ಕ್ರೀಡಾಕೂಟದಿಂದ ದೈಹಿಕ ಸ್ವಾಸ್ಥ್ಯ: ಮಂದೋಡಿ ಜಗನ್ನಾಥ್

KannadaprabhaNewsNetwork | Published : Feb 27, 2024 1:31 AM

ಸಾರಾಂಶ

ಕ್ರೀಡಾಕೂಟ ಕೇವಲ ಸೋಲು ಗೆಲುವಿಗೆ ಸೀಮಿತವಾಗದೆ ಅದರಲ್ಲಿ ಜೀವನದ ಪಾಠಗಳನ್ನು ಕಲಿಯಬಹುದಾಗಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕ್ರೀಡಾಕೂಟ ಕೇವಲ ಆಟೋಟಗಳಿಗೆ ಸೀಮಿತವಾಗದೆ ಮನೋರಂಜನೆಯೋಮದಿಗೆ ನಮ್ಮ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಭಾಗವಹಿಸುತ್ತದೆ ಎಂದು ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಹೇಳಿದರು.

ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ವತಿಯಿಂದ 24ನೇ ವರ್ಷದ ಕ್ರೀಡೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿ, ಸ್ಥಳೀಯ ಪುರುಷರಿಗೆ ಕಬಡ್ಡಿ ಪಂದ್ಯಾಟ, ಸ್ಥಳೀಯ ಮಹಿಳೆಯರಿಗೆ ಥ್ರೋಬಾಲ್ ಹಾಗೂ ಮಕ್ಕಳಿಗೆ ವಿವಿಧ ಗ್ರಾಮೀಣ ಕ್ರೀಡಾಕೂಟದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಳೆದ 24 ವರ್ಷಗಳಿಂದ ಫ್ರೆಂಡ್ಸ್ ಯೂತ್ ಕ್ಲಬಿನವರು ಕಠಿಣ ಪರಿಶ್ರಮ ದೊಂದಿಗೆ ದಾನಿಗಳಿಂದ ಹಿತೈಷಿಗಳಿಂದ ಮತ್ತು ಪ್ರಾಯೋಜಕರಿಂದ ಕ್ರೀಡಾಕೂಟವನ್ನು ಗ್ರಾಮದ ಹಬ್ಬದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಮುಂದಿನ ಬೆಳ್ಳಿಮಹೋತ್ಸವ ಆಚರಣೆಯಲ್ಲಿರುವ ಈ ಸಂಘವು ಮುಂದೆ 50 ಮತ್ತು ಶತಮಾನೋತ್ಸವ ಮಾಡುವಂತಾಗಲಿ ಎಂದು ಜಗನ್ನಾಥ್ ಹಾರೈಸಿದರು.

ಕ್ರೀಡಾಕೂಟ ಕೇವಲ ಸೋಲು ಗೆಲುವಿಗೆ ಸೀಮಿತವಾಗದೆ ಅದರಲ್ಲಿ ಜೀವನದ ಪಾಠಗಳನ್ನು ಕಲಿಯಬಹುದಾಗಿದೆ. ನಾವು ಮತ್ತು ನಮ್ಮ ಮಕ್ಕಳು ಮೊಬೈಲ್ ದಾಸರಾಗಿದ್ದು, ದಿನದ 24 ಗಂಟೆಯು ಮಕ್ಕಳನ್ನು ಓದು ಓದು ಎಂದು ಹೇಳುತ್ತೇವೆಯೇ ಹೊರತು, ಶರೀರ ಮತ್ತು ಮನಸ್ಸನ್ನು ಆರೋಗ್ಯವಾಗಿಡುವ ಕ್ರೀಡೆ ಕಲಿಸುತ್ತಿಲ್ಲ. ಇದರಿಂದಾಗಿ ಮಕ್ಕಳು ಈಜು ಬಾರದೆ ಮರಹತ್ತಲು ತಿಳಿಯದೆ ಜೀವನದ ಸೋಲುಗಳನ್ನು ಕ್ರೀಡಾ ಸ್ಪೂರ್ತಿಯಿಂದ ತೆಗೆದುಕೊಳ್ಳಲು ಆಗದೆ ಅವರು ಪ್ರಾಣಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಆಟ ಮತ್ತು ಪಾಠಗಳಿಗೆ ಸಮಾನ ಪ್ರಾಶಸ್ತ್ಯವನ್ನು ನೀಡಿ ಒಳ್ಳೆಯ ಜೀವನವನ್ನು ಕಟ್ಟಿಕೊಳ್ಳಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಪ್ರತಿಯೊಬ್ಬ ಮನುಷ್ಯನಿಗೆ ಶಾರೀರಿಕ ಮತ್ತು ಮಾನಸಿಕ ಶ್ರಮತೆ ಅಗತ್ಯ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ರೀತಿಯ ಕ್ರೀಡಾಕೂಟಗಳು ನಡೆದಾಗ ದೈಹಿಕ ಮತ್ತು ಮಾನಸಿಕ ಕ್ಷಮತೆಯೊಂದಿಗೆ ಜೀವನವನ್ನು ಕ್ರೀಡಾಸ್ಪೂರ್ತಿಯಿಂದ ನೋಡಲು ಸಾಧ್ಯವಾಗುತ್ತದೆ. 24 ವರ್ಷಗಳಿಂದ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿರುವ ಫ್ರೆಂಡ್ಸ್ ಯೂತ್ ಕ್ಲಬಿನವರು ಅಭಿನಂದಾರ್ಹರು ಎಂದು ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನರ್ ಹೇಳಿದರು.

ಸಮಾರಂಭ ಅಧ್ಯಕ್ಷತೆಯನ್ನು ವಹಿಸಿ ನಾಕೂರು ಶಿರಂಗಾಲ ಗ್ರಾ.ಪಂ. ಮಾಜಿ ಅಧ್ಯಕ್ಷ ಫ್ರೆಂಡ್ಸ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್ ಮಾತನಾಡಿ, ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ವೇದಿಕೆಯನ್ನು ಒದಗಿಸುವ ಮೂಲಕ ಅವರಲ್ಲಿನ ಪಠ್ಯೇತರ ಚಟುವಟಿಕೆಗಳ ಪ್ರತಿಭೆಯನ್ನು ಹೊರ ತರಲು ಸಾಧ್ಯವಾಗುತ್ತದೆ. ಈ ಕ್ರೀಡಾಕೂಟವು ಸಾಂಸ್ಕೃತಿಕ ಹಬ್ಬವಾಗಿ ನಡೆಯುತ್ತಿದ್ದು ಮುಂದಿನ ವರ್ಷ ರಜತಮಹೋತ್ಸವವನ್ನು ಆಚರಿಸಲಿದೆ. ಕ್ರೀಡೆ ಮನುಷ್ಯನ ಜೀವನದಲ್ಲಿ ಎಂತಹ ಬದಲಾವಣೆಗಳನ್ನು ತರಬಹುದು ಎನ್ನುವುದಕ್ಕೆ ಐಪಿಎಲ್ ನಲ್ಲಿ ಸಜನಾ ಎಂಬಾಕೆ ಕೊನೆಯ ಬಾಲಿನಲ್ಲಿ ತನ್ನ ತಂಡವನ್ನು ಸಿಕ್ಸ್ ಬಾರಿಸುವ ಮೂಲಕ ಗೆಲ್ಲಿಸಿ ದಿನಬೆಳಗಾಗುವುದಾರ ಒಳಾಗಾಗಿ ಸ್ಟಾರ್ ಆಟಗಾರ್ತಿ ಎನ್ನಿಸಿಕೊಂಡಿದ್ದಾರೆ. ತಮ್ಮ ಪಕ್ಕದ ಗ್ರಾಮದವರಾದ ಟೆನ್ನಿಸ್‌ಪಟ್ಟು ರೋಹನ್‌ಬೋಪಣ್ಣ ಅವರು 43ನೇ ವರ್ಷದಲ್ಲಿ ಡಬಲ್ಸ್ನಲ್ಲಿ ವಿಶ್ವ ನಂ.1 ಪಟ್ಟವನ್ನು ಅಲಂಕರಿಸಿದ್ದು ನಮಗೆಲ್ಲಾ ಸ್ಪೂರ್ತಿದಾಯಕವಾಗಿದ್ದಾರೆ ಎಂದು ಹೇಳಿದರು. ಕ್ರೀಡಾಕೂಟವನ್ನು ನಡೆಸುವಾಗ ವಯೋಮಿತಿ ಅನುಗುಣವಾಗಿ ತಂಡಗಳಾಗಿ ರೂಪಿಸಿ ಮೂಲಕ ಕ್ರೀಡಾಕೂಟ ನಡೆಸುವಂತಾಗಬೇಕು ಎಂದು ಕಿವಿಮಾತು ಹೇಳಿದರು.

ಸಮಾರಂಭವನ್ನು ಉದ್ದೇಶಿಸಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾಬಸಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ವಿ.ಸತೀಶ್, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರಾದ ರಾಧಮಣಿ, ಪ್ರೇಮ, ಅರುಣಾಕುಮಾರಿ, ಮೀನಾ ಜನಾರ್ಧನ, ಜನಾರ್ಧನ, ಕಾಫಿ ಬೆಳೆಗಾರರಾದ ಈರಪ್ಪ, ಅಡಿಕೆರ ಶಾಂತಪ್ಪ, ಅಡಿಕೆರ ಧರ್ಮಪ್ಪ, ಕಾಂಗ್ರೆಸ್ ಅಧ್ಯಕ್ಷ ಆದಂ, ಸಿಎಚ್‌ಓ ರೋಶಿತ ರೈ, ಜಯಂತಿ, ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ಅಧ್ಯಕ್ಷ ಬಿ.ಎ.ವಸಂತ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ಶಂಕರನಾರಾಯಣ ಸ್ವಾಗತಿಸಿ ವಂದಿಸಿದರು. ಸಂಘದ ಸದಸ್ಯ ಅಜಿತ್, ವಿನೋದ್ ನಿರೂಪಿಸಿದರು.

ಜಿಲ್ಲಾಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ 11 ತಂಡಗಳು ಭಾಗವಹಿಸಿದ್ದವು. ಸ್ಥಳೀಯ ಪುರುಷರ ಕಬಡ್ಡಿ ಪಂದ್ಯಾಳಿಗೆ 6 ತಂಡಗಳು, ಸ್ಥಳೀಯ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಗೆ 4 ತಂಡಗಳು ಪಾಲ್ಗೊಂಡಿದ್ದವು.

ವಾಲಿಬಾಲ್ ಫೈನಲ್ ಪಂದ್ಯಾವಳಿಯು ಬಿಲಾಲ್ ಫ್ರೆಂಡ್ಸ್ ಕುಶಾಲನಗರ ಹಾಗೂ ಅಭಿ ಫ್ರೆಂಡ್ಸ್ ಮಳ್ಳೂರು ತಂಡಗಳ ನಡುವೆ ನಡೆದಿದ್ದು ಪಂದ್ಯಾವಳಿಯ ಉದ್ಘಾಟನೆಯನ್ನು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್, ಕಾಫಿ ಬೆಳೆಗಾರರಾದ ಈರಪ್ಪ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೆರೂರು, ಫ್ರೆಂಡ್ಸ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಕೆ.ಪಿ.ವಸಂತ್ ಮತ್ತಿತರರು ಚಾಲನೆ ನೀಡಿದರು. ಮಹಿಳೆಯರ ಥ್ರೋಬಾಲ್ ಫೈನಲ್ ಪಂದ್ಯಾವಳಿಯು ಮಂಜಿಕೆರೆ ತಂಡ ಎಫ್‌ವೈಸಿ ನಾಕೂರು ತಂಡಗಳ ನಡೆದಿದ್ದು ಪಂದ್ಯಾವಳಿಯ ಉದ್ಘಾಟನೆಯನ್ನು ಕಾನ್‌ಬೈಲ್ ಗ್ರಾಮದ ಕಾಫಿ ಬೆಳೆಗಾರರಾದ ನಿಲಮ್ಮ ಪೇಮಯ್ಯ ಅವರು ಉದ್ಘಾಟಿಸಿದರು.

Share this article