ಪಿಲಿಕುಳ ಜೈವಿಕ ಉದ್ಯಾನವನ ‘ಏಕಸ್ವಾಮ್ಯ’ಕ್ಕೆ ಕೊನೆಗೂ ಬ್ರೇಕ್‌!

KannadaprabhaNewsNetwork | Published : Mar 18, 2025 12:32 AM

ಸಾರಾಂಶ

ಕರಾವಳಿ ಸೇರಿದಂತೆ ದೇಶ- ವಿದೇಶಗಳ ಅಪರೂಪದ ಜೀವ ಸಂಕುಲದ ತಾಣವಾಗಿರುವ ಪಿಲಿಕುಳ ಜೈವಿಕ ಉದ್ಯಾನವನ (ಪ್ರಾಣಿ ಸಂಗ್ರಹಾಲಯ) ನಿರ್ವಹಣೆಯ ದಶಕಗಳ ಏಕಸ್ವಾಮ್ಯಕ್ಕೆ ಇದೀಗ ಬ್ರೇಕ್‌ ಬಿದ್ದಿದೆ. ಹಲವು ವರ್ಷಗಳ ಬಳಿಕ ಕೊನೆಗೂ ಜೈವಿಕ ಉದ್ಯಾನವನ ನಿರ್ದೇಶಕರ ಹುದ್ದೆಗೆ ಸರ್ಕಾರಿ ಅಧಿಕಾರಿಯ ನೇಮಕವಾಗಿದೆ. ಪ್ರಾಣಿ ಸಂಗ್ರಹಾಲಯದ ಆಶೋತ್ತರಗಳಿಗೆ ಪೂರಕವಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯನ್ನೇ ಈ ಹುದ್ದೆಗೆ ನೇಮಿಸಿರುವುದು ಮೂಕ ಪ್ರಾಣಿಗಳ ಸುರಕ್ಷತೆ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ ಸೇರಿದಂತೆ ದೇಶ- ವಿದೇಶಗಳ ಅಪರೂಪದ ಜೀವ ಸಂಕುಲದ ತಾಣವಾಗಿರುವ ಪಿಲಿಕುಳ ಜೈವಿಕ ಉದ್ಯಾನವನ (ಪ್ರಾಣಿ ಸಂಗ್ರಹಾಲಯ) ನಿರ್ವಹಣೆಯ ದಶಕಗಳ ಏಕಸ್ವಾಮ್ಯಕ್ಕೆ ಇದೀಗ ಬ್ರೇಕ್‌ ಬಿದ್ದಿದೆ. ಹಲವು ವರ್ಷಗಳ ಬಳಿಕ ಕೊನೆಗೂ ಜೈವಿಕ ಉದ್ಯಾನವನ ನಿರ್ದೇಶಕರ ಹುದ್ದೆಗೆ ಸರ್ಕಾರಿ ಅಧಿಕಾರಿಯ ನೇಮಕವಾಗಿದೆ. ಪ್ರಾಣಿ ಸಂಗ್ರಹಾಲಯದ ಆಶೋತ್ತರಗಳಿಗೆ ಪೂರಕವಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯನ್ನೇ ಈ ಹುದ್ದೆಗೆ ನೇಮಿಸಿರುವುದು ಮೂಕ ಪ್ರಾಣಿಗಳ ಸುರಕ್ಷತೆ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಆರೇಳು ವರ್ಷಗಳೇ ಸಂದರೂ ಪ್ರಾಣಿ ಸಂಗ್ರಹಾಲಯ ಮೇಲ್ವಿಚಾರಣೆಗೆ ಸರ್ಕಾರಿ ಅಧಿಕಾರಿ ನೇಮಕ ಮಾಡಬೇಕೆನ್ನುವ ಬೇಡಿಕೆ ಈಡೇರಿರಲಿಲ್ಲ. ಇದರ ಹಿಂದೆ ಪ್ರಬಲ ಲಾಬಿ ಕಾರ್ಯಾಚರಿಸುತ್ತಿದ್ದ ಆರೋಪ ಕೇಳಿಬಂದಿತ್ತು. ಸರ್ಕಾರಗಳು ಬದಲಾದರೂ ಪಿಲಿಕುಳದ ವಿಭಾಗಗಳ ನಿರ್ವಹಣೆ ವ್ಯವಸ್ಥೆ ಬದಲಿಸಲು ಸಾಧ್ಯವಾಗಿರಲಿಲ್ಲ. ಈಗ ಅದಕ್ಕೆ ಸಮಯ ಕೂಡಿ ಬಂದಿದೆ. ಜೈವಿಕ ಉದ್ಯಾನವನ ನಿರ್ದೇಶಕರಾಗಿ (ಪ್ರಭಾರ) ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‌ ಕುಮಾರ್‌ ಪೈ ಸೋಮವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಪ್ರಾಣಿಗಳ ಆರೈಕೆ ಕೊರತೆ ಆರೋಪ:

ಈ ಹಿಂದೆ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ನಿರ್ವಹಣೆ ಬಗ್ಗೆ ವ್ಯಾಪಕ ಅಸಮಾಧಾನ ಕೇಳಿಬಂದಿತ್ತು. ಪ್ರಾಣಿಗಳಿಗೆ ಆಹಾರ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪ ಒಂದೆಡೆಯಾದರೆ, ಸಂರಕ್ಷಿತ ಪ್ರಾಣಿಗಳ ಜೀವಕ್ಕೆ ಕಂಟಕವಾದ ಹಲವು ಪ್ರಕರಣಗಳು ನಡೆದಿದ್ದವು. ಇಷ್ಟೆಲ್ಲ ಆದರೂ ನಿರ್ವಹಣೆಯ ಜವಾಬ್ದಾರಿ ಬದಲಿಸಿರಲಿಲ್ಲ.

ಈ ನಡುವೆ ಕಳೆದ ಫೆಬ್ರವರಿ ತಿಂಗಳಲ್ಲಿ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿ ಸದಸ್ಯರು ಪಿಲಿಕುಳ ಪ್ರಾಣಿ ಸಂಗ್ರಹಾಲಯವನ್ನು ಖುದ್ದು ಪರಿಶೀಲಿಸಿ ಪ್ರಾಣಿಗಳ ಸುರಕ್ಷತೆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದರು. ಪ್ರಾಣಿಗಳ ಆರೈಕೆ ಕೊರತೆ, ಸುರಕ್ಷತೆಯ ಕೊರತೆಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ, ಜೈವಿಕ ಉದ್ಯಾನವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಬಗ್ಗೆಯೂ ಸಲಹೆ ನೀಡಿದ್ದರು. ಇದರ ಬಳಿಕ ಗಂಭೀರವಾಗಿ ಸರ್ಕಾರಿ ಅಧಿಕಾರಿಯೊಬ್ಬರ ನೇಮಕಾತಿ ಪ್ರಕ್ರಿಯೆ ನಡೆದಿದೆ.

‘ಈ ಹಿಂದೆ ಜೈವಿಕ ಉದ್ಯಾನವನದ ನಿರ್ವಹಣೆಯನ್ನು ನಿವೃತ್ತ ಅಧಿಕಾರಿಯೊಬ್ಬರು ನೋಡಿಕೊಂಡಿದ್ದರು. ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಯನ್ನು ಈ ಹುದ್ದೆಗೆ ನೇಮಕ ಮಾಡಬೇಕು ಎಂಬ ಬೇಡಿಕೆ ಪಿಲಿಕುಳ ಪ್ರಾಧಿಕಾರವಾದರೂ ಈಡೇರಿರಲಿಲ್ಲ. ಈಗ ಅಧಿಕಾರಿಯ ನೇಮಕವಾಗಿದೆ. ಪ್ರಾಣಿಗಳ ಸುರಕ್ಷತೆ, ಆರೈಕೆ ದೃಷ್ಟಿಯಿಂದ ಇದು ಮಹತ್ವದ ನಿರ್ಧಾರವಾಗಿದೆ. ಇನ್ನು ಮುಂದೆಯಾದರೂ ಅಲ್ಲಿನ ಪ್ರಾಣಿಗಳ ಆರೈಕೆ ಚೆನ್ನಾಗಿ ನಡೆಯಲಿ’ ಎಂದು ಸ್ಥಳೀಯ ಮುಖಂಡರೊಬ್ಬರು ತಿಳಿಸಿದ್ದಾರೆ.......................

ವಿಜ್ಞಾನ ಕೇಂದ್ರ ಮೇಲ್ವಿಚಾರಣೆಗೆ ಹುದ್ದೆಯೇ ಇಲ್ಲ!

ಪ್ರಾಣಿ ಸಂಗ್ರಹಾಲಯಕ್ಕೆ ಸರ್ಕಾರಿ ಅಧಿಕಾರಿಯ ನೇಮಕ ಆದರೂ, ಪಿಲಿಕುಳ ನಿಸರ್ಗಧಾಮ ಆವರಣದಲ್ಲಿರುವ ಇನ್ನೊಂದು ಪ್ರಮುಖ ವಿಭಾಗವಾದ ವಿಜ್ಞಾನ ಕೇಂದ್ರದ ಮೇಲ್ವಿಚಾರಣೆಗೆ ಇನ್ನೂ ಸರ್ಕಾರಿ ಅಧಿಕಾರಿಯ ನೇಮಕ ಆಗಿಲ್ಲ. ನಿವೃತ್ತ ಅಧಿಕಾರಿಯೊಬ್ಬರು ಈಗ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಕಾರಣ ಇದಕ್ಕೆ ಸರ್ಕಾರದಿಂದ ಹುದ್ದೆಯೇ ಮಂಜೂರಾಗಿಲ್ಲ. ಈಗ ಹೊಸ ಬೆಳವಣಿಗೆಗಳು ನಡೆದ ಬಳಿಕ ವಿಜ್ಞಾನ ಕೇಂದ್ರದ ಉಸ್ತುವಾರಿಗೂ ಸರ್ಕಾರಿ ಹುದ್ದೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಬರೆಯಲಾಗಿದೆ.

Share this article