ಕೊಪ್ಪಳ:
ಈಗಾಗಲೇ ಸಲ್ಲಿಕೆಯಾಗಿರುವ ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಯಿತು.ರಾಜ್ಯ ಸರ್ಕಾರಿ ನೌಕರರು ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೇ ಮಾಡುವ ಮೂಲಕ ಸುಗಮ ಆಡಳಿತಕ್ಕಾಗಿ ಸದಾ ಶ್ರಮಿಸುತ್ತಿದ್ದಾರೆ. ಆದರೆ, ನಿಯಮಾನುಸಾರ ವೇತನ ಪರಿಷ್ಕರಣೆ ಮಾಡುವ ಮೂಲಕ ನೌಕರರ ಹಿತ ಕಾಯಬೇಕಾಗಿದೆ. ಹೀಗಾಗಿ, ಈಗಾಗಲೇ ಏಳನೇ ವೇತನ ಆಯೋಗದ ವರದಿ ಜಾರಿ ಮಾಡುವಂತೆ ಹೋರಾಡಿದ ಫಲವಾಗಿ ಆಯೋಗ ರಚನೆ ಮಾಡಿ, ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಆದರೆ, ಆಯೋಗದ ವರದಿಯನುಸಾರ ಇದುವರೆಗೂ ಜಾರಿ ಮಾಡಿ, ವೇತನ ಹೆಚ್ಚಳ ಮಾಡಿಲ್ಲ. ಇದರಿಂದ ನೌಕರರ ಬದುಕು ನಿರ್ವಹಣೆ ಕಷ್ಟವಾಗುತ್ತಿದೆ. ದುಬಾರಿ ಜಗತ್ತಿನಲ್ಲಿ ಈಗ ನೀಡುತ್ತಿರುವ ವೇತನ ಯಾವುದಕ್ಕೂ ಸಾಲುತ್ತಿಲ್ಲ. ಹೆಚ್ಚುತ್ತಿರುವ ಮಾರುಕಟ್ಟೆ ದರಕ್ಕನುಗುಣವಾಗಿ ಕಾಲಕಾಲಕ್ಕೆ ವೇತನ ಪರಿಷ್ಕರಣೆ ಮಾಡಬೇಕು. ಆದರೆ, ಈಗ ವಿಳಂಬ ಮಾಡುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ ಎಂದು ನೌಕರರು ಮನವಿಯಲ್ಲಿ ವಿವರಿಸಿದ್ದಾರೆ.
ಸಾಂಕೇತಿಕ ಪ್ರತಿಭಟನೆಯ ಮೂಲಕ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಹಾಗೂ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ನಮ್ಮ ಬೇಡಿಕೆ ನ್ಯಾಯಯುತವಾಗಿದ್ದು, ಕೂಡಲೇ ಜಾರಿ ಮಾಡದಿದ್ದರೆ ರಾಜ್ಯವ್ಯಾಪಿ ಹೋರಾಟಕ್ಕೆ ಈಗಾಗಲೇ ರಾಜ್ಯ ಸಮಿತಿಯ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಸರ್ಕಾರ ಅದಕ್ಕೆ ಅವಕಾಶ ನೀಡದೆ ವೇತನ ಹೆಚ್ಚಳ ಮಾಡಿ, ಆದೇಶ ಮಾಡುವಂತೆ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ, ಜಿಲ್ಲಾ ಕಾರ್ಯದರ್ಶಿ ಶಂಕರಗೌಡ ಮಾಲಿಪಾಟೀಲ್, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಖಜಾಂಚಿ ವೆಂಕಟೇಶ ಕುಲಕರ್ಣಿ, ನಿರ್ದೇಶಕರಾದ ವಂದನಾ, ಶಾಂತಾ ಚೌಡ್ಕಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಗೌಡ ಹಲಿಗೇರಿ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಇದ್ದರು.