ಕನ್ನಡಪ್ರಭ ವಾರ್ತೆ ಆಲೂರು
ಮನುಷ್ಯರಂತೆ ಪ್ರಾಣಿ, ಪಕ್ಷಿಗಳಿಗೂ ಭೂಮಿ ಮೇಲೆ ಬದುಕುವ ಹಕ್ಕಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ, ತಾಲೂಕು ರೆಡ್‌ಕ್ರಾಸ್ ಘಟಕ, ತಾಲೂಕು ಒಕ್ಕಲಿಗರ ಸಂಘ, ಜಿಲ್ಲಾ ಪಕ್ಷಿ ವೀಕ್ಷಕರ ಸಂಘ ಮತ್ತು ಜಿಲ್ಲಾ ಚಿತ್ರಕಲಾ ಫೌಡೇಶನ್ ಸಂಯುಕ್ತಾಶ್ರಯದಲ್ಲಿ ಪಕ್ಷಿಗಳ ರಕ್ಷಣೆ ಬಗ್ಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಪರಿಸರವಾದಿ ಹೆಮ್ಮಿಗೆ ಮೋಹನ್ ಹಾಗೂ ಚಿತ್ರ ಕಲಾವಿದ ಹಾಗೂ ಶಿಕ್ಷಕ ಬಿ. ಎನ್. ದೇಸಾಯಿರವರು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಪುರಾತನ ಕಾಲದಿಂದಲೂ ರೈತಮಿತ್ರರು ಪ್ರಾಣಿ, ಪಕ್ಷಿಗಳನ್ನು ಹಣ್ಣಿನ ಮರಗಳನ್ನು ಬೆಳೆಸಿ, ದವಸಗಳನ್ನು ಹೊಲ, ಗದ್ದೆಗಳಲ್ಲಿ ಬಿತ್ತುವ ಮೂಲಕ ಆಹಾರ ನೀಡಿ ತಮ್ಮ ಮಕ್ಕಳಂತೆ ಸಾಕುತ್ತಿದ್ದರು. ಆದರೆ ಕೆಲ ದಶಕಗಳ ನಂತರ ರಸಾಯನಿಕ ಗೊಬ್ಬರ, ಕ್ರಿಮಿನಾಶಕವನ್ನು ಕೃಷಿಯಲ್ಲಿ ಬಳಸಲು ಪ್ರಾರಂಭಿಸಿದ ನಂತರ ಬಹುತೇಕ ಪ್ರಾಣಿ, ಪಕ್ಷಿಗಳ ಸಂಕುಲ ನಾಶವಾಗುತ್ತಿದೆ. ಅವಶ್ಯಕವಾಗಿರುವ ಮೊಬೈಲ್ ಬಳಕೆಯಿಂದ ಸಹ ಗುಬ್ಬಚ್ಚಿಗಳ ಸಂಕುಲ ನಾಶವಾಗುತ್ತಿದೆ. ಈಗ ಕೆಲ ಪ್ರಾಣಿಪಕ್ಷಿಗಳನ್ನು ನೋಡಬೇಕಾದರೆ ಕಾಫಿ ತೋಟ, ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಬೇಕಾಗಿದೆ. ಇದು ಮುಂದುವರಿದರೆ ಮುಂದಿನ ಪೀಳಿಗೆಗೆ ಅನೇಕ ಪ್ರಾಣಿ, ಪಕ್ಷಿಗಳ ಪರಿಚಯ ಇಲ್ಲದಂತಾಗುತ್ತದೆ. ನಮ್ಮ ದೇಶದಲ್ಲಿ ಸುಮಾರು ಹತ್ತು ಸಾವಿರದಷ್ಟು ಇದ್ದ ಪಕ್ಷಿಗಳ ಸಂಕುಲದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಪಕ್ಷಿ ಸಂಕುಲ ನಾಶದಂಚಿನಲ್ಲಿವೆ. ದೇವರು ಸೃಷ್ಟಿ ಮಾಡಿರುವ ಪರಿಸರವನ್ನು ಉಳಿಸಿಕೊಳ್ಳಲು ಎಲ್ಲರೂ ಗಮನ ಹರಿಸಬೇಕು ಎಂದರು.ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಮಾತನಾಡಿ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದ ಛಾಯಾಚಿತ್ರ ಪ್ರದರ್ಶನವನ್ನು ತಾಲೂಕು ಮಟ್ಟದಲ್ಲಿ ಏರ್ಪಡಿಸಿರುವುದರಿಂದ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪರಿಸರವಾದಿ ಹೆಮ್ಮಿಗೆ ಮೋಹನ್, ಜನಸಾಮಾನ್ಯರು ಸಾಧ್ಯವಾದಷ್ಟು ಹಣ್ಣಿನ ಗಿಡಮರಗಳನ್ನು ಬೆಳೆಸುವ ಮೂಲಕ ಪಕ್ಷಿಗಳ ಸಂಕುಲವನ್ನು ಉಳಿಸಬೇಕು ಎಂದರು. ಸುಮಾರು ೫೦೦ ಬಗೆಯ ಪಕ್ಷಿಗಳ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಾರ್ವಜನಿಕರು, ವಿದ್ಯಾರ್ಥಿಗಳು ವೀಕ್ಷಿಸಿದರು.
ಸಮಾರಂಭದಲ್ಲಿ ತಹಸೀಲ್ದಾರ್ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ, ರೇಣುಕಾ ಪ್ರಸಾದ್, ರೆಡ್‌ಕ್ರಾಸ್ ತಾಲೂಕು ಘಟಕದ ಅಧ್ಯಕ್ಷ ಕಾಂತರಾಜು, ಶಾಂತಕೃಷ್ಣ, ಸುರೇಶ್, ಸುಬ್ಬಸ್ವಾಮಿ, ಆರ್. ವಿಜಯಕುಮಾರ್, ಕದಾಳು ರಾಜಪ್ಪ ಇತರ ಗಣ್ಯರು ಉಪಸ್ಥಿತರಿದ್ದರು.============================
ಫೊಟೋ:ಛಾಯಾಚಿತ್ರ ಪ್ರದರ್ಶನವನ್ನು ಶಾಸಕ ಸಿಮಂಟ್ ಮಂಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ತಹಸೀಲ್ದಾರ್ ಮಲ್ಲಿಕಾರ್ಜುನ, ಉಪ ಪ್ರಾಂಶುಪಾಲ ಆರ್. ವಿಜಯಕುಮಾರ್, ಹೆಮ್ಮಿಗೆ ಮೋಹನ್ ಇತರೆ ಗಣ್ಯರು ವೀಕ್ಷಿಸಿದರು.