ಅನಧಿಕೃತ ಲೇಔಟ್-ಕಾನೂನು ಕ್ರಮ ಜರುಗಿಸಲು ಒತ್ತಾಯ

KannadaprabhaNewsNetwork | Published : Aug 1, 2024 12:27 AM

ಸಾರಾಂಶ

ರಾಣಿಬೆನ್ನೂರು ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅನಧಿಕೃತ ಲೇಔಟ್ ನಿರ್ಮಾಣ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅನಧಿಕೃತ ಲೇಔಟ್ ನಿರ್ಮಾಣ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬುಧವಾರ ಸಾರ್ವಜನಿಕರು ಗ್ರೇಡ್-2 ತಹಸೀಲ್ದಾರ್ ರಘು ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅನಧಿಕೃತ ಲೇಔಟ್ ನಿರ್ಮಾಣ ಮಾಡುತ್ತಿರುವವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ನಗರದ ಸರ್ವೆ ನಂ. 404/3 ಸೇರಿದಂತೆ ಇತರ ಕಡೆಗಳಲ್ಲಿ ಹಾಗೂ ಗ್ರಾಮೀಣ ಭಾಗದ ಕೂನಬೇವು, ಹೂಲಿಹಳ್ಳಿ, ಕಮದೋಡ, ಮಾಗೋಡ ಮತ್ತು ಗಂಗಾಜಲ ತಾಂಡಾದ ಅಕ್ಕಪಕ್ಕ ಮೆಡೇರಿ, ಅರೇಮಲ್ಲಾಪುರ, ಹಲಗೇರಿ ಗ್ರಾಮಗಳ ಹೊರವಲಯದ ಫಲವತ್ತಾದ ಭೂಮಿಯಲ್ಲಿ ಅಕ್ಕಪಕ್ಕದ ರೈತರ ವಿರೋಧವಿದ್ದರೂ ಅನಧಿಕೃತವಾಗಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ನಗರಲ್ಲಿನ ಚಿದಂಬರ ನಗರ, ಸಿದ್ಧಾರೂಢ ನಗರ, ಕಮಲಾ ನಗರ, ಅಲ್ತಾಫ್ ನಗರಗಳಲ್ಲಿ ಈಗಾಗಲೇ ನಿರ್ಮಿಸಿರುವ ಲೇಔಟ್‌ಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ಜನತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಹೀಗಾಗಿ ಇಲ್ಲಿನ ಜನತೆ ಮೂಲಭೂತ ಸೌಲಭ್ಯಗಳಿಗಾಗಿ ನಗರಸಭೆಗೆ ಅಲೆದಾಡುವಂತಾಗಿದೆ. ಸರ್ಕಾರದ ಆದಾಯವನ್ನು ಕುಂಠಿತಗೊಳಿಸಿ ಕೋಟಿಗಟ್ಟಲೆ ಸರ್ಕಾರದ ಬೊಕ್ಕಸಕ್ಕೆ ಅನ್ಯಾಯ ಮಾಡುತ್ತಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಹೋದರೆ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ದೊಡ್ಡಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಯಲ್ಲಪ್ಪ ಚಿಕ್ಕಣ್ಣನವರ, ರಾಜು ಮಾದಮ್ಮನವರ, ಸಂತೋಷ ಮುದ್ದಿ, ಮಂಜಪ್ಪ ಗಂಜಾಮದ, ಶಂಕ್ರಪ್ಪ ಕೆಂಪಳ್ಳೆರ, ಭೋಜಪ್ಪ ಮುದ್ದಿ, ಕಿರಣ ಗುಳೇದ, ನಾಗಪ್ಪ ಕಣವಿ, ಬಸವರಾಜ ಬಿದರಿ, ನಾಗರಾಜ ಪೂಜಾರ ಮತ್ತಿತರರಿದ್ದರು.

Share this article