ಗ್ಯಾರಂಟಿ ಯೋಜನೆಗಳಿಗಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

KannadaprabhaNewsNetwork |  
Published : Jun 18, 2024, 12:45 AM IST
ಪ್ರತಿಭಟನೆ | Kannada Prabha

ಸಾರಾಂಶ

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ಮುಖಂಡರು ಜಟಕಾ ಗಾಡಿಗೆ ದ್ವಿಚಕ್ರ ವಾಹನ ಕಟ್ಟಿ, ಸೈಕಲ್ ಸವಾರಿ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ಮುಖಂಡರು ಜಟಕಾ ಗಾಡಿಗೆ ದ್ವಿಚಕ್ರ ವಾಹನ ಕಟ್ಟಿ, ಸೈಕಲ್ ಸವಾರಿ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದರು.ಭದ್ರಮ್ಮ ವೃತ್ತದ ಜಿಲ್ಲಾ ಬಿಜೆಪಿ ಕಚೇರಿಯಿಂದ ಬಿಜಿಎಸ್ ವೃತ್ತದವರೆಗೆ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಅವರು ಸೈಕಲ್ ಸವಾರಿ ಮಾಡಿದರೆ, ಕೆಲವು ಮುಖಂಡರು ಜಟಕಾ ಗಾಡಿಯಲ್ಲಿ ಕುಳಿತು, ಜಟಕಾಗೆ ಬೈಕ್‌ಗಳನ್ನು ಕಟ್ಟಿಕೊಂಡು, ಕೆಲವರು ಪಾದಯಾತ್ರೆ ನಡೆಸಿ ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಬಿಜಿಎಸ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಬಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸರ್ಕಾರ ಎಲ್ಲಾ ರಂಗಗಳಲ್ಲೂ ಸಂಪೂರ್ಣ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ರಾಜ್ಯದ ಜನರಿಗೆ ಮಕ್ಮಲ್ ಟೋಫಿ ಹಾಕುತ್ತಿದೆ. ಬೆಲೆ ಏರಿಕೆಯಿಂದ ದಿನಬಳಕೆ ಪದಾರ್ಥಗಳ ಬೆಲೆ, ಬಸ್, ಆಟೋಗಳ ಪ್ರಯಾಣ ದರ ಹೆಚ್ಚಾಗಿ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಒಂದು ಅಡಿ ರಸ್ತೆ ಮಾಡಲೂ ಅನುದಾನವಿಲ್ಲ. ಬಿಜೆಪಿ ಸರ್ಕಾರದಲ್ಲಿ ನೀಡಿದ್ದ ಹಣದಲ್ಲಿ ರಸ್ತೆ ಗುಂಡಿಗಳಿಗೆ ತೇಪೆ ಹಾಕುವಂತಹ ಪರಿಸ್ಥಿತಿ ಬಂದಿದೆ. ತಮ್ಮ ವೈಫಲ್ಯ ಮರೆಮಾಚಲು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಚಪಲ ಬೆಳೆಸಿಕೊಂಡಿದ್ದಾರೆ ಎಂದು ಟೀಕಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ಇದು ಕೇವಲ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾತ್ರವಿಲ್ಲ. ಈ ಏರಿಕೆಯಿಂದ ಎಲ್ಲಾ ಪದಾರ್ಥಗಳ ಬೆಚ್ಚಳವಾಗುತ್ತದೆ. ಸಂಕಷ್ಟದಲ್ಲಿರುವ ಜನಸಾಮಾನ್ಯರ ಮೇಲೆ ಸರ್ಕಾರ ಮತ್ತಷ್ಟು ಹೊರೆ ಹೊರಿಸಿ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದರು. ಶುದ್ಧ ಕುಡಿಯುವ ನೀರು ನೀಡಲಾಗದ ಈ ಸರ್ಕಾರಕ್ಕೆ ರಾಜ್ಯದ ಜನರ ಹಿತ ಬೇಕಾಗಿಲ್ಲ. ಆಮಿಷಗಳ ಮೂಲಕ ಚುನಾವಣೆ ಗೆಲ್ಲಲು ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳುತ್ತಿದೆ. ಸರ್ಕಾರ ಈ ಕೂಡಲೇ ಏರಿಕೆಯಾಗಿರುವ ಪೆಟ್ರೋಲ್, ಡೀಸೆಲ್ ದರವನ್ನು ವಾಪಸ್ ಪಡೆಯಬೇಕು. ತಪ್ಪಿದಲ್ಲಿ ಬಿಜೆಪಿ ಹೋಬಳಿ, ಮಂಡಲ ಮಟ್ಟದಲ್ಲೂ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.ರಾಜ್ಯ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಜನರ ಮೇಲೆ ಹಗೆ ತೀರಿಸಿಕೊಳ್ಳುವ ಹೀನಕೃತ್ಯಕ್ಕೆ ಇಳಿದಿದೆ ಎಂದು ಆರೋಪಿಸಿದರು. ತಮ್ಮ ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲದೆ ಬೆಲೆ ಏರಿಸಿ ಖಜಾನೆ ತುಂಬಿಕೊಳ್ಳಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಇಂತಹ ಜನವಿರೋಧಿ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಜನರಿಗೆ ಎಲ್ಲಾ ಸೌಲಭ್ಯ ಕೊಡುತ್ತೇವೆ ಎಂದು ಬೊಗಳೆಬಿಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಬಣ್ಣ ವರ್ಷದಲ್ಲೇ ಬಯಲಾಗಿದೆ. ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. 15 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದು ಹುದ್ದೆ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದರು.ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್.ಸಿದ್ದರಾಮಯ್ಯ ಜಿ.ಅರಿವೇಸಂದ್ರ, ನಗರ ಬಿಜೆಪಿ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ಉಪಾಧ್ಯಕ್ಷ ರವೀಶಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್‌ಗೌಡ, ಗಂಗರಾಜು, ಹಾಲೇಗೌಡ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಪ್ರಧಾನ ಕಾರ್ಯದರ್ಶಿ ಧನುಷ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಮುಖಂಡರಾದ ಎಂ.ಬಿ.ನಂದೀಶ್, ಸ್ನೇಕ್ ನಂದೀಶ್, ರುದ್ರೇಶ್, ಭೈರಣ್ಣ, ಟಿ.ಆರ್.ಸದಾಶಿವಯ್ಯ, ಜೆ.ಜಗದೀಶ್, ಸತ್ಯಮಂಗಲ ಜಗದೀಶ್, ಪುರುಷೋತ್ತಮ್, ನಾಗರತ್ನಮ್ಮ, ರಾಧಮ್ಮ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ