ಸಸಿಗಳನ್ನು ನೆಟ್ಟು ಬರ, ಮರುಭೂಮೀಕರಣ ತಡೆಯಿರಿ

KannadaprabhaNewsNetwork | Published : Jun 7, 2024 12:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯ ನೇರಳೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ:

ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯ ನೇರಳೆ ಕರೆ ನೀಡಿದರು.

ತಾಲೂಕಿನ ಕದಾಂಪೂರ (ಪು.ಕೇ) ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಭೂ ಮರುಸ್ಥಾಪನೆ, ಮರುಭೂಮೀಕರಣ ಹಾಗೂ ಬರ ತಡೆಯುವಿಕೆ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಪರಿಸರ ದಿನ ಅಂಗವಾಗಿ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಣೆ ಮಾಡಲಾಯಿತು.

ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಅವರು ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದಂದು ಸಸಿಗಳನ್ನು ನೆಟ್ಟು ಪೋಷಿಸಬೇಕು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣ ನಿಲ್ಲಿಸುವಂತೆ ತಿಳಿ ಹೇಳಿದರು.ಎಸ್ಪಿ ಅಮರನಾಥ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಕುರಿತು ಅಷ್ಟೇ ಅಲ್ಲದೇ ಕಾನೂನಿನ ಕುರಿತು ಅರಿವು ಮೂಡಿಸಿದರು. ಬಾಗಲಕೋಟೆ ಜಿಲ್ಲೆಯಾದ್ಯಂತ ಶಾಲಾ ಶಿಕ್ಷಣ ಇಲಾಖೆ ಜೊತೆಗೂಡಿ ಸರ್ಕಾರಿ ಶಾಲೆಗಳ ಆವರಣದಲ್ಲಿ ಒಂದು ಲಕ್ಷ ಸಸಿ ನೆಡುವ ಗುರಿ ಇದ್ದು, ಎಲ್ಲ ಇಲಾಖೆಯವರು ಸಹಕಾರ ನೀಡಬೇಕೆಂದು ತಿಳಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ ಮಾತನಾಡಿದರು. ನೀರಲಕೇರಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಮಂಜುಳಾ ಕುಷ್ಠಗಿ ಉಪನ್ಯಾಸ ನೀಡಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರ, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾ.ಚಂದ್ರಶೇಖರ ದಿಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ.ಪಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಿ.ಮಿರ್ಜಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೂಪಾ.ವಿ.ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article