ವಿಶ್ವ ಹಿಂದೂ ಪರಿಷತ್, ಗೋ ರಕ್ಷಾ ಘಟಕ ಹಾಗೂ ಭಜರಂಗ ದಳ ಸ್ಥಳೀಯ ಘಟಕದ ವತಿಯಿಂದ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ
ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ–2020ನ್ನು ರಾಜ್ಯ ಸರ್ಕಾರ ತಿದ್ದುಪಡಿ ಪ್ರಸ್ತಾವನೆಯನ್ನು ಹಿಂಪಡೆಯಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಗೋ ರಕ್ಷಾ ಘಟಕ ಹಾಗೂ ಭಜರಂಗ ದಳ ಸ್ಥಳೀಯ ಘಟಕದ ವತಿಯಿಂದ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
2020ರಲ್ಲಿ ಕಾಯಿದೆ ಜಾರಿಯಾದ ನಂತರ ಗೋವುಗಳ ಅಕ್ರಮ ಸಾಗಾಟ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದರೂ, ಸರ್ಕಾರ ತಿದ್ದುಪಡಿ ತರಲು ಹೊರಟಿರುವ ಕಾಯ್ದೆಯಲ್ಲಿ ಅಕ್ರಮ ಪಶು ಸಾಗಾಟಗಾರರಿಗೆ ಪುನಃ ಅವಕಾಶ ನೀಡುವಂತಿದೆ. ವಶಪಡಿಸಿಕೊಂಡ ವಾಹನಗಳನ್ನು ಬ್ಯಾಂಕ್ ಗ್ಯಾರಂಟಿ ಪಡೆಯದೇ ತಾತ್ಕಾಲಿಕವಾಗಿ ಹಿಂತಿರುಗಿಸುವಂತಿರುವ ತಿದ್ದುಪಡಿ, ಕಾನೂನಿನ ಗಂಭೀರತೆ ಕಳೆದುಕೊಳ್ಳುವಂತಿದೆ. ಇದು ಗೋಹಿಂಸೆಗೆ ಉತ್ತೇಜನ ನೀಡಬಹುದಾಗಿದೆ. ಗೋವುಗಳನ್ನು ಒಂದೇ ವಾಹನದಲ್ಲಿ ತುಂಬಿ ಕ್ರೂರವಾಗಿ ಸಾಗಿಸುವ ಪ್ರಕರಣಗಳನ್ನು ತಡೆಯುವುದೇ ಈ ಕಾಯಿದೆಯ ಉದ್ದೇಶ. ಆದರೆ ಸರ್ಕಾರ ತರಲಿರುವ ತಿದ್ದುಪಡಿ ಗೋಸಂರಕ್ಷಣೆಯ ಆತ್ಮಕ್ಕೆ ವಿರುದ್ಧ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಜೀವಿಗಳಿಗೆ ಕರುಣೆ ತೋರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಸರ್ಕಾರದ ಕ್ರಮ ಸಂವಿಧಾನದ ಆತ್ಮವೇ ಪ್ರಶ್ನಿಸಲು ಕಾರಣವಾಗಿದೆ. ಹಿಂದೂಗಳಿಗೆ ಪೂಜ್ಯವಾದ ಗೋವುಗಳ ಮೇಲೆ ಹಿಂಸೆ ಹೆಚ್ಚಾದರೆ ಸಮಾಜದಲ್ಲಿ ಉದ್ವಿಗ್ನತೆ ಉಂಟಾಗುವ ಸಂಭವ ಇದೆ. ಆದ್ದರಿಂದ ಸರ್ಕಾರ ತಿದ್ದುಪಡಿ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಮಂಡಿಸದೆ ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.ಮನವಿ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಸ್ವೀಕರಿಸಿದರು. ಈ ಸಂದರ್ಭ ಬಜರಂಗದಳ ಸಂಯೋಜಕ ನಾಗರಾಜ ನಾಯ್ಕ, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಹಕಾರ್ಯದರ್ಶಿ ದಿನೇಶ ಗವಾಳಿ, ಪ್ರಮುಖರಾದ ದೀಪಕ್ ನಾಯ್ಕ, ಕೇಶವ ನಾಯ್ಕ, ಶ್ರೀನಿವಾಸ ನಾಯ್ಕ, ಸುರೇಂದ್ರ ಪೂಜಾರಿ, ಕೃಷ್ಣ ಕಂಚುಗಾರ ಮುಂತಾದವರಿದ್ದರು.