ಕನ್ನಡಪ್ರಭ ವಾರ್ತೆ ವಿಜಯಪುರ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 190 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಆರಂಭದಲ್ಲಿ ಕೆಲವು ವಿಕೆಟ್‌ಗಳು ಬೇಗನೆ ಕುಸಿದರೂ ಅರ್ಪಿತ್ ಆರ್. ನಾಗನಾದ್ ಅವರ ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ಪಂದ್ಯಕ್ಕೆ ತಿರುವು ನೀಡಿತು. ಅವರು 54 ಬಾಲ್‌ಗಳಲ್ಲಿ 72 ರನ್ (10 ಫೋರ್, 1 ಸಿಕ್ಸ್) ಗಳಿಸಿ ತಂಡದ ಬಲವಾದ ಅಡಿಪಾಯ ಹಾಕಿದರು.
ಅಂತಿಮ ಹಂತದಲ್ಲಿ ತಂಡದ ನಾಯಕ ವಿಕಾಸ್ ಪಾಟೀಲ್ ಅಬ್ಬರದ ಆಟ ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಅವರು ಕೇವಲ 19 ಬಾಲ್‌ಗಳಲ್ಲಿ 48 ರನ್‌ಗಳನ್ನು (7 ಫೋರ್, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 190ಕ್ಕೆ ತಲುಪಿಸಿದರು. ಅವರ ಸ್ಟ್ರೈಕ್ ರೇಟ್ 252.63 ಆಗಿದ್ದು ಪಂದ್ಯದಲ್ಲಿನ ಅತ್ಯಂತ ಆಕರ್ಷಕ ಇನಿಂಗ್ಸ್‌ಗಳಲ್ಲಿ ಒಂದಾಗಿತ್ತು.190 ರನ್‌ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡಕ್ಕೆ ಕರ್ನಾಟಕದ ಬೌಲರ್‌ಗಳು ಆರಂಭದಿಂದಲೇ ಶಾಕ್ ನೀಡಿದರು. ಸಚಿನ್ ಯಾದವ್ (4 ಓವರ್-3 ವಿಕೆಟ್) ಅವರ ನಿಖರ ಬೌಲಿಂಗ್ ಎದುರು ಲಕ್ನೋ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. ಜಗದೀಶ್ ಕಂಬಾಗಿ (3.5 ಓವರ್-2 ವಿಕೆಟ್) ಮತ್ತು ನಮನ ಎಲ್. ಪವಾರ್ (2 ಓವರ್-2 ವಿಕೆಟ್) ಅವರ ಶಿಸ್ತುಬದ್ಧ ದಾಳಿಯಿಂದ ಲಕ್ನೋ ತಂಡ ಕೇವಲ 103 ರನ್‌ಗಳಿಗೆ ಆಲ್‌ಔಟ್ ಆಯಿತು.
ಪಂದ್ಯದ ಅಂತ್ಯದಲ್ಲಿ ಈ ಭರ್ಜರಿ ಗೆಲುವಿಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಾಫರ್ ಅಂಗಡಿ ಹಾಗೂ ಗೌರವಾಧ್ಯಕ್ಷ ಡಾ.ಅಶೋಕ್ ಕುಮಾರ್ ಜಾಧವ್ ಅವರು ಚಾಂದ್ ಮುಕಾದಮ, ಹಜರತಬಿಲಾಲ ಹೆಬ್ಬಾಳ, ಸಲೀಮ್ ಬೆಪಾರಿ, ಶ್ರೀಕಾಂತ್ ಕಾಖಂಡಕಿ ಹಾಗೂ ಪದಾಧಿಕಾರಿಗಳು ಕರ್ನಾಟಕ ತಂಡಕ್ಕೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದರು.