ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಜಿಪಂ ವತಿಯಿಂದ ಜಿಲ್ಲೆಯ ಗ್ರಾಪಂಗಳ ಗ್ರಂಥಾಲಯ ಮೇಲ್ವಿಚಾರಕರಿಗಾಗಿ ಮಲ್ಲಿಗೇನಹಳ್ಳಿಯ ಸನ್ನಿಧಿ ಸೆಂಟರ್ ಫಾರ್ ಪ್ಯಾಸ್ಟರಲ್ ರಿನಿವಲ್ ಚರ್ಚ್‌ನಲ್ಲಿ ಏರ್ಪಡಿಸಿದ್ದ “ನಾನು ವಿಜ್ಞಾನಿ” ತರಬೇತಿ ಕಾರ್ಯಾಗಾರದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಇಂದು ಮಾನಸಿಕವಾಗಿ ಮೊಬೈಲ್ ಮತ್ತು ಆನ್‌ಲೈನ್ ವ್ಯಾಮೋಹಕ್ಕೆ ಒಳಗಾಗಿದ್ದಾರೆ. 2030ರ ವೇಳೆಗೆ ನಮ್ಮ ದೇಶದ ಶೇಕಡ 65 ರಷ್ಟು ಯುವ ಪೀಳಿಗೆ ಮೊಬೈಲ್ ಬಳಕೆಯಿಂದ ಮಾನಸಿಕ ಅಸಮತೋಲನ ಎದುರಿಸಲಿದ್ದು, ಮುಂದಿನ ದಿನಗಳಲ್ಲಿ ಅವರುಗಳಿಗೆ ಮಾನಸಿಕ ತೊಳಲಾಟದಿಂದ ಹೊರಬರಲು ನರರೋಗ ತಜ್ಞರು ಮತ್ತು ಮಾನಸಿಕ ವೈದ್ಯರ ಅವಶ್ಯಕತೆ ಇದ್ದು, ಅಂಕಿ ಅಂಶಗಳ ಪ್ರಕಾರ ಮಾನಸಿಕ ಮತ್ತು ನರರೋಗ ತಜ್ಞರು 2 ಲಕ್ಷ ಜನಕ್ಕೆ ಒಬ್ಬರಂತೆ ಇರುವುದನ್ನು ಗಮನಿಸಬಹುದಾಗಿದೆ ಎಂದು ಹೇಳಿದರು.
ಆದ್ದರಿಂದ ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ ಮತ್ತು ಶೈಕ್ಷಣಿಕ ಪ್ರತಿಭೆಯ ಅನಾವರಣಕ್ಕೆ ಇದು ಸೂಕ್ತ ವೇದಿಕೆಯಾಗಿದ್ದು, ಗ್ರಾಮೀಣ ಗ್ರಂಥಾಲಯ/ಜ್ಞಾನ ಕೇಂದ್ರಗಳನ್ನು ವಿಜ್ಞಾನ ಕಲಿಕೆಯ ಕೇಂದ್ರಗಳನ್ನಾಗಿ ಪರಿವರ್ತಿಸುವ ಇಂತಹ ಕಾರ್ಯಗಳಿಂದ ಗ್ರಾಮೀಣ ಯುವ ಪೀಳಿಗೆಯು ವಿಜ್ಞಾನದ ಕಡೆಗೆ ಹೆಚ್ಚು ಆಸಕ್ತಿ ಹೊಂದುವಂತಾಗಲಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಸದರು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರನ್ನು ಸ್ಮರಿಸಿ ಅವರು ಸಹ ರಾಮೇಶ್ವರಂನ ಒಂದು ಚಿಕ್ಕ ಹಳ್ಳಿಯಿಂದ ಬೆಳೆದು ಬಂದು ವಿಜ್ಞಾನದ ಕಡೆಗೆ ಹೆಚ್ಚು ಆಸಕ್ತಿ ಹೊಂದಿ ಹಲವಾರು ಕೊಡುಗೆಗಳನ್ನು ದೇಶಕ್ಕೆ ನೀಡಿ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದರು ಎಂದು ತಿಳಿಸಿದರು.ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ನಮ್ಮ ಊರು ನಮ್ಮ ಬೇರು ಎಂಬ ತತ್ವವನ್ನು ಇಟ್ಟುಕೊಂಡು ಇಂದು ಜಿಲ್ಲೆಯ ಗ್ರಂಥಪಾಲಕರುಗಳು ಹವ್ಯಾಸಿ ವಿಜ್ಞಾನಿಗಳಾಗಿ ನಾನು ವಿಜ್ಞಾನಿ ಎಂಬ ವಿಜ್ಞಾನ ಮತ್ತು ಖಗೋಳ ವಿಜ್ಞಾನ ಕಾರ್ಯಾಗಾರವನ್ನು ಯಶಸ್ವಿಯಾಗಿ ಆರಂಭಿಸುವ ಮೂಲಕ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಹೆಜ್ಜೆಯನ್ನು ಇಡಲಾಗಿದೆ ಎಂದರು.
ಮುಂದಿನ ಭವಿಷ್ಯದ ಭಾಗವಾಗಿ, ಶಿವಮೊಗ್ಗ ಜಿಲ್ಲೆಯಾದ್ಯಂತ ವಿಜ್ಞಾನ ಕ್ಲಬ್‌ಗಳನ್ನು ಸ್ಥಾಪಿಸಲಾಗುವುದೆಂದು, ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಸಮುದಾಯಗಳು ಬ್ರಹ್ಮಾಂಡದ ಅದ್ಭುತಗಳನ್ನು ಅನ್ವೇಷಿಸಲು ಮತ್ತು ವೈಜ್ಞಾನಿಕ ಕುತೂಹಲವನ್ನು ಬೆಳೆಸಲು ಮಾರ್ಗದರ್ಶನ ನೀಡುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸನ್ನಿಧಿ ಸೆಂಟರ್ ಫಾರ್ ಪ್ಯಾಸ್ಟರಲ್ ರನೀವಲ್ ಚರ್ಚ್‌ನ ಮುಖ್ಯಸ್ಥರಾದ ಫಾ. ಪಿಂಟೋ, ಉಪ ಕಾರ್ಯದರ್ಶಿ ಸುಜಾತ, ವಿಜ್ಞಾನಿಗಳು, ಗ್ರಂಥಪಾಲಕರು ಸೇರಿ ಇತರರು ಉಪಸ್ಥಿತರಿದ್ದರು.