ಹಾವೇರಿ: ಜಾನಪದ ವಿವಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಉಂಟಾಗಿರುವ ವಿವಿಧ ಸಮಸ್ಯೆಗಳು ಹಾಗೂ ಆರೋಪಗಳ ಕುರಿತು ಸಮಗ್ರವಾಗಿ ಪರಿಶೀಲಿಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ. ಶಿವಸೋಮಣ್ಣ ನಿಟ್ಟೂರು ಆಗ್ರಹಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಕುರಿತು ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ನಾಗರಾಜ ಎಸ್. ಮಾತನಾಡಿ, ಕರ್ನಾಟಕ ಜನಪದ ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾಗಿದ್ದ ಎಂಟು ವಿಷಯಗಳನ್ನು ರದ್ದುಪಡಿಸುವ ಕುರಿತು ಸಮಿತಿ ರಚಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಮೂಲ ಉದ್ದೇಶ ಹಾಗೂ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಶೈಕ್ಷಣಿಕ ವಿಷಯಗಳನ್ನು ರೂಪಿಸಬೇಕು. ಜನಪದ ವೈದ್ಯ, ಜನಪದ ಆರಾಧನೆ, ಜನಪದ ಸಂಸ್ಕೃತಿ, ಜನಪದ ಸಂಗೀತ, ಜನಪದ ಕಲೆ ಸೇರಿದಂತೆ ಜನಪದಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆದರೆ, ವಿಶ್ವವಿದ್ಯಾಲಯದ ಮೂಲ ಆಶಯವನ್ನು ಬದಿಗೊತ್ತಿ ಇತರೆ ವಿಷಯಗಳನ್ನು ಆರಂಭಿಸಿರುವುದು ಸೂಕ್ತವಲ್ಲ ಎಂದರು.ಜಾನಪದ ವಿವಿ ಸುತ್ತಮುತ್ತಲಿನಲ್ಲೇ ಎರಡು ವಿವಿಗಳಿವೆ. ಅಲ್ಲಿ ಸಾಮಾನ್ಯ ಹಾಗೂ ಇತರೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿಸುವ ಅವಕಾಶವಿದೆ. ಹೀಗಾಗಿ ಜನಪದ ವಿಶ್ವವಿದ್ಯಾಲಯದ ಮೂಲ ಉದ್ದೇಶಕ್ಕೆ ಅನುಗುಣವಾಗಿ ಶಿಕ್ಷಣ ನೀಡುವುದಕ್ಕಿಂತ ಬೇರೆ ವಿಷಯಗಳಿಗೆ ಆದ್ಯತೆ ನೀಡುವುದು ವಿಶ್ವವಿದ್ಯಾಲಯದ ಅಸ್ತಿತ್ವದ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ ಎಂದು ಹೇಳಿದರು.
ಡಾ. ಬಸವರಾಜ ದುಗ್ಗಾಣಿ, ಹೊನ್ನಪ್ಪ ಮಾಳಗಿ, ಗುಡ್ಡಪ್ಪ ಹರಿಜನ, ಗುಡ್ಡಪ್ಪ ಬಣಕಾರ, ಬಸವರಾಜ ಮಾಳಗಿ, ಗುಡ್ಡಪ್ಪ ಮಾಳಗಿ, ನಾಗಪ್ಪ ಸೋಮಣ್ಣನವರ ಇದ್ದರು.