ಬಳ್ಳಾರಿ: ಬಾಲ್ಯವಿವಾಹವು ಹೆಣ್ಣುಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗಿದ್ದು, ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಮಹಿಳೆಯರು ಮತ್ತು ಮಕ್ಕಳು ನರಳಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಪೋಷಣ ಅಭಿಯಾನವನ್ನು ಪ್ರತಿವರ್ಷ ನಡೆಸುತ್ತಿದ್ದು, ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಗೂ ಇದು ತಲುಪಬೇಕು ಎಂದು ತಿಳಿಸಿದರು.
ಈ ವೇಳೆ ಭಾರತ ಸರ್ಕಾರದ ವಾರ್ತಾ ಶಾಖೆಯ ಕರ್ನಾಟಕದ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ.ರವೀಂದ್ರ, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಅನಿಸಿಕೆಗಳನ್ನು ಆಲಿಸಿದರು.ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯಲ್ಲಿ ಭಾಗವಹಿಸಿದ ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಯೋಜನೆಗಳ ಕುರಿತು ಬಿತ್ತರವಾದ ಮಾಹಿತಿಗಳನ್ನು ಅವಲೋಕಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತನಾಡಿದ ಮೈಸೂರಿನ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರಾಧಿಕಾರಿ ಎಸ್.ಟಿ.ಶೃತಿ, ಬಾಲ್ಯವಿವಾಹ ಮುಕ್ತ ಭಾರತ, ವಿಕಸಿತ ಭಾರತ ಕುರಿತು ವಿದ್ಯಾರ್ಥಿಗಳಿಗೆ, ರೈತರಿಗೆ, ಮಹಿಳೆಯರು ಮತ್ತು ಮಕ್ಕಳಿಗೆ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಜ.9ರಿಂದ ಮೂರು ದಿನಗಳ ಕಾಲ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದರು. ಇದೇ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.ಕಾರ್ಯಕ್ರಮದ ಪೂರ್ವಭಾವಿಯಾಗಿ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ, ವಂದೇ ಮಾತರಂ ಗೀತೆ, ಬಾಲ್ಯವಿವಾಹ ಮುಕ್ತ ಭಾರತ ವಿಷಯಗಳ ಮೇಲೆ ಆಯೋಜಿಸಲಾಗಿದ್ದ ರಂಗೋಲಿ, ಚಿತ್ರಕಲೆ, ಪೋಷಣೆಯುಕ್ತ ಆಹಾರ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಲಾಯಿತು.
ಸಂಗೀತ ಮತ್ತು ನಾಟಕ ವಿಭಾಗದ ಕೊಪ್ಪಳದಿಂದ ಆಗಮಿಸಿದ ಕಲಾತಂಡ ಜಾಗೃತಿಗೀತೆಗಳನ್ನು ಹಾಡಿದರು.ಬೆಂಗಳೂರಿನ ಕೇಂದ್ರ ಸಂವಹನ ಇಲಾಖೆಯ ಸಹಾಯಕ ನಿರ್ದೇಶಕರಾದ ಕರಿಷ್ಮಾ ಪಂತ್, ಮಧು.ಎಂ., ಅಭಿಯಾನ ಅಧಿಕಾರಿ ಶ್ವೇತಾ ಶರ್ಮಾ, ಸುರೇಶ್ ಸಿ.ಕೆ., ಪಿ.ದರ್ಶನ್, ಬಳ್ಳಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಧವನಂದ, ಸಿರಗುಪ್ಪ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರದೀಪ್.ಜಿ., ಆರೋಗ್ಯ ಇಲಾಖೆಯ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಉಪಸ್ಥಿತರಿದ್ದರು.
ಬಳ್ಳಾರಿಯ ಕೇಂದ್ರ ಸಂವಹನ ಇಲಾಖೆಯ ರಾಮಕೃಷ್ಣ ಹಾಗೂ ಜಿಲ್ಲಾ ಪಂಚಾಯಿತಿಯ ಎಂ.ರಾಜೇಂದ್ರ ಕಾರ್ಯಕ್ರಮ ನಿರ್ವಹಿಸಿದರು.