ಕೊಪ್ಪಳ: ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಸಂವಿಧಾನ ತಿದ್ದುಪಡಿ ಮಾಡಿ ನೀಡಿರುವ 371 ಜೆ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಜು. 22ರಂದು ಕೊಪ್ಪಳ ನಗರದಲ್ಲಿ ಬೃಹತ್ ಹೋರಾಟ ಮಾಡಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನಿರ್ಧರಿಸಿದೆ.
ಹಿರಿಯ ವಕೀಲರಾದ ಆರ್.ಬಿ. ಪಾನಘಂಟಿ, ಆಸಿಫ್ ಅಲಿ, ಪೀರಾಹುಸೇನ ಹೊಸಳ್ಳಿ, ವಿ.ಎಂ. ಭೂಸನೂರುಮಠ ಅವರು ಮಾತನಾಡಿ, ಹತ್ತು ವರ್ಷವಾದರೂ 371 ಜೆ ಉದ್ದೇಶ ಈಡೇರಿಲ್ಲ. ಈಗಲೂ ಅನ್ಯಾಯವಾಗುತ್ತಲೇ ಇದ್ದು, ಇದಕ್ಕೆ ಪಕ್ಷಾತೀತವಾಗಿ ಹೋರಾಟ ನಡೆಯಬೇಕು ಎಂದರು.
ಮುಖಂಡರಾದ ವೀರೇಶ ಮಹಾಂತಯ್ಯನಮಠ ಮಾತನಾಡಿ, ಇಷ್ಟು ವರ್ಷಗಳ ಕಾಲ ಆಗುತ್ತಿದ್ದ ಅನ್ಯಾಯ ಸರಿಯಾಗುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಈಗಲೂ ಅನ್ಯಾಯ ಮುಂದುವರಿದಿರುವುದರಿಂದ ಹೋರಾಟ ತೀವ್ರಗಳಿಸುವ ಅಗತ್ಯವಿದೆ ಎಂದರು.ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಇನ್ನು ಎಷ್ಟು ದಿನಗಳು ಅಂತಾ ಹೋರಾಟ ಮಾಡುವುದು ಎಂದು ಪ್ರಶ್ನೆ ಮಾಡಿದರು. ಒಂದಲ್ಲ, ಎರಡಲ್ಲ, ನೂರಾರು ಅನ್ಯಾಯಗಳು ಆಗುತ್ತವೆ. ಹೀಗಾಗಿ, ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಮಾಡಲು ಸಿದ್ಧರಾಗಬೇಕಾಗಿದೆ. ಸರ್ಕಾರ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟಕ್ಕೂ ಹಿಂಜರಿಯಬಾರದು ಎಂದರು.
ಪ್ರಹ್ಲಾದ ಅಗಳಿ, ಕಲ್ಯಾಣ ಕರ್ನಾಟಕ ಸಮಿತಿ ಯುವ ಘಟಕದ ಅಧ್ಯಕ್ಷ ರಮೇಶ ತುಪ್ಪದ, ಶರಣಪ್ಪ ಜಡಿ, ಶರಣಪ್ಪ ಬಾಚಲಾಪುರ, ಸಂತೋಷ ದೇಶಪಾಂಡೆ, ನಿರ್ಮಲಾ ಬಳ್ಳೊಳ್ಳಿ, ಶಿವಕುಮಾರ ಕುಕನೂರು, ಗಿರೀಶ ಪಾನಘಂಟಿ, ಹುಲಗಪ್ಪ ಕಟ್ಟಿಮನಿ, ಕೃಷ್ಣ ಕಬ್ಬೇರಿ, ಸೋಮನಗೌಡ, ರವೀಂದ್ರ, ಅನಿಲ ಬಾಚನಳ್ಳಿ, ಬಸವರಾಜ ತಳಕಲ್, ರಮೇಶ ಕವಲೂರು, ಬಸವರಾಜ ಕಮಲಾಪುರ, ಶರಣಪ್ಪ ಕಡ್ಡಿಪುಡಿ ಇದ್ದರು.