ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಂಘದ ರಾಜ್ಯ ಗೌರವಾಧ್ಯಕ್ಷ ವಾಸುದೇವು ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬ್ಯಾನರ್ ಹಿಡಿದು ಅಂಚೆ ಕಚೇರಿವರೆಗೂ ಜಾಥಾ ನಡೆಸಿದರು.
ಕಾರ್ಮಿಕರು ಈಗಾಗಲೇ ಹಲವು ಬಾರಿ ನಮ್ಮ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಪತ್ರ ಬರೆದು ಪೋಸ್ಟ್ ಮಾಡಿದರು.ಕಟ್ಟಡ ಕಾರ್ಮಿಕರ ಮಂಡಳಿ ಬೇಜವಾಬ್ದಾರಿತನದಿಂದ ಕಳೆದ 3 ವರ್ಷಗಳಿಂದಲೂ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಬರುತ್ತಿಲ್ಲ. ಅಲ್ಲದೇ, ಈ ಬಾರಿ ಕಾರ್ಮಿಕರ ಎಲ್ಲಾ ಪರಿಹಾರ ಧನದ ವಿತರಣೆ ವಿಳಂಬವಾಗಿದೆ. 60 ವರ್ಷ ತುಂಬಿದ ಕಟ್ಟಡ ಕಾರ್ಮಿಕರಿಗೆ ಪಿಂಚಿಣಿ ಸೌಲಭ್ಯ ಹೊರತು ಪಡಿಸಿ ಬೇರೆ ಯಾವುದೇ ಸೌಲಭ್ಯಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಕೆಂಚೇಗೌಡ, ರಾಜು, ರಾಮಚಂದ್ರ, ಪ್ರದೀಪ್, ಮಂಜುನಾಥ್, ಕುಮಾರ್, ಯೋಗೇಶ್ ಸೇರಿದಂತೆ ಇತರರು ಇದ್ದರು.