ಪರಿಷತ್‌ ಉಪಚುನಾವಣೆಯಲ್ಲಿ ದೊಡ್ಡ ಅಂತರದ ಗೆಲುವಿಗೆ ಯೋಜನೆ: ಕೋಟ

KannadaprabhaNewsNetwork |  
Published : Oct 04, 2024, 01:01 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೋಟ ಶ್ರೀನಿವಾಸ ಪೂಜಾರಿ. | Kannada Prabha

ಸಾರಾಂಶ

ಕಿಶೋರ್‌ ಕುಮಾರ್‌ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಜನತೆಗಿರುವ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಗ್ರಾಮೀಣ ಭಾಗದವರಾಗಿ ಸ್ಥಳೀಯ ಸಂಸ್ಥೆಗಳ ಮೂಲಭೂತ ಸಮಸ್ಯೆಗಳ ಅರಿವು ಅವರಿಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್‌ ಕುಮಾರ್‌ ಪುತ್ತೂರು ಅವರನ್ನು ದೊಡ್ಡ ಅಂತರದಿಂದ ಗೆಲ್ಲಿಸಲು ಯೋಜನೆ ರೂಪಿಸಿದ್ದೇವೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ 6,037 ಒಟ್ಟು ಮತದಾರರ ಪೈಕಿ ಬಿಜೆಪಿ ಮತಗಳು 3500ರಷ್ಟಿವೆ. ಗೆಲುವು ಶತಸಿದ್ಧ ಎಂದರು.

ಸಣ್ಣ ಸಮುದಾಯದ ಹಿಂದುಳಿದ ವರ್ಗಕ್ಕೆ ಸೇರಿದ ಕಿಶೋರ್‌ ಕುಮಾರ್‌ ಅವರಿಗೆ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ. ಆ ಮೂಲಕ ಬಿಜೆಪಿಯು ಕಾರ್ಯಕರ್ತರ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದ ಕೋಟ, ಪಕ್ಷದ ಎಲ್ಲ ಹಂತದ ನಾಯಕರು ಕಿಶೋರ್‌ ಕುಮಾರ್‌ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.

ಕಿಶೋರ್‌ ಕುಮಾರ್‌ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಜನತೆಗಿರುವ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಗ್ರಾಮೀಣ ಭಾಗದವರಾಗಿ ಸ್ಥಳೀಯ ಸಂಸ್ಥೆಗಳ ಮೂಲಭೂತ ಸಮಸ್ಯೆಗಳ ಅರಿವು ಅವರಿಗಿದೆ ಎಂದರು.

ಈ ಕ್ಷೇತ್ರದಿಂದ 2008ರಲ್ಲಿ ನಾನು ಎಂಎಲ್ಸಿಯಾಗಿ ಆಯ್ಕೆಯಾದೆ. ಗ್ರಾಪಂ ಸದಸ್ಯರಿಗೆ 2 ಸಾವಿರ ರು. ಗೌರವಧನ ಸಿಗಲು ಕಾರಣಕರ್ತನಾಗಿದ್ದೆ. ನಾನು ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಿದ ಪರಿಣಾಮ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮುಂಗಡ ಪತ್ರದಲ್ಲಿ ಗೌರವ ಧನವನ್ನು ಘೋಷಿಸಿದ್ದರು. ಇದೆಲ್ಲ ನಮ್ಮ ಮತದಾರರಿಗೆ ತಿಳಿದಿದೆ ಎಂದರು.

ಸಿಎಂ ರಾಜೀನಾಮೆ ನೀಡಲಿ:

ಸಿಎಂ ಸಿದ್ದರಾಮಯ್ಯ ಮೂಡ ಪ್ರಕರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, 2011ರಲ್ಲಿ ಯಡಿಯೂರಪ್ಪ ಪುತ್ರನಿಗೆ ನಿವೇಶನ ಮಂಜೂರು ಮಾಡಿದ ಆರೋಪ ಬಂದಾಗ ಆ ನಿವೇಶನವನ್ನು ಸರ್ಕಾರಕ್ಕೆ ವಾಪಸ್‌ ಕೊಟ್ಟಿದ್ದರು. ನಿವೇಶನ ವಾಪಸ್‌ ಕೊಟ್ಟದ್ದೇ ತಪ್ಪಿಗೆ ಆಧಾರ, ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಅಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅದೇ ನ್ಯಾಯ ಈಗ ಸಿದ್ದರಾಮಯ್ಯ ಅವರಿಗೂ ಅನ್ವಯ ಆಗಬೇಕು, ಅವರು ರಾಜೀನಾಮೆ ನೀಡಬೇಕು ಎಂದರು.

ವಿಧಾನ ಪರಿಷತ್‌ ಅಭ್ಯರ್ಥಿ ಕಿಶೋರ್‌ ಕುಮಾರ್‌ ಪುತ್ತೂರು, ಶಾಸಕ ವೇದವ್ಯಾಸ ಕಾಮತ್‌, ಮುಖಂಡರಾದ ಪ್ರೇಮಾನಂದ ಶೆಟ್ಟಿ, ನಿತಿನ್‌ ಕುಮಾರ್‌, ಸಂಜಯ ಪ್ರಭು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ