ವಿದ್ಯಾರ್ಥಿಗಳು ಆವಿಷ್ಕಾರದತ್ತ ಆಸಕ್ತಿ ಮೂಡಿಸಬೇಕು: ಪ್ರೊ.ಶ್ರೀನಿಕೇತನ್‌

KannadaprabhaNewsNetwork |  
Published : Oct 10, 2026, 02:45 AM IST
ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಸ್ಮರಣ ಶಕ್ತಿ ಮತ್ತು ರಸಪ್ರಶ್ನೆ ಸ್ಪರ್ಧೆಗೆ ಚಾಲನೆ ನೀಡಲಾಯಿತು  | Kannada Prabha

ಸಾರಾಂಶ

ವಿಶ್ವ ಬಾಹ್ಯಾಕಾಶ ಸಪ್ತಾಹ ಅಂಗವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರಿನ ಯುಆರ್ ಉಪಗ್ರಹ ಕೇಂದ್ರ ಇಸ್ರೋ ಸಹಯೋಗದೊಂದಿಗೆ ಗುರುವಾರ ಸ್ಮರಣ ಶಕ್ತಿ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಮಂಗಳೂರು: ವಿಶ್ವ ಬಾಹ್ಯಾಕಾಶ ಸಪ್ತಾಹ ಅಂಗವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರಿನ ಯುಆರ್ ಉಪಗ್ರಹ ಕೇಂದ್ರ ಇಸ್ರೋ ಸಹಯೋಗದೊಂದಿಗೆ ಗುರುವಾರ ಸ್ಮರಣ ಶಕ್ತಿ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಎನ್ಐಟಿಕೆ ಸುರತ್ಕಲ್ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಶ್ರೀನಿಕೇತನ್ ಮಾತನಾಡಿ, ಆಕಾಶಕ್ಕೆ ಯಾವುದೇ ಮಿತಿಯಿಲ್ಲ, ಬಾಹ್ಯಾಕಾಶದ ಅನಂತ ಸಾಧ್ಯತೆಗಳನ್ನು ಅನ್ವೇಷಿಸುವುದು ಮುಂದಿನ ಪೀಳಿಗೆಯ ಜವಾಬ್ದಾರಿ ಎಂಬ ಆಶಯದೊಂದಿಗೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಸಂಶೋಧನಾ ಮನೋಭಾವ ಹಾಗೂ ಹೊಸ ಆವಿಷ್ಕಾರಗಳತ್ತ ಆಸಕ್ತಿ ಮೂಡಿಸಲು ಪ್ರೇರೇಪಿಸಿದರು.

ಯುಆರ್‌ಎಸ್‌ಸಿ ಅಧ್ಯಕ್ಷ ವೀರೇಂದ್ರ ಆರ್. ಕವಿ ಶೆಟ್ಟಿ ಮಾತನಾಡಿ, ಹೊಸ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್, ಮೊಬೈಲ್ ಮತ್ತು ಜಿಪಿಎಸ್ ವ್ಯವಸ್ಥೆ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿದೆ. ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಅಂತರಿಕ್ಷ ನಿಲ್ದಾಣ ಹಾಗೂ ಸಂಶೋಧನಾ ಕೇಂದ್ರಗಳು ನಿರ್ಮಾಣ ಆಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಇಂದಿನಿಂದಲೇ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು, ಹೊಸ ಆಲೋಚನೆಗಳು ಮತ್ತು ಉತ್ಸಾಹದೊಂದಿಗೆ ಇಸ್ರೋ ಹಾಗೂ ಬಾಹ್ಯಾಕಾಶ ಕ್ಷೇತ್ರದ ಸೇವೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುವಂತಾಗಲಿ ಎಂದರು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಲಿಕುಳ ವಿಜ್ಞಾನ, ಪ್ರಕೃತಿ, ಪರಿಸರ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮದ ಹಲವು ಅದ್ಭುತಗಳ ತಾಣವಾಗಿದ್ದು, ವಿದ್ಯಾರ್ಥಿಗಳು ಪಿಲಿಕುಳದಲ್ಲಿರುವ ಎಲ್ಲ ಆಕರ್ಷಣೆಗಳನ್ನು ವೀಕ್ಷಿಸಿ, ಅವುಗಳ ಕುರಿತು ತಿಳಿದುಕೊಂಡು, ಪಿಲಿಕುಳದ ರಾಯಭಾರಿಗಳಾಗಿ ತಮ್ಮ ಶಾಲೆ, ಕಾಲೇಜು ಹಾಗೂ ಸಮಾಜದಲ್ಲಿ ಪಿಲಿಕುಳದ ವೈಶಿಷ್ಟ್ಯಗಳನ್ನು ಪರಿಚಯಿಸಬೇಕು ಎಂದರು.

ಬಳಿಕ ಯು.ಆರ್.ರಾವ್ ಉಪಗ್ರಹ ಕೇಂದ್ರ ಇಸ್ರೋ ಉಪನಿರ್ದೇಶಕ ಡಾ.ಸಿ.ಎಸ್.ಮಧುಸೂದನ ಸಪ್ತಾಹದ ಅಂಗವಾಗಿ ‘ರಾಕೆಟ್ ಕ್ರಾಂತಿʼ ಕುರಿತು ಉಪನ್ಯಾಸ ನೀಡಿ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಸ್ಮರಣ ಶಕ್ತಿ, ರಸಪ್ರಶ್ನೆ ಮತ್ತು ಆಶುಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಡಿಪ್ಲೋಮಾ ಕಾಲೇಜಿನ ಸುಮಾರು 970 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.

ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಅಶೋಕ್ ಕೆ.ಆರ್. ಸ್ವಾಗತಿಸಿದರು. ಯು.ಆರ್.ಎಸ್.ಸಿ. ತಾಂತ್ರಿಕ ಅಧಿಕಾರಿ ಶರತ್ ಕುಮಾರ್ ವಂದಿಸಿದರು. ವಂದನಾ ಪ್ರಮೋದ್ ಕುಮಾರ್ ನಿರೂಪಿಸಿದರು.

----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆ ಮೈಸೂರು ಭಾಗಕ್ಕೆ ನಾಲ್ವಡಿ ಹೆಸರಿಡಿ
ಎಸ್ಐಆರ್ ರದ್ದುಪಡಿಸಲು, ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ