ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ ಚಾಂಪಿಯನ್

KannadaprabhaNewsNetwork |  
Published : May 05, 2025, 12:52 AM IST
ಚಿತ್ರ : 4ಎಂಡಿಕೆ4 : ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ ಚಾಂಪಿಯನ್ ಪ್ರಶಸ್ತಿ ಪಡೆಯಿತು.  | Kannada Prabha

ಸಾರಾಂಶ

ಕಳೆದ ಹಲವು ದಿನಗಳಿಂದ ನಡೆದ ಗೌಡ ಲೆದರ್‌ಬಾಲ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪ್ಲಾಂಟರ್ಸ್ ಕ್ಲಬ್‌ ಬಿಳಿಗೇರಿ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕಳೆದ ಹಲವು ದಿನಗಳಿಂದ ನಡೆದ ಗೌಡ ಲೆದರ್ ಬಾಲ್ ಪ್ರೀಮಿಯರ್ ಲೀಗ್‌ನಲ್ಲಿ (ಜಿಪಿಎಲ್) ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಭಾನುವಾರ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ದಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಪಂದ್ಯದ ಆರಂಭದಲ್ಲೇ ಸಿ.ಎಚ್.ನಯನ್ ಅವರ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ನಂತರ ಅಂಜನ್ ಅವರ ಚೇತರಿಕೆ ಆಟದಿಂದ (56 ಎಸೆತದಲ್ಲಿ 3 ಬೌಂಡರಿ ನೆರವಿನೊಂದಿಗೆ 50 ರನ್) ತಂಡ 100ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಉಳಿದಂತೆ ಪ್ರಸನ್ನ 19, ಅರ್ಜುನ್ 19, ಬಿ.ಎಸ್.ಗೋಪಿತ್ 14ರನ್ ಕಲೆ ಹಾಕಿದರು. ತಂಡ ನಿಗದಿತ 20 ಓವರ್‌ನಲ್ಲಿ 8 ವಿಕೆಟ್ ಕಳೆದುಕೊಂಡು 142 ರನ್ ಕಲೆ ಹಾಕಿತು. ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡದ ಪರ ಲೋಕೇಶ್, ಮಿತ್ರ ಪೂಜಾರಿ, ಹರ್ಷ ಕೊಂಬಾರನ, ಜಗತ್ ದಂಬೆಕೋಡಿ ತಲಾ ಒಂದೊಂದು ವಿಕೆಟ್ ಪಡೆದರು.

ಗುರಿಬೆನ್ನಟ್ಟಿದ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ 2.2 ಓವರ್‌ನಲ್ಲಿ 6 ರನ್‌ಗಳಿಸುವಷ್ಟರಲ್ಲಿ ದರ್ಶನ್ ಸುಳ್ಯಕೋಡಿ ಅವರ ವಿಕೆಟ್ ಕಳೆದುಕೊಂಡು ಮೊದಲ ಆಘಾತ ಅನುಭವಿಸಿತು. ನಂತರ ಜಸ್ವಂತ್ ಮತ್ತು ಹರ್ಷ ಕೊಂಬಾರನ 59 ರನ್‌ಗಳ ಜೊತೆಯಾಟ ಆಡಿ ತಂಡಕ್ಕೆ ಚೇತರಿಕೆ ನೀಡಿದರು. ಹರ್ಷ ಕೊಂಬಾರ 44 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನೊಂದಿಗೆ 49 ರನ್ ದಾಖಲಿಸಿ ಮನ್ವಿತ್ ಅವರ ಎಸೆತಕ್ಕೆ ಔಟ್ ಆಗುವ ಮೂಲಕ ಅರ್ಧಶತಕ ವಂಚಿತರಾದರು. ಉಳಿದಂತೆ ಜಸ್ವಂತ್ 28 ಸಿಡಿಸಿದರು. ಇದರ ನಡುವೆ ಬಿರುಸಿನ ಬ್ಯಾಟಿಂಗ್ ಮುಂದಾದ ಲೋಕೇಶ್ 21 ಎಸೆತದಲ್ಲಿ 4 ಸಿಕ್ಸರ್, 2 ಬೌಂಡರಿ ನೆರವಿನೊಂದಿಗೆ 47 ರನ್ ದಾಖಲಿಸಿ 17 ಓವರ್‌ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ದಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡದ ಪರವಾಗಿ ನಯನ್ 2, ಮನ್ವಿತ್, ಜೀತು ತಲಾ ಒಂದೊಂದು ವಿಕೆಟ್ ಗಳಿಸಿದರು.

ಮಹಿಳೆಯರ ಕ್ರಿಕೆಟ್:

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಕೊಡಗು ಗೌಡ ಯುವ ವೇದಿಕೆಯ ಸಹಕಾರದೊಂದಿಗೆ ಗೌಡ ಮಹಿಳೆಯರಿಗೆ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ದಿ ಎಲೈಟ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ದಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ನಿಗದಿತ 5 ಓವರ್‌ನಲ್ಲಿ 78 ರನ್ ಕಲೆ ಹಾಕಿತು. ತಂಡದ ಪರ ತನಿಷಾ 16 ಎಸೆತದಲ್ಲಿ 40 ರನ್, ಲೀನಾ 5 ಎಸೆತದಲ್ಲಿ 15ರನ್ ಕಲೆ ಹಾಕಿದರು. ಗುರಿ ಬೆನ್ನಟ್ಟಿದ ಈಗಲ್ ರೈಡರ್ಸ್ ತಂಡ ಆರಂಭದಲ್ಲಿ ನಿಧಾನಗತಿಯಲ್ಲಿ ಪ್ರದರ್ಶನ ತೋರಿತು. ನಂತರ ಬಿರುಸಿನ ಆಟಕ್ಕೆ ಮುಂದಾದ ಗಾಯನ 34 ಎಸೆತದಲ್ಲಿ 46ರನ್ ಕಲೆ ಹಾಕಿದರೂ ಕೂಡ 18ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ಪರಿಣಾಮ ದಿ ಎಲೈಟ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಈಗಲ್ ರೈಡರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಲೀಗ್‌ನ ವಿಜೇತ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡಕ್ಕೆ ಪ್ರಥಮ ಬಹುಮಾನವಾಗಿ 1,25,000 ರು. ನಗದು, ದ್ವಿತೀಯ ಸ್ಥಾನ ಪಡೆದ ದಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡಕ್ಕೆ 75,000 ರು., ತೃತೀಯ ಬಹುಮಾನ ಪಡೆದ ತಂಡಕ್ಕೆ ಅಮರ ಸುಳ್ಯ ರಾಯಲ್ಸ್ ತಂಡಕ್ಕೆ 45,000 ರು. ನಗದು ಮತ್ತು ಕಳೆದ ಸೀಸನ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಿದ ಗೌಡ ಸಂಸ್ಕೃತಿ ಮತ್ತು ಬಲಿದಾನದ ಪ್ರತೀಕವಾದ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.

ಕ್ರೀಡೆಯ ಮೂಲಕ ಎಲ್ಲರೂ ಒಂದುಗೂಡಲು ಸಾಧ್ಯ: ಬೋಪಯ್ಯ

ಕೊಡಗಿನಲ್ಲಿ ಎಲ್ಲ ಯುವ ಜನತೆ ಕ್ರೀಡೆಯ ಮೂಲಕ ಜನರನ್ನು ಒಂದುಗೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಗೌಡ ಲೆದರ್ ಬಾಲ್ ಪ್ರೀಮಿಯರ್ ಲೀಗ್‌ನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಇಂದು ಜಿಲ್ಲೆಯ ಹಲವು ಕಡೆ ಕೀಡಾಕೂಟಗಳು ನಡೆಯುತ್ತಿದ್ದು, ಕ್ರೀಡಾಗ್ರಾಮವನ್ನು ಕೂಡ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆಯಾಗಿ, ಪ್ರತಿಭೆಗಳಿಗೆ ಸೂಕ್ತ ಅವಕಾಶ ದೊರೆಯುವಂತೆ ಆಗಲಿ ಎಂದು ಹೇಳಿದರು.

ಸಮಾಜ ಬಾಂಧವರು ಎಲ್ಲ ನಮ್ಮತನವನ್ನು ಕಾಪಾಡಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರ ಜಾತಿ ಗಣತಿಗೆ ಆದೇಶ ಮಾಡಿದ್ದು, ಶೀಘ್ರದಲ್ಲಿಯೇ ಇದು ನಡೆಯಲಿದೆ. ಈ ಜಾತಿ ಗಣತಿ ಸಂದರ್ಭ ಎಲ್ಲವೂ ಒಂದಾಗಿ ನಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕು. ನಮ್ಮ ಜಾತಿ ಮೇಲೆ ಅಭಿಮಾನವಿಟ್ಟುಕೊಂಡು ನಮ್ಮ ಭಾಷೆಯನ್ನು ಸೂಕ್ತವಾಗಿ ನಮೂದಿಸಬೇಕೆಂದು ಸಲಹೆ ನೀಡಿದರು.

ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೇರ ಪುಷ್ಪಾವತಿ ರಮೇಶ್ ಮಾತನಾಡಿ, ನಮ್ಮ ಜನಾಂಗವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಎಲ್ಲರ ಸಹಕಾರದೊಂದಿಗೆ ಉತ್ತಮ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಮುಂದಿನ ದಿನದಲ್ಲಿಯೂ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಶಾಸಕ ಡಾ. ಮಂತರ್ ಗೌಡ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭೆ ಸದಸ್ಯೆ ಶ್ವೇತಾ ಪ್ರಶಾಂತ್, ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ಮಾತಾಜಿ ಜ್ಯುವೆಲರ್ಸ್ ಮಾಲೀಕ ತೇಜ್ರಾಜ್, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್, ಮರಂದೋಡ ಗೌಡ ಸಮಾಜ ಅಧ್ಯಕ್ಷ ಬಾರಿಕೆ ಮನು ಮಹೇಶ್ ಸೇರಿದಂತೆ ಹತ್ತು ಪ್ರಾಂಚೈಸಿಗಳ ಮಾಲೀಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!