ಬೆಂಗಳೂರಿಗೆ 6ನೇ ಹಂತದ ಕುಡಿಯುವ ನೀರು ಯೋಜನೆಯಿಂದ ಕೃಷಿ ಕ್ಷೇತ್ರಕ್ಕೆ ಮಾರಕ

KannadaprabhaNewsNetwork |  
Published : Jul 26, 2026, 02:00 AM IST
24ಕೆಎಂಎನ್ ಡಿ25 | Kannada Prabha

ಸಾರಾಂಶ

ಕುಡಿಯುವ ನೀರಿನ ಯೋಜನೆಗೆ ₹5400 ಕೋಟಿ ಅಂದಾಜು ವೆಚ್ಚ ತಯಾರಾಗಿದ್ದು, ಇದು ಜನತೆಗೆ ಮಾರಕವಾದ ಯೋಜನೆಯಾಗಿದೆ. ಮಣ್ಣು ಪರೀಕ್ಷೆ ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಯೋಜನೆಗೆ ನಕ್ಷೆ ತಯಾರಿಸಲು ಆಗಮಿಸಿದ ಅಧಿಕಾರಿಗಳನ್ನು ಈಗಾಗಲೇ ವಾಪಸ್ ಕಳುಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕೆಆರ್ ಎಸ್ ಜಲಾಶಯದಿಂದ ಬೆಂಗಳೂರಿಗೆ ಆರನೇ ಹಂತದ ಕುಡಿಯುವ ನೀರು ಯೋಜನೆ ಕೃಷಿ ಕ್ಷೇತ್ರಕ್ಕೆ ಮಾರಕವಾಗಿದೆ ಎಂದು ರೈತರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಎಚ್ಚರಿಸಿದರು.

ಪಟ್ಟಣದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಾಲಯದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನ ಕುರಿತು ಸರ್ಕಾರದ ನಿರ್ಧಾರಕ್ಕೆ ಸಂಘಟನೆಗಳ ಮುಖಂಡರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.

ಇಂಡುವಾಳು ಚಂದ್ರಶೇಖರ್ ಮಾತನಾಡಿ, ಕುಡಿಯುವ ನೀರಿನ ಯೋಜನೆಗೆ ₹5400 ಕೋಟಿ ಅಂದಾಜು ವೆಚ್ಚ ತಯಾರಾಗಿದ್ದು, ಇದು ಜನತೆಗೆ ಮಾರಕವಾದ ಯೋಜನೆಯಾಗಿದೆ. ಮಣ್ಣು ಪರೀಕ್ಷೆ ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಯೋಜನೆಗೆ ನಕ್ಷೆ ತಯಾರಿಸಲು ಆಗಮಿಸಿದ ಅಧಿಕಾರಿಗಳನ್ನು ಈಗಾಗಲೇ ವಾಪಸ್ ಕಳುಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಗಳು ಸುಮಾರು 70 ರಿಂದ 80 ಲಕ್ಷ ಟನ್ ಕಬ್ಬನ್ನು ಅರೆಯುತ್ತಿವೆ. ನೀರಿನ ಸಮಸ್ಯೆ ಉಂಟಾದರೆ ಕಬ್ಬು ಬೆಳೆಗಾರರು, ಕಾರ್ಖಾನೆಗಳು ಹಾಗೂ ಅವಲಂಬಿತ ಕಾರ್ಮಿಕರ ಪಾಡೇನು ಎಂದು ಆತಂಕ ವ್ಯಕ್ತಪಡಿಸಿದರು.

ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಲಭ್ಯತೆ 49.50 ಟಿಎಂಸಿ ನೀರು ಯೋಜನೆಗೆ 35 ಟಿಎಂಸಿ ನೀರು ಬೇಕು. ಇದರಲ್ಲಿ ಮೈಸೂರು, ಮಂಡ್ಯ ನಗರ ಸೇರಿದಂತೆ ಬೇರೆ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಬೇಸಾಯಕ್ಕೆ ನೀರನ್ನು ಎಲ್ಲಿಂದ ತರುತ್ತಾರೆ. ಅಲ್ಲದೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಾರೆ. ಆದ್ದರಿಂದ ಈ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಬರಡು ಪ್ರದೇಶವಾಗಿದ್ದ ಮಂಡ್ಯ ಜಿಲ್ಲೆಯನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅನನ್ಯ ಹಾಗೂ ಅಪಾರ. ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಹಾಗೂ ಸಕಾಲದಲ್ಲಿ ಕಾಲ ಕಾಲಕ್ಕೆ ಮಳೆ ಆಗದೇ ಜಲಾಶಯ ಭರ್ತಿ ಆಗದಿದ್ದರೆ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಬೇಸಾಯಕ್ಕೆ ನೀರನ್ನು ಎಲ್ಲಿಂದ ತಂದು ಒದಗಿಸಲಾಗುತ್ತದೆ ಎಂದು ಪ್ರಶ್ನಿಸಿದರು.

ರೈತ ಸಂಘದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ಸೊ.ಸಿ.ಪ್ರಕಾಶ್ ಮಾತನಾಡಿ, ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳ ಮಾಡಲು ತಂತ್ರಜ್ಞಾನದ ಮೂಲಕ ಹೂಳು ತೆಗೆಸುವುದು ಕೆರೆ ಕಟ್ಟೆಗಳ ಅಭಿವೃದ್ಧಿ ಪಡಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ಜತೆಗೆ ನಾಲೆಗೆಳ ದುರಸ್ತಿ ಕಾರ್ಯ ಹಾಗೂ ತೂಬುಗಳ ನಿರ್ಮಾಣ ಮಾಡುವಂತೆ ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಮುಖಂಡರಾದ ಕೆ.ಪಿ.ದೊಡ್ಡಿ ರಾಮಲಿಂಗು, ಕೆ.ಜಿ.ಉಮೇಶ್, ಕೀಳಘಟ್ಟ ನಂಜುಂಡಯ್ಯ, ರೈತ ಸಂಘದ ಮದ್ದೂರು ತಾಲೂಕು ಅಧ್ಯಕ್ಷ ಎಚ್. ಜಿ ಪ್ರಭುಲಿಂಗ, ಮಂಡ್ಯ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಕಜವೇ ಯುವ ಘಟಕದ ಅಧ್ಯಕ್ಷ ವಿಶ್ವಾಸ್, ಪದಾಧಿಕಾರಿಗಳಾದ ಶ್ರೀನಿವಾಸ್, ಪಣ್ಣೆದೊಡ್ಡಿ ವೆಂಕಟೇಶ, ಕೋಣಸಾಲೆ ಲಿಂಗರಾಜ, ಜಗದೀಶ್ ರಾಮಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ವೇತನ ಬಿಡುಗಡೆಗೆ ಆಶಾ ಕಾರ್ಯಕರ್ತೆಯರ ಆಗ್ರಹ
ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು ಕನ್ನಡದ ಹೆಮ್ಮೆ: ವಾಮದೇವಪ್ಪ