ಕನ್ನಡಪ್ರಭ ವಾರ್ತೆ ಮಂಗಳೂರು
ಪಿಲಿಕುಳದಲ್ಲಿ ನ.17,18ರಂದು ಕಂಬಳ ನಡೆಯಲಿರುವ ಹಿನ್ನೆಲೆಯಲ್ಲಿ ಸೋಮವಾರ ಕಂಬಳ ಕರೆಯ ಸಿದ್ಧತೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಶಾಸಕರಾದ ಉಮಾನಾಥ ಕೋಟ್ಯಾನ್, ಮಂಜುನಾಥ ಭಂಡಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ನೇತೃತ್ವದಲ್ಲಿ ಪಿಲಿಕುಳ ಕಂಬಳ ಕರೆಗೆ ಭೇಟಿ ನೀಡಿ ಕೈಗೊಳ್ಳಬೇಕಾದ ಸೌಲಭ್ಯಗಳು ಮತ್ತು ಸಿದ್ಧತೆಗಳನ್ನು ಪರಿಶೀಲಿಸಲಾಯಿತು.ಕಂಬಳದ ಕರೆ ಪುನರ್ ನವೀಕರಣ ಈಗಾಗಲೇ ಬಹುತೇಕ ಅಂತಿಮಗೊಂಡಿದೆ. ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಬೇಕಾದ ಸೌಲಭ್ಯಗಳು, ಕಂಬಳ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಬೇಕಾದ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರದ ಆಯುಕ್ತರು ಕಂಬಳ ಸಿದ್ಧತೆಗಳ ಮೇಲ್ವಿಚಾರಣೆ ವಹಿಸಬೇಕು, ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಕಲ್ಪಿಸಬೇಕು. ವಿದ್ಯುತ್, ಶೌಚಾಲಯ ಮತ್ತಿತರ ವ್ಯವಸ್ಥೆಗಳನ್ನು ಪಿಲಿಕುಳ ಪ್ರಾಧಿಕಾರವು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಕಂಬಳದ ಹಿನ್ನೆಲೆಯಲ್ಲಿ ಪ್ರವೇಶದ್ವಾರ ನಿರ್ಮಾಣ, ಗುತ್ತು ಮನೆಯ ವಿದ್ಯುತ್ ಅಲಂಕಾರ ಮತ್ತಿತರ ವ್ಯವಸ್ಥೆಗಳನ್ನು ಮಾಡಬೇಕು. ಜನಸಂದಣಿ ನಿರ್ವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಸೂಚಿಸಿದರು.
ಈ ಕಂಬಳ ಕೂಟದಲ್ಲಿ ಸುಮಾರು 150ಕ್ಕೂ ಹೆಚ್ಚು ಅಧಿಕ ಜೋಡಿ ಕೋಣಗಳು ಭಾಗವಹಿಸಲಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್. ಆನಂದ್, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ರಶ್ಮಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಆಳ್ವ, ಪ್ರಶಾಂತ್ ಕಾಜವ ಮತ್ತಿತರರು ಇದ್ದರು.