ಚವ್ಹಾಣ್‌ ವಿರುದ್ಧದ ಅರ್ಜಿ 2ನೇ ಬಾರಿಗೆ ವಜಾ

KannadaprabhaNewsNetwork |  
Published : May 22, 2026, 02:00 AM IST
ಚವ್ಹಾಣ್‌ | Kannada Prabha

ಸಾರಾಂಶ

ಮೂಲ ನಿವಾಸ ಸ್ಥಳ ಹಾಗೂ ಜಾತಿ ಮೂಲ ಪ್ರಶ್ನಿಸಿ ಸಲ್ಲಿಸಿದ್ದ ಮಾಜಿ ಸಚಿವ, ಔರಾದ್ ಶಾಸಕ ಪ್ರಭು ಚವ್ಹಾಣ್ ವಿರುದ್ಧದ ಅರ್ಜಿ ಮತ್ತೊಮ್ಮೆ ಸುಪ್ರೀಂಕೋರ್ಟ್ ನಲ್ಲಿ ವಜಾಗೊಂಡಿದೆ. ಹೀಗಾಗಿ, ಒಂದೇ ವಿವಾದದ ತಕರಾರಿನಲ್ಲಿ ಶಾಸಕರಿಗೆ ಎರಡು ಬಾರಿ ಸುಪ್ರೀಂಕೋರ್ಟ್ ನಲ್ಲಿ ಜಯ ದೊರಕಿರುವುದು ಭಾರಿ ಮಹತ್ವ ಪಡೆದಿದೆ.

ಕನ್ನಡಪ್ರಭ ವಾರ್ತೆ ಔರಾದ್:

ಮೂಲ ನಿವಾಸ ಸ್ಥಳ ಹಾಗೂ ಜಾತಿ ಮೂಲ ಪ್ರಶ್ನಿಸಿ ಸಲ್ಲಿಸಿದ್ದ ಮಾಜಿ ಸಚಿವ, ಔರಾದ್ ಶಾಸಕ ಪ್ರಭು ಚವ್ಹಾಣ್ ವಿರುದ್ಧದ ಅರ್ಜಿ ಮತ್ತೊಮ್ಮೆ ಸುಪ್ರೀಂಕೋರ್ಟ್ ನಲ್ಲಿ ವಜಾಗೊಂಡಿದೆ. ಹೀಗಾಗಿ, ಒಂದೇ ವಿವಾದದ ತಕರಾರಿನಲ್ಲಿ ಶಾಸಕರಿಗೆ ಎರಡು ಬಾರಿ ಸುಪ್ರೀಂಕೋರ್ಟ್ ನಲ್ಲಿ ಜಯ ದೊರಕಿರುವುದು ಭಾರಿ ಮಹತ್ವ ಪಡೆದಿದೆ.

ಶಾಸಕ ಪ್ರಭು ಚವ್ಹಾಣ್ ಅವರು ಮಹಾರಾಷ್ಟ್ರ ಮೂಲದವರು. ಮಹಾರಾಷ್ಟ್ರದಲ್ಲಿ ಲಂಬಾಣಿ ಸಮಾಜವು ವಿಮುಕ್ತ ಜಾತಿ (ವಿಜೆ-ಎ) ಮೀಸಲಾತಿ ಹೊಂದಿದೆ. ಆದರೆ, ಇವರು ಬೀದರ್ ಜಿಲ್ಲೆಯ ಬೋಂತಿ ತಾಂಡಾ ಮೂಲದವರೆಂದು ರಹವಾಸಿ ಪತ್ರ ಪಡೆದು, ಲಂಬಾಣಿ ಸಮಾಜ ಇಲ್ಲಿ ಹೊಂದಿರುವ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಸೌಲಭ್ಯದ ಮೇಲೆ 2008ರಿಂದ ಔರಾದ್ ಕ್ಷೇತ್ರದ ಶಾಸಕರಾಗುತ್ತಿದ್ದಾರೆ. ಹೀಗಾಗಿ, ಮೀಸಲು ಸೌಲಭ್ಯ ದುರ್ಬಳಕೆ ಮಾಡಿಕೊಂಡ ಇವರ ಶಾಸಕತ್ವ ಅನರ್ಹಗೊಳಿಸಬೇಕೆಂದು ಕೋರಿ ಕಮಲನಗರ ತಾಲೂಕಿನ ಹಾಲಹಳ್ಳಿ ಗ್ರಾಮದ ನರಸಿಂಗ ತುಕಾರಾಮ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಚವ್ಹಾಣ್ ಅವರ ಜಾತಿ ಮೂಲ ಮತ್ತು ಮೂಲ ನಿವಾಸದ ಬಗ್ಗೆಯೇ ಕ್ಯಾತೆ ತೆಗೆದು ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ವಿಜಯಕುಮಾರ ಕೌಡ್ಯಾಳ್ ಮತ್ತು ಬೀದರ್‌ನ ರವೀಂದ್ರ ಕಲ್ಲಯ್ಯ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು 2023ರ ಮೇ 1ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಇದಾದ ಬಳಿಕ ಮತ್ತೆ ಇದೇ ವಿಷಯ ಪ್ರಶ್ನಿಸಿ ನರಸಿಂಗ ತುಕಾರಾಮ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು (2026ರಮೇ 6ರಂದು) ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಸುಪ್ರೀಂಕೋರ್ಟ್‌ ನ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ನ್ಯಾ.ಸತೀಶಚಂದ್ರ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಶಾಸಕ ಚವ್ಹಾಣ್ ಪರವಾಗಿ ನೀಡಿದ್ದ ತೀರ್ಪನ್ನು ಎರಡನೇ ಬಾರಿಗೆ ಎತ್ತಿ ಹಿಡಿದಿದೆ.

ಚವ್ಹಾಣ್ ಅವರ ಜನ್ಮಸ್ಥಳ, ವಿದ್ಯಾಭ್ಯಾಸ, ಎಸ್‌ಸಿ ಜಾತಿ ಪ್ರಮಾಣಪತ್ರ ಸ್ವೀಕಾರ, ಮತದಾರ ಪಟ್ಟಿಯಲ್ಲಿನ ಹೆಸರು... ಹೀಗೆ ಎಲ್ಲ ಪರಿಶೀಲನೆ ವೇಳೆ ಇವರು ಸ್ಥಳೀಯರು ಹಾಗೂ ಲಂಬಾಣಿ ಎಸ್‌ಸಿ ಸಮಾಜದವರು ಎಂಬುದು ಸ್ಪಷ್ಟವಾಗಿದೆ. ಸಮಾಜ ಕಲ್ಯಾಣ, ಕಂದಾಯ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ, ಡಿಸಿ ನ್ಯಾಯಾಲಯ ಸಹ ಇದನ್ನು ಸ್ಪಷ್ಟಪಡಿಸಿವೆ. ಹೈಕೋರ್ಟ್ ನಲ್ಲಿನ ತೀರ್ಪು ಸಹ ಚವ್ಹಾಣ್ ಪರವಾಗಿ ಬಂದಿದೆ. ಹೀಗಾಗಿ, ಸುಪ್ರೀಂಕೋರ್ಟ್ ಹೈಕೋರ್ಟ್‌ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವೇ ಇಲ್ಲ ಎಂದು ಕಡಕ್ ಆದೇಶ ನೀಡಿ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.ನಾನು ಕನ್ನಡಿಗ: ಚವ್ಹಾಣ್‌

ನಾನು ಕನ್ನಡಿಗ, ಕರ್ನಾಟಕದವನು. ಇಲ್ಲೇ ಹುಟ್ಟಿ, ಬೆಳೆದಿದ್ದೇನೆ. ವಿನಾಕಾರಣ ನನ್ನ ಜಾತಿ, ನಿವಾಸದ ಮೂಲ ಕೆದಕಿ ವಿವಾದ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಹೈಕೋರ್ಟ್ ಎರಡು ಸಲ ನನ್ನ ಪರವಾಗಿ ತೀರ್ಪು ಕೊಟ್ಟಿದೆ. ಇದೀಗ ಸುಪ್ರೀಂಕೋರ್ಟ್ ಸಹ ಮತ್ತೊಮ್ಮೆ ನನ್ನ ವಿರುದ್ಧದ ಅರ್ಜಿ ವಜಾಗೊಳಿಸಿದೆ. ಇದು ಸತ್ಯಮೇವ ಜಯತೆ ಎಂದು ಶಾಸಕ ಪ್ರಭು ಚವ್ಹಾಣ್ ಅವರು ಪ್ರತಿಕ್ರಿಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರವಾಡ ಮಹಾನಗರ ಪಾಲಿಕೆ ನಾಮಫಲಕ ಅಳವಡಿಕೆ!
ಉಪ್ಪಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿ: ಪುರುಷೋತ್ತಮಾನಂದಪುರಿ ಶ್ರೀ