟಾ ಇಂಡಿಯಾ ಸಂಸ್ಥೆಯವರು ಫೆ.23ರ ಶಿಲಾಮಠಕ್ಕೆ ದಾನವಾಗಿ ನೀಡುತ್ತಿದ್ದಾರೆ.

- ಇಂದು ತಾವರಕೆರೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರಿಗೆ ಹಸ್ತಾಂತರ । ₹15 ಲಕ್ಷ ವೆಚ್ಚ, 900 ಕೆಜಿ ತೂಕದ ರೋಬೋಟ್‌ ಆನೆ

- - - ಬಾ.ರಾ.ಮಹೇಶ್ ಚನ್ನಗಿರಿ

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ತಾವರೆಕೆರೆ ಗ್ರಾಮದಲ್ಲಿರುವ ಶಿಲಾಮಠಕ್ಕೆ ಶ್ರೀ ಉಮಾಮಹೇಶ್ವರ ನಾಮಾಂಕಿತ ರೋಬೋಟ್ ಆನೆಯೊಂದನ್ನು ಮುಂಬೈ ಮೂಲಕ ಕ್ಯೂಪ-ಅಂಡ್ ಪೆಟಾ ಇಂಡಿಯಾ ಸಂಸ್ಥೆಯವರು ಫೆ.23ರ ಶಿಲಾಮಠಕ್ಕೆ ದಾನವಾಗಿ ನೀಡುತ್ತಿದ್ದಾರೆ.

ಭಾರತೀಯ ಧಾರ್ಮಿಕವಾದ ಸಂಸ್ಕೃತಿಯಲ್ಲಿ ಧಾರ್ಮಿಕ ಉತ್ಸವಗಳಿಗೆ ಆನೆಗಳನ್ನು ಬಳಸುತ್ತಿದ್ದ ಪದ್ಧತಿ ಪುರಾತನ ಕಾಲದಿಂದ ರೂಢಿಯಲ್ಲಿದೆ. ಧಾರ್ಮಿಕ ಪರಂಪರೆ ಹಾಗೂ ವನ್ಯಜೀವಿ ಕಾನೂನಿನ ನಡುವೆ ಅಡಚಣೆಗಳಾಗದಂತೆ ಮುಂಬೈ ಮೂಲಕ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಫಾರ್ ಅನಿಮಲ್ (ಪೆಟಾ) ಸಂಸ್ಥೆ ಮಠಗಳಿಗೆ ರೋಬೊಟ್ ಆನೆ ನೀಡಲು ಆರಂಭಿಸಿದ್ದೇವೆ ಎಂದು ಸಂಸ್ಥೆಯ ಕರ್ನಾಟಕ ಉಸ್ತುವಾರಿ ವ್ಯವಸ್ಥಾಪಕ ವಿಜಯಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದರು.

ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ದೇವಾಲಯ, ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಪೀಠ, ಸುತ್ತೂರು ಮಠ ಮತ್ತು ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿರುವ ಶಿಲಾಮಠ ಸೇರಿದಂತೆ ರಾಜ್ಯದಲ್ಲಿನ 4 ಮಠಗಳಿಗೆ ಇಂತಹ ಯಾಂತ್ರೀಕೃತವಾದ ರೋಬೋಟ್ ಆನೆಗಳನ್ನು ದಾನವಾಗಿ ನೀಡಿದ್ದಾರೆ.

₹15 ಲಕ್ಷ ವೆಚ್ಚ:

ಸುಮಾರು 11 ಅಡಿ ಎತ್ತರವಿರುವ ಈ ರೋಬೋ ಆನೆ, ಹದಿಮೂರುವರೆ ಅಡಿ (ಕೋರೆಯಿಂದ ಬಾಲದವರೆಗೆ) ಉದ್ದವಿದೆ. ಒಂದೂವರೆ ಅಡಿ ಎತ್ತದ ಟ್ರ್ಯಾಲಿ ನಿರ್ಮಾಣ ಮಾಡಲಾಗಿದೆ. ಈ ಆನೆ ನಿರ್ಮಾಣಕ್ಕೆ ₹15 ಲಕ್ಷ ವೆಚ್ಚ ಮಾಡಲಾಗಿದೆ. ಪ್ರಸಿದ್ಧ ಮಹೇಶ್ವರ ಜಾತ್ರೆ, ಮಠದ ಹಿರಿಯ ಗುರುಗಳ ಸ್ಮರಣೋತ್ಸವ, ಶಿವರಾತ್ರಿ ವೇಳೆ ಹಿರಿಯ ಶ್ರೀಗಳ ಭಾವಚಿತ್ರ ಮೆರವಣಿಗೆ ಮುಂತಾದ ಆಚರಣೆಗಳಿಗೆ ಈ ಆನೆ ಬಳಕೆಯಾಗಲಿದೆ.

ಈ ರೋಬೋಟ್ ಆನೆಯನ್ನು ಮುಟ್ಟಿದರೆ ನೈಜ ಆನೆಯನ್ನು ಮುಟ್ಟಿದಂಥ ಅನುಭವವಾಗುವುದು. ಜೊತೆಗೆ ಇದು ಕಣ್ಣು ಮಿಟುಕಿಸುವುದು ಬಾಲ ಮತ್ತು ಕಿವಿಗಳನ್ನು ಅಲ್ಲಾಡಿಸುವುದು, ಸೊಂಡಿಲು ಎತ್ತಿ ಆಶೀರ್ವಾದ ಮಾಡುವುದು. ನೈಜ ಆನೆಯಂತೆ ಘೀಳಿಡುವುದು. ಬ್ಯಾಟರಿ ಚಾಲಿತ ಟ್ರಾಲಿ ಮೂಲಕ ಈ ಆನೆಯು ಮುಂದಕ್ಕೆ ಸಂಚರಿಸುವ ತಂತ್ರಜ್ಞಾನ ಹೊಂದಿದೆ. ಸಿಲಿಕಾನ್ ಫೈಬರ್ ಮೆಟೀರಿಯಲ್‌ನಿಂದ ಆನೆಯನ್ನು ತಯಾರಿಸಲಾಗಿದೆ. 900 ಕೆ.ಜಿ. ತೂಕವಿರುವ ಈ ಆನೆಯ ಮೇಲೆ ಒಬ್ಬರು ಕುಳಿತು ಸಂಚರಿಸಬಹುದು ಎಂಬುದು ವಿಶೇಷ.

ಧಾರ್ಮಿಕ ಕಾರ್ಯಗಳಿಗೆ ಬಳಕೆ:

ಚನ್ನಗಿರಿ ತಾಲೂಕಿನ ಮಲೆನಾಡಿನ ಸೆರಗಿನಲ್ಲಿರುವ ಶಿಲಾಮಠದಲ್ಲಿ ಸರ್ವಧರ್ಮದವರನ್ನು ಗೌರವಿಸಲಾಗುತ್ತಿದೆ. ಶ್ರೀ ಮಠದಲ್ಲಿ ವರ್ಷದಲ್ಲಿ ಮಹಾಶಿವರಾತ್ರಿ, ಉಮಾಮಹೇಶ್ವರ ಜಾತ್ರೆ, ಶ್ರಾವಣ ಮಾಸದ ಪೂಜೆ, ಶ್ರೀ ಮಠದ ಲಿಂಗೈಕ್ಯ ಶ್ರೀಗಳವರ ವಾರ್ಷಿಕ ಪುಣ್ಯ ಆಚರಣೆ ಮತ್ತು ಈ ಭಾಗದ ಅಸಂಖ್ಯಾತ ಭಕ್ತರಿಗೆ ಶ್ರದ್ಧಾ-ಭಕ್ತಿಯ ಕೇಂದ್ರವಾಗಿದೆ. ವೀರಶೈವ ಗುರು ಪರಂಪರೆಯ ಶ್ರೀ ರಂಭಾಪುರಿ ಪೀಠಕ್ಕೆ ಒಳಪಡುವ ಶಿಲಾಮಠ ಇದಾಗಿದೆ. ಇಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯ ಮತ್ತು ಭಕ್ತಸಮೂಹವನ್ನು ಸನ್ಮಾರ್ಗದಲ್ಲಿ ಮುನ್ನಡೆಯುತ್ತಿರುವ ಈ ಮಠ ಭಾವೈಕ್ಯತೆಯ ಸಂಕೇತವಾಗಿದೆ. ಈಗ ಈ ಯಾಂತ್ರಿಕ ಆನೆಯು ಶ್ರೀಮಠದ ವಿಶೇಷ ಆಕರ್ಷಣೆಯಾಗಿದ್ದು, ಧಾರ್ಮಿಕ ಆಚರಣೆಗಳಲ್ಲಿ ಬಳಕೆಯಾಗಲಿದೆ.

ಕಾಡು ಪ್ರಾಣಿಗಳನ್ನು ಹಿಡಿದು ತಂದು ಇಚ್ಛಾನುಸಾರ ಬಳಕೆ ಮಾಡಿಕೊಳ್ಳುವುದು ವಿಷಾದಕರವಾಗಿದೆ. ವನ್ಯಜೀವಿಗಳ ಸಂರಕ್ಷಣೆಯೂ ಆಗಬೇಕು, ಅವುಗಳಿಗೂ ಸ್ವತಂತ್ರವೂ ಇರಬೇಕು ಎನ್ನುವ ನಿಟ್ಟಿನಲ್ಲಿ ಪೆಟಾ ಸಂಸ್ಥೆ ಧಾರ್ಮಿಕ ಕಾರ್ಯಕ್ರಮಗಳಿಗೆ ಧಕ್ಕೆ ಬಾರದಂತೆ ನೈಜ ಆನೆಯ ಪ್ರತಿರೂಪದಂತೆಯೇ ಚಲನವಲನ ಹೊಂದಿರುವ ರೋಬೋಟ್ ಆನೆಯನ್ನು ತಯಾರು ಮಾಡಿ, ಮಠಗಳಿಗೆ ದಾನವಾಗಿ ನೀಡಲಾಗಿದೆ. ಈ ಆನೆಯನ್ನು ಧಾರ್ಮಿಕ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಶಿಲಾಮಠದ ಶ್ರೀಗಳು ತಿಳಿಸಿದ್ದಾರೆ.

- - - (ಕೋಟ್‌)

ಅರಣ್ಯದಲ್ಲಿರುವ ಪ್ರಾಣಿಗಳು ಕಾಡಿನಲ್ಲಿಯೇ ಇದ್ದರೆ ಅವುಗಳು ಸ್ವತಂತ್ರವಾಗಿ ಸ್ವಚ್ಛಂದವಾಗಿ ಜೀವಿಸುತ್ತವೆ. ಕಾಡು ಪ್ರಾಣಿಗಳ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿ, ಅವುಗಳನ್ನು ಕಾಡಿನಿಂದ ತಂದು ಪಳಗಿಸಿ, ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವುದು ವನ್ಯಜೀವಿ ಕಾಯ್ದೆಗಳನ್ನು ಉಲ್ಲಂಘಿಸಿದಂತಾಗುತ್ತದೆ. ಇದರ ಬದಲು ರೋಬೋಟ್‌ ಆನೆ ಬಳಕೆ ಎಲ್ಲ ದೃಷ್ಟಿಯಿಂದಲೂ ಸೂಕ್ತ ಎನಿಸಿದೆ

- ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀ, ಶಿಲಾಮಠ

- - -

-21ಕೆಸಿಎನ್‌ಜಿ1.ಜೆಪಿಜಿ:

ಚನ್ನಗಿರಿ ತಾಲೂಕಿನ ತಾವರೆಕೆರೆ ಶಿಲಾಮಠಕ್ಕೆ ಬರಲಿರುವ ರೋಬೋಟಿಕ್ ಆನೆ.

-21ಕೆಸಿಎನ್‌ಜಿ2: ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ