ಸದನ ನಡೆಯುವಾಗಲೂ ಶಾಸಕರು ಸ್ಪೀಕರ್ ಪೀಠಕ್ಕೆ ಅತ್ಯಂತ ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಹೀಗಿರುವಾಗ ಇಂತಹ ಫೋಟೋ ಶೂಟ್ ತಪ್ಪು ಸಂದೇಶ ನೀಡುತ್ತದೆ ಎಂಬ ಅಭಿಪ್ರಾಯ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ವಿಧಾನಸಭೆ ಸ್ಫೀಕರ್ ಪೀಠಕ್ಕೆ ಸಂಸದೀಯ ಪದ್ಧತಿಯಲ್ಲಿ ಭಾರೀ ಮಹತ್ವವಿದೆ. ಆದರೆ ಸ್ಪೀಕರ್ ಪೀಠದ ಮುಂದೆ ನಿಂತು ಮಂಗಳೂರಿನ ಕಾಂಗ್ರೆಸ್ ನಾಯಕರು ಫೋಟೋ ಶೂಟ್ ನಡೆಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ವಿಧಾನಸಭೆಯ ನಿಯಮಾವಳಿಗಳ ಉಲ್ಲಂಘನೆ ಹಾಗೂ ಸ್ಪೀಕರ್ ಪೀಠದ ಗೌರವದ ನಿಟ್ಟಿನಲ್ಲಿ ಇದು ಸರಿಯಾದ ಕ್ರಮವೇ ಎಂಬ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ದ.ಕ. ಜಿಲ್ಲೆಯ ಮುಸ್ಲಿಂ ಸಮುದಾಯದ ಮುಖಂಡ, ಮಾಜಿ ಮೇಯರ್ ಕೆ. ಅಶ್ರಫ್, ಮಂಗಳೂರು ಪಾಲಿಕೆ ಸದಸ್ಯ ನವೀನ್ ಡಿಸೋಜಾ ಮತ್ತಿತರರು ಇತ್ತೀಚೆಗೆ ಬೆಂಗಳೂರು ವಿಧಾನಸೌಧಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಪೀಕರ್ ಯು.ಟಿ ಖಾದರ್ ಹಾಗೂ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಅವರ ಜೊತೆಗೆ ದ.ಕ. ಜಿಲ್ಲೆಯ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯಲ್ಲೂ ಇವರು ಭಾಗಿಯಾಗಿದ್ದರು. ಇದೇ ವೇಳೆ ಅಶ್ರಫ್ ಮತ್ತು ನವೀನ್ ಡಿಸೋಜಾ ಸ್ಪೀಕರ್ ಪೀಠದ ಮುಂದೆ ಸ್ಪೀಕರ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿವಾದಕ್ಕೂ ಕಾರಣವಾಗಿದೆ.ಸ್ಪೀಕರ್ ಪೀಠದ ಪಕ್ಕ ನಿಂತ ಫೋಟೋ: ವಿಧಾನಸಭೆಯ ಸಭಾಂಗಣಕ್ಕೆ ಸಾರ್ವಜನಿಕರಿಗೂ ಪ್ರವೇಶ ಇರುವುದಿಲ್ಲ. ಸ್ಪೀಕರ್ ಅನುಮತಿಯ ಮೇರೆಗೆ ಅಧಿವೇಶನ ಇಲ್ಲದ ವೇಳೆ ಭೇಟಿ ಕೊಡಲು ಅವಕಾಶ ಇದೆ. ಇನ್ನು ಸದನ ನಡೆಯುವ ಸಂದರ್ಭದಲ್ಲಿ ಮಾತ್ರ ಸ್ಪೀಕರ್ ಅವರು ಪೀಠದ ಮೇಲೆ ಆಸೀನರಾಗಿರುತ್ತಾರೆ. ಆದರೆ ಈ ಫೋಟೋದಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರು ಪೀಠದಲ್ಲಿ ಕುಳಿತುಕೊಂಡಿದ್ದು, ಪಕ್ಕದಲ್ಲೇ ಕೆ. ಅಶ್ರಫ್ ಹಾಗೂ ನವೀನ್ ಡಿಸೋಜಾ ಕಾಣಿಸಿಕೊಂಡಿದ್ದಾರೆ. ಇವರೆಲ್ಲಾ ಸ್ಪೀಕರ್ ಖಾದರ್ ಅವರಿಗೂ ಆಪ್ತರು ಎಂದು ಹೇಳಲಾಗುತ್ತಿದೆ. ಕೆ. ಅಶ್ರಫ್ ಅವರು ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲೂ ಸ್ಪೀಕರ್ ಜೊತೆಗೆ ಇರುವ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಹಾಗೂ ಪೀಠಕ್ಕೆ ಸಂಸದೀಯ ಪದ್ಧತಿಯಲ್ಲಿ ಅತ್ಯಂತ ಗೌರವ ಇದೆ. ಸ್ಪೀಕರ್ ಪೀಠಕ್ಕೆ ಯಾರೂ ತಪ್ಪಾಗಿ ನಡೆದುಕೊಳ್ಳಬಾರದು. ಸದನ ನಡೆಯುವಾಗಲೂ ಶಾಸಕರು ಸ್ಪೀಕರ್ ಪೀಠಕ್ಕೆ ಅತ್ಯಂತ ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಹೀಗಿರುವಾಗ ಇಂತಹ ಫೋಟೋ ಶೂಟ್ ತಪ್ಪು ಸಂದೇಶ ನೀಡುತ್ತದೆ ಎಂಬ ಅಭಿಪ್ರಾಯ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.