ಲಿಂಗಸುಗೂರು ಶೀಲಹಳ್ಳಿ ಸೇತುವೆ ಎತ್ತರಿಸಲು ಯೋಜನೆ

KannadaprabhaNewsNetwork |  
Published : Jun 25, 2025, 11:47 PM IST
25ಕೆಪಿಎಲ್ಎನ್ಜಿ01 : | Kannada Prabha

ಸಾರಾಂಶ

ಕೃಷ್ಣಾನದಿ ನೆರೆ ಬಾಧಿತ ನಡುಗಡ್ಡೆ ಗ್ರಾಮಗಳು ಹಾಗೂ ದ್ವೀಪಗಳಿಗೆ ಸೇತುವೆ ನಿರ್ಮಿಸಲು ಸರ್ಕಾರ ಮುಂದಾಗಿದ್ದು, ಸ್ವಾತಂತ್ರ್ಯ ಬಳಿಕ ಸರ್ಕಾರ ನಡುಗಡ್ಡೆ ಜನರ ಪ್ರವಾಹ ಪ್ರಹಸನಕ್ಕೆ ಮುಕ್ತಿ ನೀಡಿತೇ ಎಂದು ನಡುಗಡ್ಡೆ ಜನರು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.

ಗುರುರಾಜ ಗೌಡೂರು

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕೃಷ್ಣಾನದಿ ನೆರೆ ಬಾಧಿತ ನಡುಗಡ್ಡೆ ಗ್ರಾಮಗಳು ಹಾಗೂ ದ್ವೀಪಗಳಿಗೆ ಸೇತುವೆ ನಿರ್ಮಿಸಲು ಸರ್ಕಾರ ಮುಂದಾಗಿದ್ದು, ಸ್ವಾತಂತ್ರ್ಯ ಬಳಿಕ ಸರ್ಕಾರ ನಡುಗಡ್ಡೆ ಜನರ ಪ್ರವಾಹ ಪ್ರಹಸನಕ್ಕೆ ಮುಕ್ತಿ ನೀಡಿತೇ ಎಂದು ನಡುಗಡ್ಡೆ ಜನರು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.

ಜಲದುರ್ಗದಿಂದ ಕವಲೊಡೆದು ಸಾಗುವ ಕೃಷ್ಣಾನದಿ ನಡುಗಡ್ಡೆಯಲ್ಲಿ ಜಲದುರ್ಗ, ಹಂಚಿನಾಳ, ಯರಗೋಡಿ, ಯಳಗುಂದಿ, ಕಡದರಗಡ್ಡಿ ಸೇರಿ 5 ಗ್ರಾಮಗಳಿವೆ. ಕೃಷ್ಣಾನದಿಯ ದ್ವೀಪದಲ್ಲಿ ಕರಕಲಗಡ್ಡಿ, ವಂಕಮ್ಮನಗಡ್ಡಿ, ಮಾದರಗಡ್ಡಿ 3 ದ್ವೀಪಗಳು ಇವೆ. ದ್ವೀಪದಲ್ಲಿ 80 ರಿಂದ 100 ಎಕರೆ ಫಲವತ್ತಾದ ಜಮೀನು ಇದ್ದು, ಕೃಷಿ ಮಾಡುತ್ತಾ ದ್ವೀಪದಲ್ಲಿ ಹತ್ತಾರು ಕುಟುಂಬಗಳು ವಾಸ ಮಾಡುತ್ತಿವೆ. ಕೃಷಿ ಜೊತೆಗೆ ದ್ವೀಪಗಳ ಜನರು ಕುರಿ-ಮೇಕೆ, ಜಾನುವಾರುಗಳ ಸಾಕಾಣಿಕೆ ಮಾಡಿ ಕೊಂಡು ಉಭಯ ವಾಸಿಗಳಂತೆ ಜೀವನ ದೂಡುತ್ತಿದ್ದಾರೆ.

ಕೃಷ್ಣಾನದಿಯಲ್ಲಿ ಪ್ರವಾಹದಿಂದ ಬಾಹ್ಯ ಸಂಪರ್ಕ ಕಡಿದುಕೊಂಡು ಜೀವ ಭಯದಲ್ಲಿ ದ್ವೀಪಗಳಲ್ಲಿ ವಾಸ ಮಾಡುತ್ತಿದ್ದರು. ದ್ವೀಪದಲ್ಲಿ ಸಿಲುಕಿದ ಜನರನ್ನು ಹೊರ ತರಲು ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿತ್ತು. ಜೊತೆಗೆ ಕೃಷ್ಣಾನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಾಗ 4 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ನಾಲ್ಕು ಹಳ್ಳಿಗಳ ಸಂಪರ್ಕ ಕಡಿತಗೊಂಡು ಸಾವಿರಾರು ಜನರು ವಾರಗಟ್ಟಲೆ ನಡುಗಡ್ಡೆಯಲ್ಲಿ ವಾಸ ಮಾಡುತ್ತಿ ದ್ದರು. ಹಲವು ವರ್ಷಗಳ ಹಿಂದೆ ಜಲದುರ್ಗ ಸೇತುವೆ ಮೇಲೆ ನೀರು ಬಂದು ಸಂಪರ್ಕ ಕಡಿತಗೊಂಡು ಅಂದಿನ ತಹಸೀಲ್ದಾರ್‌ ಚಾಮರಾಜ ಪಾಟೀಲ್, ಸಿಡಿಪಿಒ ಸೇರಿದಂತೆ ಅನೇಕ ಅಧಿಕಾರಿ, ಸಿಬ್ಬಂದಿ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು. ನಡುಗಡ್ಡೆ ಜನರ ಸಮಸ್ಯೆ ಜಿಲ್ಲಾಡಳಿತಕ್ಕೆ ತೀವ್ರ ತಲೆ ನೋವಾಗಿತ್ತು. ಜಿಲ್ಲಾಧಿಕಾರಿ, ಎಸ್.ಪಿ, ಸಹಾಯಕ ಆಯುಕ್ತ, ತಹಸೀಲ್ದಾರ, ವೈದ್ಯರು ಸೇರಿದಂತೆ ಸರ್ಕಾರದ ನಾನಾ ಇಲಾಖೆ ಅಧಿಕಾರಿಗಳಿಗೆ ಕೃಷ್ಣಾನದಿಯಲ್ಲಿ ನೆರೆ ಆರಂಭಗೊಂಡರೆ ಸಾಕು ನಡುಗಡ್ಡೆ ಗ್ರಾಮಗಳ ಜನರ ರಕ್ಷಣೆ ಹಾಗೂ ಅಲ್ಲಿರುವ ಜನರಿಗೆ ಮೂಲಸೌಕರ್ಯಗಳ ವ್ಯವಸ್ಥೆ ಮತ್ತು ಸುತ್ತು ಬಳಸಿ ತಾಲೂಕು ಕೇಂದ್ರಕ್ಕೆ ಆಗಮಿಸಲು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಬೇಕಿದೆ. ಇನ್ನೂ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಗೋಳಂತೂ ಹೇಳತೀರದಾಗಿತ್ತು.

---

ಬಾಕ್ಸ್:

ಸಚಿವ ಸಂಪುಟದಲ್ಲಿ ಅನುಮೋದನೆ

ಕೊನೆಗೂ ಸರ್ಕಾರ ಕೃಷ್ಣಾನದಿಗೆ ಅಡ್ಡಲಾಗಿ ಶೀಲಹಳ್ಳಿ ಬಳಿ ನಿರ್ಮಿಸಿರುವ ಸೇತುವೆ ಎತ್ತರಿಸಲು ₹23.51 ಕೋಟಿ ವೆಚ್ಚದ ಕಾಮಗಾರಿಗೆ ಕಳೆದ ಜೂ.19 ರಂದು ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ನಡುಗಡ್ಡೆ ಜನರಲ್ಲಿ ಹರ್ಷಕ್ಕೆ ಕಾರಣವಾಗಿದೆ.

ಸೇತುವೆಗಳಿಗೆ ಕೋಟ್ಯಾಂತರ ಅಂದಾಜು

ನೆರೆ ಬಂದಾಗ ಕೃಷ್ಣಾನದಿ ನಡುಗಡ್ಡೆಯ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲು ಸರ್ಕಾರ ಇಚ್ಛಿಸಿದ್ದು, ಅದರಂತೆ ಶೀಲಹಳ್ಳಿ ಸೇತುವೆ ಎತ್ತರಿಸುವುದು ಕರಕಲಗಡ್ಡಿ, ಮಾದರಗಡ್ಡಿ, ವಂಕಮ್ಮಗಡ್ಡಿ ದ್ವೀಪಗಳು ಹಾಗೂ ಗೋನವಾಟ್ಲದಿಂದ ಕಡದರಗಡ್ಡಿಗೆ ಕಾಲು ಸೇತುವೆ ನಿರ್ಮಿಸಲು ವಿಸೃತ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈಗಾಗಲೇ ಸರ್ಕಾರದ ಮಟ್ಟದಲ್ಲಿಅಂದಾಜು 100 ಕೋಟಿಗೂ ಅಧಿಕ ವೆಚ್ಚದಲ್ಲಿ ಕಾರ್ಯ ಯೋಜನೆಗಳು ರೂಪುಗೊಳ್ಳುತ್ತಿರುವುದ ಎನ್ನಲಾಗುತ್ತಿದೆ.

ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕಕ್ಕೆ ಅಡ್ಡಿಯಾಗದಂತೆ ಸೇತುವೆ ಎತ್ತರಿಸುವ ಕಾಮಗಾರಿ ಜೊತೆಗೆ ದ್ವೀಪಗಳಿಗೆ ಕಾಲು ಸೇತುವೆ ನಿರ್ಮಿಸಲು ಈಗಾಗಲೇ ಸರ್ವೆ ಕಾರ್ಯ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಒಟ್ಟು 3 ಅಥವಾ 4 ಕಡೆ ಕಾಲು ಸೇತುವೆಗಳ ನಿರ್ಮಿಸುವ ಯೋಜನೆ ಇದೆ.

ಶಂಶಾಲಂ, ತಹಸೀಲ್ದಾರರು, ಲಿಂಗಸುಗೂರು. ನಡುಗಡ್ಡೆ ಜನರಿಗಾಗಿ ಮೊದಲ ಸಲ ಶಾಸಕನಾದಾಗ ಶೀಲಹಳ್ಳಿ ಸೇತುವೆ ಪೂರ್ಣಗೊಳಿಸಿದ್ದೆ. ನಡುಗಡ್ಡೆ ಗ್ರಾಮ ಮತ್ತು ದ್ವೀಪಗಳಿಗೆ ಸೇತುವೆ ನಿರ್ಮಿಸಲು ಬೇಡಿಕೆ ಇಟ್ಟಿರುವೆ. ಸರ್ಕಾರ ಅಶ್ವಾಸನೆ ಕೊಡುತ್ತೆ ಕಾಮಗಾರಿ ಆರಂಬಿಸುವುದು ಗ್ಯಾರಂಟಿ ಇಲ್ಲ. ಕಾಂಗ್ರೆಸ್ ಶಾಸಕರೇ ಅನುದಾನಕ್ಕೆ ಸರ್ಕಾರದ ವಿರುದ್ಧ ತಿರುಗಿ ಬಿದಿದ್ದಾರೆ. ಇನ್ನೂ ನಮಗೇ ಅನುದಾನ ಸಿಗುವುದು ದುರ್ಲಭ.

ಮಾನಪ್ಪ ವಜ್ಜಲ್, ಶಾಸಕರು ಲಿಂಗಸುಗೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ