ರಾಣಿಬೆನ್ನೂರು ಪ್ರತಿ ವಾರ್ಡ್‌ನಲ್ಲಿಯೂ ಸಸಿ ಬೆಳೆಸಿ

KannadaprabhaNewsNetwork |  
Published : Jan 01, 2025, 12:00 AM IST
ಫೋಟೊ ಶೀರ್ಷಿಕೆ: 31ಆರ್‌ಎನ್‌ಆರ್1ರಾಣಿಬೆನ್ನೂರು ನಗರಸಭೆಯ  ಸರ್ ಎಂ.ವಿಶ್ವೇಶ್ವರಯ್ಯ ಸಭಾಭವನದಲ್ಲಿ ಜರುಗಿದ 2025-26 ನೇ ಸಾಲಿನ ನಗರಸಭೆ ಬಜೆಟ್‌ನ ಎರಡನೇ ಸುತ್ತಿನ ಪೂರ್ವಭಾವಿ ಸಭೆಯಲ್ಲಿ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿದರು. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಇದ್ದರು.  | Kannada Prabha

ಸಾರಾಂಶ

ಸ್ಥಳೀಯ ನಗರಸಭೆಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಮತ್ತು ನಗರಸಭೆಯ ಆಡಳಿತಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅಧ್ಯಕ್ಷತೆಯಲ್ಲಿ ಜರುಗಿದ 2025-26ನೇ ಸಾಲಿನ ನಗರಸಭೆ ಬಜೆಟ್‌ನ ಎರಡನೇ ಸುತ್ತಿನ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಹಲವಾರು ಸಲಹೆಗಳು ಕೇಳಿಬಂದವು.

ರಾಣಿಬೆನ್ನೂರು: ಸ್ಥಳೀಯ ನಗರಸಭೆಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಮತ್ತು ನಗರಸಭೆಯ ಆಡಳಿತಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅಧ್ಯಕ್ಷತೆಯಲ್ಲಿ ಜರುಗಿದ 2025-26ನೇ ಸಾಲಿನ ನಗರಸಭೆ ಬಜೆಟ್‌ನ ಎರಡನೇ ಸುತ್ತಿನ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಹಲವಾರು ಸಲಹೆಗಳು ಕೇಳಿಬಂದವು.

ಪರಿಸರ ಸಂರಕ್ಷಣೆ ದೃಷ್ಟಿಯಿಂದ ನಗರದ ಪ್ರತಿಯೊಂದು ವಾರ್ಡ್‌ನಲ್ಲಿಯೂ ಸಸಿಗಳನ್ನು ಬೆಳೆಸಬೇಕು, ನಗರಸಭೆ ಪ್ರೌಢಶಾಲೆಯ ಅಭಿವೃದ್ಧಿಗೆ ಸೂಕ್ತ ಕ್ರಮ, ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ನಗರಸಭೆ ವತಿಯಿಂದ ಸ್ಯಾನಿಟರ್ ಪ್ಯಾಡ್ ವೆಂಡಿಂಗ್ ಮಷಿನ್ ಮತ್ತು ಇನ್ಸುಲೇಟರ್‌ಗಳ ಸ್ಥಾಪನೆ, ಪ್ರಮುಖ ವೃತ್ತಗಳಲ್ಲಿ ಮಹನೀಯರುಗಳ ಮೂರ್ತಿ ಪ್ರತಿಷ್ಠಾಪನೆ, ದೊಡ್ಡಕೆರೆ ಅಭಿವೃದ್ಧಿಗೆ ಒತ್ತು ನೀಡಲು ಸಾರ್ವಜನಿಕರು ಕೋರಿದರು.ನಗರಸಭಾ ಸದಸ್ಯೆ ಜಯಶ್ರೀ ಪಿಸೆ ಮಾತನಾಡಿ, ಪರಿಸರ ಉಳಿಸುವ ಸಲುವಾಗಿ ಪ್ರತಿಯೊಂದು ವಾರ್ಡ್‌ನಲ್ಲಿಯೂ ನಗರಸಭೆ ವತಿಯಿಂದ ಗಿಡಗಳನ್ನು ಬೆಳೆಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ನಗರಸಭೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಅರ್ಥಪೂರ್ಣವಾಗಿ ಆಚರಣೆ ಮಾಡಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದರು. ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ಬಸ್‌ನಿಲ್ದಾಣದಲ್ಲಿನ ಶೌಚಾಲಯ ಅವ್ಯವಸ್ಥೆಯ ಆಗರವಾಗಿದೆ ಹಾಗೂ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬಸ್ ನಿಲ್ದಾಣದಿಂದ ರೇಲ್ವೆ ನಿಲ್ದಾಣದವರೆಗೆ ಮೂತ್ರಾಲಯ ನಿರ್ಮಿಸಬೇಕು. ಹಳೆ ಪಿ.ಬಿ.ರಸ್ತೆಯಲ್ಲಿ ಹಂಪ್ಸ್ ಅಳವಡಿಸಬೇಕು. ಇದರ ಬಗ್ಗೆ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ಪ್ರಕಾಶ ಜಂಬಿಗಿ ಮಾತನಾಡಿ, ಎಪಿಎಂಸಿ ಪ್ರಾಂಗಣದಲ್ಲಿ ಎಪಿಎಂಸಿ ವತಿಯಿಂದಲೇ ಬೋರ್‌ವೆಲ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದ್ದರಿಂದ ಇಲ್ಲಿಗೂ 24*7 ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ನಗರದ ದೊಡ್ಡಕೆರೆ ಅಭಿವೃದ್ಧಿ ಕಾರ್ಯ ಅರ್ಧಕ್ಕೆ ನಿಂತಿದ್ದು ಅದನ್ನು ಪುನಾರಾರಂಭಿಸಬೇಕು. ನಗರಸಭೆಯಲ್ಲಿ ಏಜೆಂಟರ ಇಲ್ಲದೆ ಇ-ಸ್ವತ್ತು ಸಿಗುವುದಿಲ್ಲ. ಇದನ್ನು ಸಡಿಲೀಕರಣ ಗೊಳಿಸಬೇಕು. ಆಸ್ತಿ ತೆರಿಗೆ ಪಾವತಿಗೆ ಯುಪಿಐ ವ್ಯವಸ್ಥೆ ಜಾರಿಗೊಳಿಸಬೇಕು ಎಂದರು. ಡಾ.ರತ್ನಪ್ರಭಾ ಮಾತನಾಡಿ, ನಗರದ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಮಯದಲ್ಲಿ ಪ್ಯಾಡ್‌ಗಳನ್ನು ಪೂರೈಸಲು ವೆಂಡಿಂಗ್ ಮಷಿನ್ ಹಾಗೂ ಅವುಗಳನ್ನು ಸುಡಲು ಇನ್ಸುಲೇಟರ್ ಯಂತ್ರ ಅಳವಡಿಸಬೇಕು ಎಂದರು. ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ಮಾತನಾಡಿ, ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು ವಾಹನಗಳ ನಿಲುಗಡೆ ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ ನಗರಸಭೆಗೆ ಸೇರಿದ ಜಾಗೆಯಲ್ಲಿ ವಾಹನಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ನಗರದ ಬಹುತೇಕ ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗಿದ್ದು ಅವುಗಳ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದರು. ದಲಿತ ಸಂಘರ್ಷ ಸಮಿತಿಯ ಮೈಲಪ್ಪ ದಾಸಪ್ಪನವರ ಮಾತನಾಡಿ, ನಗರದ ಪ್ರಮುಖ ಸರ್ಕಲ್‌ಗಳಲ್ಲಿ ದಾರ್ಶನಿಕರು, ಇತಿಹಾಸ ಪುರುಷರು, ಸ್ವಾತಂತ್ರ್ಯ ಹೋರಾಟಗಾರರ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದರು.ಡಾ.ಎಸ್.ಎಲ್.ಪವಾರ ಮಾತನಾಡಿ, ಶತಮಾನ ಕಂಡ ನಗರಸಭೆ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ. ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕ ಮಾಡಿ ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಪೌರಾಯುಕ್ತ ಎಫ್.ಐ.ಇಂಗಳಗಿ, ನಗರಸಭೆಗೆ ಹಲವಾರು ಜವಾಬ್ದಾರಿಗಳಿರುವುದರಿಂದ ಶಾಲೆಯನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸುವುದು ಸೂಕ್ತ ಎಂದರು. ಸಾರ್ವಜನಿಕರ ಸಲಹೆಗಳನ್ನು ಆಲಿಸಿದ ನಂತರ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ನಗರೋತ್ಥಾನ ಯೋಜನೆಯಡಿ ನಗರದ ರಸ್ತೆಗಳ ಅಭಿವೃದ್ಧಿಗೆ 20 ಕೋಟಿ ಮಂಜೂರಾಗಿದೆ. ಜ.1ರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ. ದೊಡ್ಡ ಕೆರೆಗೆ ಕೊಳಚೆ ನೀರು ಹರಿಯದಂತೆ ಕ್ರಮ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆ ಮೂಲಕ ಯೋಜನೆ ರೂಪಿಸಲಾಗಿದೆ. 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಕಾರ್ಯನಿರ್ವಹಿಸಿದ ಟ್ಯಾಂಕರ್‌ನ್ನು (ಯುದ್ಧದ ಸಲಕರಣೆ) ತಂದು ನಗರದಲ್ಲಿ ಒಂದು ಸರ್ಕಲ್ ನಿರ್ಮಾಣ ಮಾಡಲಾಗುವುದು. ಇದರಿಂದ ಯುವ ಜನಾಂಗದಲ್ಲಿ ದೇಶಾಭಿಮಾನ ಬೆಳೆಸಲು ಪೂರಕವಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸ್ಥಳೀಯ ನಗರಸಭೆಯು ಜಿಲ್ಲೆಯಲ್ಲಿಯೇ ಉತ್ತಮವಾಗಿದೆ. ಸ್ಥಳೀಯವಾಗಿ ಸಂಪನ್ಮೂಲಗಳ ಕ್ರೋಢಿಕರಣಕ್ಕೆ ಒತ್ತು ನೀಡಬೇಕಾಗಿದೆ. ನಗರದ ಅಭಿವೃದ್ಧಿಗೆ ಜನರು ನೀಡಿದ ಸಲಹೆಗಳನ್ನು ಬಜೆಟ್‌ನಲ್ಲಿ ಅಳವಡಿಸಲಾಗುವುದು ಎಂದರು. ಸಭೆಯ ಪ್ರಾರಂಭಕ್ಕೂ ಮುನ್ನ ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಹಾಗೂ ನಗರಸಭೆ ಮಾಜಿ ಸದಸ್ಯ ಚನ್ನಬಸು ತೋಟಮ್ಮನವರ ಅವರುಗಳಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ