ಸಭೆಯಲ್ಲಿ ಮುರುಡೇಶ್ವರ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪ
ಮುರುಡೇಶ್ವರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಮುರುಡೇಶ್ವರದಲ್ಲಿ ಶಿವರಾತ್ರಿ ಉತ್ಸವ ಆಚರಣೆ ಪ್ರಯುಕ್ತ ಕರೆದ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಮುಖಂಡ ಕೃಷ್ಣಾ ನಾಯ್ಕ ಜಮೀನ್ದಾರ ಮಾತನಾಡಿ, ಮುರುಡೇಶ್ವರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಬೇಕು. ಮಣಿಪಾಲ್ ರೀತಿ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ರಾತ್ರಿ 8.30ರ ನಂತರ ಸಾರ್ವಜನಿಕ ಶೌಚಾಲಯ ಬಂದ್ ಆಗುವುದರಿಂದ ಪ್ರವಾಸಿಗರಿಗೆ ತೊಂದರೆ ಆಗುತ್ತಿದೆ. ಬೀಚ್ ಕ್ಲೀನಿಂಗ್ ವ್ಯವಸ್ಥೆ ಆಗಬೇಕು. ಸಮುದ್ರಕ್ಕಿಳಿಯುವ ಪ್ರವಾಸಿಗರಿಗೆ ಲೈಪ್ ಜಾಕೆಟ್ ಕೊಡಬೇಕು. ಬೀಚಿನಲ್ಲಿ ರಾತ್ರಿ ವೇಳೆ ಲೈಟಿಂಗ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಇತ್ತೀಚೆಗೆ ಮುರುಡೇಶ್ವರ ದೇವಸ್ಥಾನದ ಹೆಸರಿನಲ್ಲಿ ಯಾವುದೋ ಊರಿನ ವ್ಯಕ್ತಿಗಳು ಸುಳ್ಳು ಸ್ಕೀಮ್, ಲಾಟರಿ ಮಾಡಿ ಜನರನ್ನು ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರೂ ಆರೋಪಿಗಳನ್ನು ಹಿಡಿದು ಬಂಧಿಸುವ ಕೆಲಸ ಆಗಿಲ್ಲ. ಸುಳ್ಳು ಸ್ಕೀಮ್ ಮಾಡಿದವನಿಗೆ ಕರೆ ಮಾಡಿದರೆ ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕುತ್ತಾನೆ. ಮುರುಡೇಶ್ವರದ ದೇವಸ್ಥಾನದ, ದೇವರ ಹೆಸರಿನಲ್ಲಿ ಸುಳ್ಳು ಸ್ಕೀಮ್, ಲಾಟರಿ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಮುಂದೆ ಹೀಗಾದರೆ ನಾವೇ ಬುದ್ಧಿ ಕಲಿಸಬೇಕಾಗುತ್ತದೆ ಎಂದರು.ಸಚಿವರು ಮಾತನಾಡಿ, ಮುರುಡೇಶ್ವರ ಪಟ್ಟಣ ಪಂಚಾಯಿತಿ ಆಗಲಿದೆ. ಮುರುಡೇಶ್ವರದಲ್ಲಿ 200ಕ್ಕೂ ಅಧಿಕ ಹೊಟೆಲ್ ಇದ್ದು, ಇದರ ತ್ಯಾಜ್ಯ ಹಾಕಲು ಸರಿಯಾದ ಸ್ಥಳವಿಲ್ಲ. ಮುರುಡೇಶ್ವರದಲ್ಲಿ ಸ್ವಚ್ಛತೆಯದ್ದೇ ಸಮಸ್ಯೆ ಆಗಿದೆ. ಪ್ರಮುಖರು 5 ಎಕರೆ ಜಾಗ ಗುರುತಿಸಿ ಕೊಟ್ಟಲ್ಲಿ ಸರಕಾರದಿಂದ ತ್ಯಾಜ್ಯ ವಿಲೇವಾರಿ ಘಟಕಕ್ಕೆ 6 ತಿಂಗಳೊಳಗೆ ಹಣ ಮಂಜೂರಿಸಿಕೊಂಡು ಬರುವುದಾಗಿ ಹೇಳಿದರು.
ಉಪಸ್ಥಿತರಿದ್ದ ಪುಷ್ಪಲತಾ ವೈದ್ಯ, ಮುರುಡೇಶ್ವರ ಬೀಚಿನಲ್ಲಿ ಹೆಚ್ಚು ಡಸ್ಟಬಿನ್ ಇಟ್ಟು ಅದರಲ್ಲಿ ಸಂಗ್ರಹವಾಗುವ ತ್ಯಾಜ್ಯ, ಕಸವನ್ನು ದಿನಂಪ್ರತಿ ವಿಲೇ ಮಾಡಬೇಕು ಎಂದು ಸಲಹೆ ನೀಡಿದರು.