ಹಾವೇರಿ: ನಾಡಿನ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಅರಣ್ಯ ಇಲಾಖೆಯ ಹುತಾತ್ಮ ಸಿಬ್ಬಂದಿಗೆ ಕೇವಲ ಶ್ರದ್ಧಾಂಜಲಿ ಸಲ್ಲಿಸಿದರೆ ಸಾಲದು. ಅವರ ಸ್ಮರಣಾರ್ಥ ಜಿಲ್ಲಾದ್ಯಂತ ಅರಣ್ಯ ಇಲಾಖೆಗೆ ಸೇರಿದ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು, ಅವುಗಳ ಪೋಷಣೆ ಹಾಗೂ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಹೊಸ ಅರಣ್ಯ ನಿರ್ಮಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀಶೈಲಜಾ ಎಚ್.ವಿ. ಕರೆ ನೀಡಿದರು.
ಪ್ರಸ್ತುತ ಬರ ಪರಿಸ್ಥಿತಿ, ಮಾನವ-ವನ್ಯಜೀವಿ ಸಂಘರ್ಷ, ಅರಣ್ಯ ನಾಶ ಸೇರಿದಂತೆ ಹಲವು ಪರಿಸರ ಸಮಸ್ಯೆಗಳು ಎದುರಾಗುತ್ತಿವೆ. ಇವುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನೂ ಪರಿಸರ ಸಂರಕ್ಷಣೆಯಲ್ಲಿ ತನ್ನ ಹೊಣೆಗಾರಿಕೆ ನಿರ್ವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜಿತ್ ಕುಮಾರ್ ಮಾತನಾಡಿ, ಅರಣ್ಯ ಸಂರಕ್ಷಣೆ ಅತ್ಯಂತ ಕಠಿಣ ಹಾಗೂ ಜವಾಬ್ದಾರಿಯುತ ಕಾರ್ಯವಾಗಿದೆ. ಹವಾಮಾನ ಬದಲಾವಣೆಯ ಪರಿಣಾಮ ದೇಶಾದ್ಯಂತ ಗೋಚರಿಸುತ್ತಿದ್ದು, ಅರಣ್ಯ ನಾಶದಿಂದ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಸರ್ಕಾರದ ಇಲಾಖೆಗಳ ಜತೆಗೆ ಸಾರ್ವಜನಿಕರೂ ಕೈಜೋಡಿಸಿ ಅರಣ್ಯ ಸಂರಕ್ಷಣೆಗೆ ನಿರಂತರ ಪ್ರಯತ್ನ ಮಾಡಬೇಕು ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಅರಣ್ಯ ಸಂರಕ್ಷಣೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು. ಅರಣ್ಯ ನಾಶವೇ ಹಲವು ಪರಿಸರ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದ್ದು, ಮಕ್ಕಳಲ್ಲಿ ಅರಣ್ಯ ಹಾಗೂ ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕು. ಅರಣ್ಯ ಹಾಗೂ ಪೊಲೀಸ್ ಇಲಾಖೆ ನಡುವೆ ಅವಿನಾಭಾವ ಸಂಬಂಧವಿದೆ. ಅರಣ್ಯ ಪ್ರದೇಶಗಳಲ್ಲಿನ ಅಕ್ರಮ ಚಟುವಟಿಕೆ, ಒತ್ತುವರಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಎರಡೂ ಇಲಾಖೆಗಳ ಸಹಕಾರ ಅಗತ್ಯ. ಅರಣ್ಯದಲ್ಲಿ ಗಸ್ತು ತಿರುಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಸೇವೆ ಸವಾಲಿನದ್ದಾಗಿದ್ದು, ಅನೇಕರು ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ. ಅವರ ತ್ಯಾಗವನ್ನು ಸೇವೆಗೆ ಸೂರ್ತಿಯಾಗಿ ಪರಿಗಣಿಸಬೇಕು ಎಂದು ಹೇಳಿದರು.