ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್ತು
ನಗರ ವ್ಯಾಪ್ತಿಯ ಎಲ್ಲ ವಾರ್ಡ್‌ಗಳೂ ಒಳಗೊಂಡಂತೆ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಸ ವಿಲೇವಾರಿಗೆ 33 ಪ್ಯಾಕೇಜ್‌ಗಳಾಗಿ ವಿಂಗಡಿಸಿ ಟೆಂಡರ್ ಕರೆಯಲಾಗಿದೆ. ನಾಲ್ಕು ಜಾಗಗಳಲ್ಲಿ ತ್ಯಾಜ್ಯದಿಂದ ಗ್ಯಾಸ್, ವಿದ್ಯುತ್ ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ಗುರುವಾರ ಬಿಜೆಪಿ ಸದಸ್ಯ ಎಸ್. ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಸ ವಿಲೇವಾರಿಗೆ ನೈಸ್ ಸಂಸ್ಥೆಗೆ ಸೇರಿದ ಎರಡು ಜಾಗಗಳನ್ನು ಪಡೆಯಲಾಗಿದೆ. ದೊಡ್ಡಬಳ್ಳಾಪುರ ಸಮೀಪ ಒಂದು ಜಾಗ ಗುರುತಿಸಿದ್ದು ಸಚಿವ ಸಂಪುಟದ ಅನುಮತಿ ಪಡೆದಿದ್ದೇವೆ. ಕಸ ವಿಲೇವಾರಿಗೆಂದು ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಂಡಿರುವ ತಂತ್ರಜ್ಞಾನವನ್ನು ಅಧ್ಯಯನ ಮಾಡಲಾಗಿದೆ. ಖಾಸಗಿ ಕಂಪನಿಯಿಂದ ಗುತ್ತಿಗೆ ಆಧಾರದಲ್ಲಿ ನಿರ್ವಹಣೆ ಮಾಡಬೇಕೆಂದು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಕಸದ ಮಾಫಿಯಾ ದೊಡ್ಡದು. ಅದನ್ನು ಸುಲಭವಾಗಿ ಬೇಧಿಸಲು ಸಾಧ್ಯವಿಲ್ಲ. ಕಸ ವಿಲೇವಾರಿ ವಿಚಾರಕ್ಕೆ ದೊಡ್ಡ ಹೋರಾಟ ಮಾಡಿದ್ದು, ಕೋರ್ಟ್ ಆದೇಶದಂತೆ ಈ ಹಿಂದಿನ ಟೆಂಡರ್ ರದ್ದುಪಡಿಸಿ ಹೊಸ ಟೆಂಡರ್ ಕರೆಯುವುದಾಗಿ ಅಫಿಡವಿಟ್ ಸಲ್ಲಿಸಿದ್ದೇವೆ. ಕಸ ವಿಲೇವಾರಿ ಘಟಕಗಳನ್ನು ಸಹ ತೆರೆದಿದ್ದೇವೆ ಎಂದರು.ಶೇ.25ರಷ್ಟು ಮಾತ್ರ ಸಂಗ್ರಹ:
ಕಸದ ಮೇಲಿನ ಸೆಸ್ ವಿಚಾರವಾಗಿ ಉತ್ತರಿಸಿದ ಡಿಸಿಎಂ ಅವರು, 2016 ರಲ್ಲಿ ಕೇಂದ್ರ ಸರ್ಕಾರದ ಘನತ್ಯಾಜ್ಯ ನಿರ್ವಹಣಾ ನಿಯಮದ ಪ್ರಕಾರ ನೂತನ ಆದೇಶ ನೀಡಿತು. 2020 ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರ ಕಳುಹಿಸಿದ ಕಸ ಸಂಗ್ರಹ ದರಪಟ್ಟಿಯನ್ನು ಅಳವಡಿಸಿಕೊಂಡಿತು ಎಂದು ಗೆಜೆಟ್ ಪ್ರತಿಯ ವಿವರವನ್ನು ಸದನಕ್ಕೆ ಓದಿ ತಿಳಿಸಿದರು. ಈ ಗೆಜೆಟ್ ಪ್ರತಿಯಲ್ಲಿ ಐದು ಕೆಜಿಗೆ 500 ರು., ಹತ್ತು ಕೆಜಿಗೆ 1,400 ರು., ಇಪ್ಪತ್ತೈದು ಕೆಜಿಗೆ 3,400 ರು., ಐವತ್ತು ಕೆಜಿಗೆ 7 ಸಾವಿರ ರು., ನೂರು ಕೆಜಿಗೆ 14 ಸಾವಿರ ರು. ಶುಲ್ಕ ವಿಧಿಸಬೇಕು ಎಂದು ಹೇಳಲಾಗಿದೆ. ಇದನ್ನು ನೋಡಿ ನನಗೂ ಆಶ್ಚರ್ಯವಾಯಿತು. ಅಲ್ಲದೇ ಖಾಲಿ ಇರುವ ನಿವೇಶನಗಳಿಗೆ ಪ್ರತಿ ಚದರ ಅಡಿಗೆ 20 ರು. ಶುಲ್ಕ ವಿಧಿಸಬೇಕು ಎಂದಿದೆ. ಈ ದರಗಳು ಹೆಚ್ಚಾಯಿತು ಎಂದು ಅದರಲ್ಲಿ ಕೇವಲ ಶೇ. 25ರಷ್ಟು ಮಾತ್ರ ಸಂಗ್ರಹ ಮಾಡುತ್ತಿದ್ದೇವೆ. ಒಂದು ನಿವೇಶನಕ್ಕೆ ಪ್ರತಿ ಚದರ ಅಡಿಗೆ 2.40 ರು. ಸಂಗ್ರಹ ಮಾಡುವಂತೆ ತೀರ್ಮಾನ ಮಾಡಲಾಗಿದೆ ಎಂದರು.