ಕನ್ನಡಪ್ರಭ ವಾರ್ತೆ ಹಿರಿಯೂರು
ಈ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಜೈರಾಮ್ ರನ್ನು ವಿಚಾರಿಸಿದರೆ ಇಡೀ ನಗರದಲ್ಲೇ ವಿದ್ಯುತ್ ಇಲ್ಲ. ನಾವು ಸಹ ಮದ್ಯಾಹ್ನದಿಂದ ಮೂವರು ಎಲೆಕ್ಟ್ರಿಶಿಯನ್ ಗಳನ್ನು ಇಟ್ಟುಕೊಂಡು ವಿದ್ಯುತ್ ತೊಂದರೆ ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ. ಜನರೇಟರ್ ಇದ್ದು ಅದು ಇವತ್ತೇ ಆನ್ ಆಗುತ್ತಿಲ್ಲ. ಇದೀಗ ರಿಪೇರಿ ಆಗದಿದ್ದರೆ ಬೆಂಗಳೂರಿನಿಂದ ಎಂಜಿನಿಯರ್ ಕರೆಸಿ ರಿಪೇರಿ ಮಾಡಿಸಲಾಗುವುದು ಎಂದು ತಿಳಿಸಿದರು.
ಅದೆಲ್ಲಾ ಸರಿ. ಆದರೆ ಮಕ್ಕಳನ್ನು ಪಕ್ಕ ಇಟ್ಟುಕೊಂಡು ಬಾಣಂತಿಯರು ಸೊಳ್ಳೆಗಳ ಹಾವಳಿಯಲ್ಲಿ ಆ ಕತ್ತಲಲ್ಲಿ ಇರುವುದು ಹೇಗೆ ಎಂಬುದಕ್ಕೆ ಅವರ ಬಳಿ ಉತ್ತರವಿರಲಿಲ್ಲ. ಜನರೇಟರ್ ಸುಸ್ಥಿತಿಯಲ್ಲಿದೆಯಾ ಇಲ್ಲವಾ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕಾದವರ ಬೇಜವಾಬ್ದಾರಿತನದಿಂದ ಮಂಗಳವಾರ ರೋಗಿಗಳು ಕತ್ತಲೆ ಕೋಣೆಯಲ್ಲಿ ಕಾಲ ಕಳೆಯುವಂತಾಯಿತು. ಈ ಬಗ್ಗೆ ಆಸ್ಪತ್ರೆಯ ಬಾಣಂತಿಯರ ಕೊಠಡಿಯಲ್ಲಿನ ರೋಗಿಗಳ ಸಂಬಂಧಿಕರೊಬ್ಬರು ಪ್ರತಿಕ್ರಿಯಿಸಿ ಮದ್ಯಾಹ್ನದಿಂದ ಕತ್ತಲಲ್ಲೇ ಕುಳಿತಿದ್ದೇವೆ. ಟಾರ್ಚ್ ಹಾಕಿಕೊಂಡು ರೋಗಿಗಳನ್ನು ಪರೀಕ್ಷಿಸುವುದು, ಚಿಕಿತ್ಸೆ ಕೊಡುವುದನ್ನು ಮಾಡುತ್ತಿದ್ದಾರೆ. ಕೇಳಿದರೆ ಎಲ್ಲಾ ಕಡೆಯೂ ಕರೆಂಟ್ ಹೋಗಿದೆ ಎನ್ನುತ್ತಾರೆ. ಸೊಳ್ಳೆಗಳ ವಿಪರೀತ ಕಾಟ ಶುರುವಾಗಿದೆ. ರಾತ್ರಿಯೂ ಕರೆಂಟ್ ಬರದಿದ್ದರೆ ಗತಿಯೇನು ಎಂದು ಆತಂಕವಾಗುತ್ತಿದೆ ಎಂದರು.
ಕರವೇ ಗೌರವಾಧ್ಯಕ್ಷ ಗೋ ಬಸವರಾಜ್ ಮಾತನಾಡಿ, ನಗರದ ಸರ್ಕಾರಿ ಆಸ್ಪತ್ರೆಯ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಕಳೆದ ಕೆಲವೇ ದಿನಗಳ ಹಿಂದೆ ರಾತ್ರಿ ಪಾಳಿಯ ವೈದ್ಯರ ನಿರ್ಲಕ್ಷದ ಬಗ್ಗೆ ನಾವೇ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಸಿಸಿ ಟಿವಿ ತೆಗೆಸಿ ರಾತ್ರಿ ಪಾಳಿಯ ವೈದ್ಯರು ವಿಶ್ರಾಂತಿ ಕೊಠಡಿಯಲ್ಲಿರುವುದನ್ನು ಆಡಳಿತ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದೆವು. ಇದೀಗ ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಬಾಣಂತಿಯರು ಕತ್ತಲಲ್ಲಿ ಕುಳಿತಿದ್ದಾರೆ. ಬಡವರ ಅನುಕೂಲಕ್ಕೆ ಎಂದು ಇರುವ ಆಸ್ಪತ್ರೆಗಳಲ್ಲಿ ಆಡಳಿತ ವರ್ಗದ ನಿರ್ಲಕ್ಷದಿಂದ ಬಡವರಿಗೆ ತೊಂದರೆಯಾಗುತ್ತಿರುವುದು ದುರಂತದ ಸಂಗತಿ. ಹೇಳಿಕೊಳ್ಳಲು ಇಲ್ಲಿ ಶಾಸಕರು ಇಲ್ಲ. ಮೇಲಾಧಿಕಾರಿಗಳು ಮೊದಲು ಇಲ್ಲಿನ ಅವ್ಯವಸ್ಥೆ ಸರಿಪಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.