ಸರ್ಕಾರಿ ಕಚೇರಿಗಳಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ: ಪೈಲ್ವಾನ್ ಮುಕುಂದ

KannadaprabhaNewsNetwork | Published : Jun 25, 2024 12:38 AM

ಸಾರಾಂಶ

ರಾಜ್ಯ ರಾಜಧಾನಿ ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಅಲ್ಲದೆ ಪ್ರತಿ ಸಮಾಜದವರಿಗೂ ನಾಡಪ್ರಭು ಕೆಂಪೇಗೌಡರಿಂದ ಅವರದೇ ಆದ ಕೊಡುಗೆಗಳನ್ನು ನೀಡಿದ್ದು, ಇದರಿಂದಾಗಿ ಸರ್ಕಾರ ಜೂ.27ರಂದು ಕೆಂಪೇಗೌಡ ಜಯಂತಿ ಆಚರಣೆ ಮಾಡಲು ಘೋಷಣೆ ಮಾಡಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸರ್ಕಾರಿ ಕಚೇರಿಗಳಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಕಡ್ಡಾಯವಾಗಿ ಇಟ್ಟು ಪೂಜೆ ಸಲ್ಲಿಸಬೇಕು ಎಂದು ಸಮಾಜದ ಮುಖಂಡ ಪೈಲ್ವಾನ್ ಮುಕುಂದ ಒತ್ತಾಯಿಸಿದರು.

ತಾಲೂಕು ಆಡಳಿತದಿಂದ ಜೂ.27 ರಂದು ಹಮ್ಮಿಕೊಂಡಿರುವ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪರುಶುರಾಮ ಸತ್ತಿಗೇರಿ ಅಧ್ಯಕ್ಷತೆಯಲ್ಲಿ ನಡೆದ ಒಕ್ಕಲಿಗ ಸಮಾಜದ ಮುಖಂಡರು ಹಾಗೂ ಇತರೆ ಸಂಘ ಸಂಸ್ಥೆಗಳ ಮುಖಂಡರು ಪೂರ್ವ ಭಾವಿ ಸಭೆಯಲ್ಲಿ ಆಗ್ರಹಿಸಿದರು.

ರಾಜ್ಯ ರಾಜಧಾನಿ ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಅಲ್ಲದೆ ಪ್ರತಿ ಸಮಾಜದವರಿಗೂ ನಾಡಪ್ರಭು ಕೆಂಪೇಗೌಡರಿಂದ ಅವರದೇ ಆದ ಕೊಡುಗೆಗಳನ್ನು ನೀಡಿದ್ದು, ಇದರಿಂದಾಗಿ ಸರ್ಕಾರ ಜೂ.27ರಂದು ಕೆಂಪೇಗೌಡ ಜಯಂತಿ ಆಚರಣೆ ಮಾಡಲು ಘೋಷಣೆ ಮಾಡಿದೆ ಎಂದರು.

ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಕೆಂಪೇಗೌಡರ ಭಾವಚಿತ್ರಗಳನ್ನು ಅಳವಡಿಸಿಕೊಳ್ಳಬೇಕು. ಇದು ಶ್ರೀರಂಗಪಟ್ಟಣ ತಾಲೂಕಿನಿಂದಲೆ ಮೊದಲು ಆಗಬೇಕು ಎಂದು ಎಲ್ಲಾ ಸಮಾಜದ ಮುಖಂಡರು ಒಮ್ಮತ ತೋರಿದ ಹಿನ್ನೆಲೆಯಲ್ಲಿ ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕೆಂಪೇಗೌಡ ಜಯಂತಿ ಅಂಗವಾಗಿ ವರ್ಷಕ್ಕೆ ಒಂದೊಂದು ಕೆರೆಗಳ ಅಭಿವೃದ್ದಿ ಗೊಳಿಸಲು ಸರ್ಕಾರದಿಂದ ಗ್ರಾಪಂ ಪಿಡಿಒ ಅಧಿಕಾರಿಗಳಿಗೆ ಸೂಚನೆ ಮಾಡಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಸಂದೇಶ್ ಒತ್ತಾಯಿಸಿದರು.

ಕೆಂಪೇಗೌಡರ ಜಯಂತಿ ಆಚರಣೆ ಹಿನ್ನಲೆ ಪೂರ್ವ ಸಿದ್ದತಾ ಸಭೆಗೆ ಸರ್ಕಾರಿ ತಾಲೂಕು ಮಟ್ಟದ ಅಧಿಕಾರಿಗಳ ಗೈರು ಜೊತೆಗೆ ಸ್ಥಳೀಯ ಶಾಸಕರು ಜನಪ್ರತಿನಿಧಿಗಳ ಗೈರು ಹಾಜರಿಯಿಂದ ಸಮಾಜದ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ ಅಲಂಕಾರ ಸೇರಿದಂತೆ ಇತರ ಚರ್ಚೆಗಳು ನಡೆಯಿತು.

ನಂತರ ತಹಸೀಲ್ದಾರ್ ಪರಶುರಾಮ್ ಮಾತನಾಡಿ, ಸರ್ಕಾರದ ಆದೇಶದಂತೆ ಈ ಭಾರಿ ಕೆಂಪೇಗೌಡರ ಜಯಂತಿ ಆಚರಣೆಗೆ ಒಂದು ಲಕ್ಷ ರು. ಬಿಡುಗಡೆ ಮಾಡಲು ಸರ್ಕಾರ ತಿಳಿಸಿದೆ. ಇದೇ ವೆಚ್ಚದಲ್ಲಿ ಅದ್ದೂರಿಯಾಗಿ ಕೆಂಪೇಗೌಡ ಜಯಂತಿ ಆಚರಣೆಗೆ ಈಗಾಗಲೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.

ಸಾಂಕೇತಿಕವಾಗಿ ಸಂಘ ಸಂಸ್ಥೆಗಳ ಮುಖಂಡರ ಸಭೆ ಕರೆದು ಆಚರಣೆ ಕುರಿತು ಚರ್ಚೆ ಮಾಡಿದ್ದು ಸಭೆಯ ನಿರ್ಣಯಗಳನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಈ ಬಾರಿ ಕೆಂಪೇಗೌಡರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಎಲ್ಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ್ಷ ಗೌಡಹಳ್ಳಿ ದೇವರಾಜು, ನಗರ ಘಟಕ ಕಾಂಗ್ರೆಸ್ ಅಧ್ಯಕ್ಷ ಎಂ.ಸುರೇಶ್, ಪುರಸಭೆ ಸದಸ್ಯರಾದ ಎಂ. ಕೃಷ್ಣಪ್ಪ, ಎಸ್. ಪ್ರಕಾಶ್, ನರಸಿಂಹೇಗೌಡ, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಮರಳಗಾಲ ಗುರು, ಕಾರ್ಯದರ್ಶಿ ಯೋಗಣ್ಣ, ನಗುವನಹಳ್ಳಿ ಶಿವಸ್ವಾಮಿ, ಕೆಂಪೇಗೌಡ ಯುವ ಶಕ್ತಿ ವೇದಿಕೆ ಅಧ್ಯಕ್ಷ್ಷ ಮಹೇಶ್, ಕರವೇ ಅಧ್ಯಕ್ಷ ಶಂಕರ್ ಚಂದಗಾಲು, ಕಸಾಪ ನಗರ ಘಟಕ ಅಧ್ಯಕ್ಷೆ ಸರಸ್ವತಿ ಪಶ್ಚಿಮವಾಹಿನಿ, ಉದಯಕುಮಾರ್, ಮರಿಸ್ವಾಮಿಗೌಡ, ಡಿಎಸ್‌ಎಸ್‌ಎಸ್ ಮುಖಂಡ ರವಿಚಂದ್ರ, ಟೆಂಪೋ ಪ್ರಕಾಶ್, ಸ್ವಾಮಿಗೌಡ, ಉದ್ಯೋಗದಾತ ರುಕ್ಮಾಂಗದ ಸೇರಿದಂತೆ ಇತರ ಮುಖಂಡರು ಇದ್ದರು.

Share this article