ಪಿಲಿಕುಳ ಹುಲಿ ಮರಿಗಳ ವೀಕ್ಷಣೆಗೆ ಬಿಡುಗಡೆ, ನಾಮಕರಣ

KannadaprabhaNewsNetwork |  
Published : Dec 24, 2025, 03:15 AM IST
ಪಿಲಿಕುಳದಲ್ಲಿ ಹುಲಿಮರಿಗೆ ನಾಮಕರಣ ಮಾಡಿದ ಸಂದರ್ಭ. | Kannada Prabha

ಸಾರಾಂಶ

ಪಿಲಿಕುಳ ಉದ್ಯಾನವನದಲ್ಲಿ ಹುಲಿ ಮರಿಗಳನ್ನು ಪ್ರವಾಸಿಗರ ವೀಕ್ಷಣೆಗೆ ಬಿಡುಗಡೆಗೊಳಿಸುವ ಕಾರ್ಯಕ್ರಮ ಭಾನುವಾರ ಬೆಳಗ್ಗೆ ಉದ್ಯಾನವನದ ಹುಲಿ ಆವರಣದಲ್ಲಿ ನಡೆಯಿತು.

ಮಂಗಳೂರು: ಕರಾವಳಿ ಉತ್ಸವ- 2025ರ ಪ್ರಯುಕ್ತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಹುಲಿ ಮರಿಗಳನ್ನು ಪ್ರವಾಸಿಗರ ವೀಕ್ಷಣೆಗೆ ಬಿಡುಗಡೆಗೊಳಿಸುವ ಕಾರ್ಯಕ್ರಮ ಭಾನುವಾರ ಬೆಳಗ್ಗೆ ಉದ್ಯಾನವನದ ಹುಲಿ ಆವರಣದಲ್ಲಿ ನಡೆಯಿತು. ಇದರೊಂದಿಗೆ ಹುಲಿ ಮರಿಗಳ ನಾಮಕರಣ ಮತ್ತು ದತ್ತು ಸ್ವೀಕಾರ ಕಾರ್ಯಕ್ರಮವೂ ಜರುಗಿತು.

ಜಿಲ್ಲಾಧಿಕಾರಿ ಹಾಗೂ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ದರ್ಶನ್ ಎಚ್.ವಿ., ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಜಂಟಿಯಾಗಿ ಪ್ರವಾಸಿಗರ ವೀಕ್ಷಣೆಗಾಗಿ ಹುಲಿಮರಿಗಳನ್ನು ಬಿಡುಗಡೆಗೊಳಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ, ಹುಲಿ ನನ್ನ ನೆಚ್ಚಿನ ಕಾಡು ಪ್ರಾಣಿಯಾಗಿದ್ದು, ಮುಂದಿನ ಹುಲಿ ಮರಿಯನ್ನು ದತ್ತು ಸ್ವೀಕರಿಸುವ ಅವಕಾಶವನ್ನು ತಮಗೆ ನೀಡಬೇಕೆಂದು ಹೇಳಿದರು.ಟೆನ್ನಿಸನ್‌, ಒಲಿವರ್‌ ನಾಮಕರಣ:

ಮುಖ್ಯ ಅತಿಥಿ, ಕಾರ್ಡೊಲೈಟ್ ಸ್ಪೆಶಾಲಿಟಿ ಕೆಮಿಕಲ್ಸ್‌ನ ಪ್ರಧಾನ ವ್ಯವಸ್ಥಾಪಕ ದಿವಾಕರ್ ಕದ್ರಿ ಅವರು ಹುಲಿ ಮರಿಗಳನ್ನು ದತ್ತು ಸ್ವೀಕರಿಸಿ, ಹೆಣ್ಣು ಹುಲಿ ಮರಿಗೆ ‘ಟೆನ್ನಿಸನ್’ ಎಂದೂ, ಗಂಡು ಹುಲಿ ಮರಿಗೆ ‘ಒಲಿವರ್’ ಎಂದೂ ನಾಮಕರಣ ಮಾಡಿದರು. ಮನುಷ್ಯ- ವನ್ಯಜೀವಿ ಸಂಘರ್ಷವನ್ನು ಸಮರ್ಪಕವಾಗಿ ನಿಭಾಯಿಸಲು ಮನುಷ್ಯನು ಹುಲಿಯ ಬಗ್ಗೆ ಹೆಚ್ಚು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ವಿವರಿಸಿ, ಹುಲಿ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದು ನೆನಪಿಸಿದರು.ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್‌ ಕುಮಾರ್ ಶೆಟ್ಟಿ ಎನ್. ಮಾತನಾಡಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಜೈವಿಕ ಉದ್ಯಾನವನದ ಸಮರ್ಥ ನಿರ್ವಹಣೆ ಮತ್ತು ಅಭಿವೃದ್ಧಿಗೆ ಉದ್ಯಮಿಗಳ ಸಹಕಾರ ಹಾಗೂ ಬೆಂಬಲ ಅಗತ್ಯವಿದೆ ಎಂದು ತಿಳಿಸಿದರು.ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಸಿಂಘೈ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್, ಉಪಸಮಿತಿ ಅಧ್ಯಕ್ಷ ಡಾ.ಶ್ರೀನಿಕೇತನ್, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ. ರಾವ್, ಕರಕುಶಲ ಗ್ರಾಮದ ಯೋಜನಾಧಿಕಾರಿ ಡಾ. ನಿತಿನ್ ಇದ್ದರು. ಜೈವಿಕ ಉದ್ಯಾನವನದ ನಿರ್ದೇಶಕ ಪ್ರಶಾಂತ್ ಕುಮಾರ್ ಪೈ ಸ್ವಾಗತಿಸಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಮುದಾಯ ಸಂಘಟಕ ಶಿವರಾಮ್ ನಾಯಕ್ ವಂದಿಸಿದರು.

ಜೈವಿಕ ಉದ್ಯಾನವನದ ಜೀವ ಶಾಸ್ತ್ರಜ್ಞ ಪ್ರಶಾಂತ್ ಉಬ್ರಂಗಳ ನಿರೂಪಿಸಿದರು. ವೈದ್ಯಾಧಿಕಾರಿ ಡಾ. ದಿವ್ಯಾ ಗಣೇಶ, ಸಹಾಯಕ ಅಭಿಯಂತ ರಾಕೇಶ್ ಡಿ.ಪಿ., ಶೈಕ್ಷಣಿಕ ಅಧಿಕಾರಿ ಸುಚಿತ್ರಾ ಎನ್. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ