ತಾಳಗುಪ್ಪ-ಶಿರಸಿ ಮೂಲಕ ಹುಬ್ಬಳ್ಳಿ ರೈಲು ಮಾರ್ಗದ 2ನೇ ಹಂತದ ಸರ್ವೇ ಪ್ರಾರಂಭ

KannadaprabhaNewsNetwork |  
Published : Oct 10, 2025, 01:01 AM IST
ಪೊಟೋ9ಎಸ್.ಆರ್.ಎಸ್‌5 ತಾಳಗುಪ್ಪ-ಶಿರಸಿ ಮೂಲಕ ಹುಬ್ಬಳ್ಳಿಗೆ ತೆರಳುವ ರೈಲು ಮಾರ್ಗದ ಸರ್ವೇ ಕಾರ್ಯ ನಡೆಯುತ್ತಿದೆ.  | Kannada Prabha

ಸಾರಾಂಶ

ತಾಳಗುಪ್ಪ-ಶಿರಸಿ ಮೂಲಕ ಹುಬ್ಬಳ್ಳಿಗೆ ತೆರಳುವ ರೈಲು ಮಾರ್ಗದ ಸರ್ವೇ ಕಾರ್ಯ ಆರಂಭಗೊಂಡಿದ್ದು, ಕಳೆದ 2 ವರ್ಷಗಳ ಹಿಂದೆ ಸರ್ವೆ ನಡೆಸಿ, ಗಲ್ಲು ಗುರುತು ಹಾಕಲಾಗಿದೆ. ಇದೀಗ ಎರಡನೇ ಹಂತದ ಸರ್ವೇ ಪ್ರಾರಂಭಗೊಂಡಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ತಾಳಗುಪ್ಪ-ಶಿರಸಿ ಮೂಲಕ ಹುಬ್ಬಳ್ಳಿಗೆ ತೆರಳುವ ರೈಲು ಮಾರ್ಗದ ಸರ್ವೇ ಕಾರ್ಯ ಆರಂಭಗೊಂಡಿದ್ದು, ಕಳೆದ 2 ವರ್ಷಗಳ ಹಿಂದೆ ಸರ್ವೆ ನಡೆಸಿ, ಗಲ್ಲು ಗುರುತು ಹಾಕಲಾಗಿದೆ. ಇದೀಗ ಎರಡನೇ ಹಂತದ ಸರ್ವೇ ಪ್ರಾರಂಭಗೊಂಡಿದೆ.

ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಸಿದ್ದಾಪುರ ರೈಲು ಹೋರಾಟ ಸಮಿತಿ ಸಹ ಈ ಯೋಜನೆಗಾಗಿ ಸಾಕಷ್ಟು ಹೋರಾಟ ನಡೆಸಿದೆ. ಸಾಧ್ಯವಾದಷ್ಟರ ಮಟ್ಟಿಗೆ ಅರಣ್ಯ ಭೂಮಿ ತಪ್ಪಿಸಿ ಕೃಷಿ ಹಾಗೂ ಪಾಳುಬಿದ್ದ ಭೂಮಿ ಬಳಸಿಕೊಂಡು ರೈಲ್ವೆ ಮಾರ್ಗ ಸಿದ್ಧಪಡಿಸಲಾಗುತ್ತಿದೆ. ಸದ್ಯ ಬೆಂಗಳೂರಿನ ಆರ್‌ವಿ ಕಂಪನಿಯ ಎರಡು ತಂಡ ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡುತ್ತಿದೆ.

ಬೆಟ್ಟ-ಗುಡ್ಡಗಳು ಹೆಚ್ಚಿರುವ ಮಲೆನಾಡು ಪ್ರದೇಶದಲ್ಲಿ ಬಯಲು ಹಾಗೂ ಗದ್ದೆ ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಗುಡ್ಡ ಪ್ರದೇಶವಿರುವ ಹದಿನಾರನೇ ಮೈಲುಕಲ್ಲು, ನಾಣಿಕಟ್ಟಾ, ಕಾನಸೂರು, ಅಜ್ಜಿಬಳ-ಕಾನಗೋಡ ಭಾಗಗಳಲ್ಲಿ ರೈಲ್ವೆ ಮಾರ್ಗ ಬರುವ ಸಾಧ್ಯತೆಗಳಿಲ್ಲ. ಸಂರಕ್ಷಿತ ಅರಣ್ಯ ಪ್ರದೇಶದಿಂದಲೂ ರೈಲು ಮಾರ್ಗ ಅಂತರ ಕಾಯ್ದುಕೊಂಡಿದೆ. ಮಾಹಿತಿಗಳ ಪ್ರಕಾರ ಶಿರಸಿ ಅಂಡಗಿ ಮಾರ್ಗವಾಗಿ 3 ಕಿಮೀ ಆಚೆಗೆ ಸರ್ವೇ ನಡೆದಿದ್ದು, ಎಲ್ಲವೂ ಸರಿಯಾಗಿ ನಡೆದರೆ 2 ವರ್ಷದೊಳಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಸಾಧ್ಯವಾದಷ್ಟರ ಮಟ್ಟಿಗೆ ಪರಿಸರ ಹಾನಿ ತಪ್ಪಿಸಿ ಹೊಸ ಮಾರ್ಗ ರಚಿಸಲಾಗಿದೆ. ರೈಲ್ವೆ ಇಲಾಖೆಯ ಪ್ರಿಲಿಮಿನರಿ ಎಂಜಿನಿಯರಿoಗ್ ಮತ್ತು ಟ್ರಾಫಿಕ್ ಸರ್ವೆಯಲ್ಲಿ ಹೊಸ ಬ್ರಾಡ್‌ಗೇಜ್ ರೈಲ್ವೆ ಮಾರ್ಗ ಹಾಗೂ ರೈಲು ನಿಲ್ದಾಣಗಳ ಕುರಿತು ವಿವರ ಪ್ರಕಟಿಸಲಾಗಿದೆ. ಅದರ ಪ್ರಕಾರ ತಾಳಗುಪ್ಪಾದಿಂದ ಕಾವಂಚೂರು ಮಾರ್ಗವಾಗಿ ಸಿದ್ದಾಪುರಕ್ಕೆ ಆಗಮಿಸುವ ಈ ರೈಲು ಮಾರ್ಗ ನಂತರ ಕುಣಜಿ-ತೆಲಗುಂದ್ಲಿ- ಒಡ್ಡಿನಕೊಪ್ಪ ಮಾರ್ಗವಾಗಿ ಶಿರಸಿಗೆ ಬರಲಿದೆ. ನಂತರ ಮಳಲಗಾಂವ್-ಕಾತೂರು ಮಾರ್ಗವಾಗಿ ಮುಂಡಗೋಡಕ್ಕೆ ತೆರಳಲಿದೆ. ತದನಂತರದಲ್ಲಿ ತಡಸ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣ ತಲುಪಲಿದೆ.

ಸಿದ್ದಾಪುರ ತಾಲೂಕಿನ ಕಾವಂಚೂರು, ಸಿದ್ದಾಪುರ ಹಾಗೂ ಕುಣಜಿಯಲ್ಲಿ ರೈಲ್ವೆ ನಿಲ್ದಾಣ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ತೆಲಗುಂದ್ಲಿ, ಶಿರಸಿ ತಾಲೂಕಿನಲ್ಲಿ ಒಡ್ಡಿನಕೊಪ್ಪ, ಒಕ್ಕಲಕೊಪ್ಪ, ಗೌಡಳ್ಳಿ, ಮಳಲಗಾಂವ್ ಹಾಗೂ ಗೋಟಗಾಡಿ ಬಳಿ ನಿಲ್ದಾಣ ಸ್ಥಾಪನೆಗೆ ನಕ್ಷೆ ಸಿದ್ಧವಾಗಿದೆ. ಮುಂಡಗೋಡ ತಾಲೂಕಿನಲ್ಲಿ ಕಾತೂರು, ಮುಂಡಗೋಡ ಹಾಗೂ ಅಷ್ಟಕಟ್ಟಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸುವ ಪ್ರಸ್ತಾವನೆ ನಕ್ಷೆಯಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ ತಡಸ ಹಾಗೂ ಧಾರವಾಡ ಜಿಲ್ಲೆಯಲ್ಲಿ ಬೆಳಗಲಿ ಬಳಿ ರೈಲ್ವೆ ನಿಲ್ದಾಣ ಬರಲಿದೆ. ತಾಳಗುಪ್ಪಾ-ಹುಬ್ಬಳ್ಳಿ ಮಾರ್ಗದಲ್ಲಿ ಸಿದ್ದಾಪುರ-ಶಿರಸಿ-ಮುಂಡಗೋಡ ಹಾಗೂ ತಡಸಗಳು ಪ್ರಮುಖ ನಿಲ್ದಾಣಗಳಾಗಲಿದೆ. ಸಿದ್ದಾಪುರ ನಿಲ್ದಾಣವು ಸಿದ್ದಾಪುರ-ಕೊಂಡ್ಲಿ ನಡುವಿನ ಗದ್ದೆ ಬಯಲಿನಲ್ಲಿ ರೈಲ್ವೆ ಮಾರ್ಗದ 17 ಹಾಗೂ 18 ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ. ಶಿರಸಿ ನಿಲ್ದಾಣವು ಗೌಡಳ್ಳಿಯಿಂದ ಮುಂದೆ ಒಕ್ಕಲಕೊಪ್ಪ ಬಳಿ ರೈಲ್ವೆ ಮಾರ್ಗದ 66ನೇ ಕಿಲೋಮೀಟರ್‌ನಲ್ಲಿ ನಿರ್ಮಾಣವಾಗಲಿದೆ. ಮುಂಡಗೋಡ ರೈಲ್ವೆ ನಿಲ್ದಾಣವು ಮುಂಡಗೋಡ ಪಟ್ಟಣದಿಂದ 4 ಕಿಲೋಮೀಟರ್ ದೂರದಲ್ಲಿ ರೈಲ್ವೆ ಮಾರ್ಗದ 116 ಹಾಗೂ 117ನೇ ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ. ತಡಸ ನಿಲ್ದಾಣವು ತಡಸ ಪಟ್ಟಣದಿಂದ 2 ಕಿಲೋಮೀಟರ್ ದೂರದಲ್ಲಿ ರೈಲ್ವೆ ಮಾರ್ಗದ 142 ಹಾಗೂ 143ನೇ ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ. ಶಿರಸಿ-ಹಾವೇರಿ ರೈಲ್ವೆ ಮಾರ್ಗ ನಿರ್ಮಾಣದ ಯೋಜನೆಗೂ ಪೂರಕವಾಗುವಂತೆ ಈ ರೈಲ್ವೆ ಮಾರ್ಗ ಸಿದ್ಧಪಡಿಸಲಾಗಿದೆ. ಅದರ ಪ್ರಕಾರ ಶಿರಸಿ ತಾಲೂಕಿನ ಮಳಲಗಾಂವ್‌ನಲ್ಲಿ ಜಂಕ್ಷನ್ ಆಗುವ ಸಾಧ್ಯತೆ ಹೆಚ್ಚಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!