ನವಲಿ: ನಿಯಮಾನುಸಾರ ಕೆಲಸ ನಿರ್ವಹಿಸಿದ್ದರೂ ಕೇವಲ ₹170ರಂತೆ ಕೂಲಿ ಜಮಾ ಮಾಡಲಾಗಿದೆ ಎಂದು ಆರೋಪಿಸಿ ನೂರಾರು ಕೂಲಿ ಕಾರ್ಮಿಕರು ನವಲಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪಿಡಿಒ ವೀರಣ್ಣ ನಕ್ರಳ್ಳಿ, ಗ್ರಾಪಂ ವತಿಯಿಂದ ವಿಬಿಜಿ ರಾಮ್‌ಜಿ ಯೋಜನೆಯಡಿ ಏಳು ದಿನಗಳ ಕಾಲ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದ್ದು, ಕಾರ್ಮಿಕರು ಮಾಡಿದ ಕೆಲಸದ ಪ್ರಮಾಣವನ್ನು ಸ್ಥಳ ಪರಿಶೀಲನೆ ನಡೆಸಿ ತಾಂತ್ರಿಕ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್, ಕಾಯಕ ಬಂಧುಗಳು ಹಾಗೂ ಗ್ರಾಪಂ ಸಿಬ್ಬಂದಿಯಿಂದ ಮಾಹಿತಿ ಪಡೆದು ಕೂಲಿ ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜುಲೈ 1ರಿಂದ ಪ್ರತಿಯೊಬ್ಬ ಕಾರ್ಮಿಕರಿಗೆ ದಿನಕ್ಕೆ ₹382 ಕೂಲಿ ದೊರೆಯಲಿದ್ದು, ವರ್ಷಕ್ಕೆ ಒಂದು ಕುಟುಂಬಕ್ಕೆ 125 ದಿನಗಳ ಉದ್ಯೋಗ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಕೂಲಿ ಅರಸಿ ಶ್ರಮಿಕ ಕುಟುಂಬಗಳು ಗುಳೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಕಾಮಗಾರಿ ನೀಡಲಾಗಿದೆ ಎಂದರು.ಮೂಲಸೌಲಭ್ಯಗಳಿಲ್ಲದೆ ದುಡಿಮೆ
ನವಲಿ ತಾಂಡಾದ ಕಾರ್ಮಿಕರು ಮಕ್ಕಳೊಂದಿಗೆ ಕರೆಡೋಣಿ ಕೆರೆಯಲ್ಲಿ ಹೂಳೆತ್ತುವ ಕೆಲಸಕ್ಕೆ ಬರುತ್ತಿದ್ದು, ಬಿಸಿಲಿನ ತೀವ್ರತೆ ಹೆಚ್ಚಿರುವ ಸಂದರ್ಭದಲ್ಲಿ ಪೆಂಡಾಲ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಅಗತ್ಯವಾಗಿದೆ. ಆದರೆ, ಕೆಲವೆಡೆ ಈ ಸೌಲಭ್ಯಗಳಿಲ್ಲದೆ ಬಿಸಿಲಿನಲ್ಲೇ ವಿಶ್ರಾಂತಿ ಪಡೆಯುವ ಪರಿಸ್ಥಿತಿ ಇದೆ ಎಂದು ದೂರಿದರು.