ಧೂಳಿನ ಮಜ್ಜನದಿಂದ ಪಾರಾಗಲು ಪ್ಲಾಸ್ಟಿಕ್‌ ಪರದೆ!

KannadaprabhaNewsNetwork |  
Published : Apr 12, 2026, 02:45 AM IST
 ನದದಮ | Kannada Prabha

ಸಾರಾಂಶ

ವಾಣಿಜ್ಯನಗರಿ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಹೋಲ್‌ಸೆಲ್‌, ರಿಟೇಲ್‌ ಮಾರಾಟಗಾರರಿದ್ದು ಜಿಲ್ಲೆ ಸೇರಿದಂತೆ ಅನ್ಯ ಜಿಲ್ಲೆಗಳಿಂದ ನಿತ್ಯ ಸಾವಿರಾರು ಜನರು ನಗರಕ್ಕೆ ಆಗಮಿಸುತ್ತಾರೆ. ಹೀಗೆ ಆಗಮಿಸುವ ಜನರಿಗೆ ಚೆನ್ನಮ್ಮ ಸರ್ಕಲ್‌, ಕೋರ್ಟ್‌ ವೃತ್ತ ಸೇರಿದಂತೆ ವಿವಿಧೆಡೆ ನೂರಾರು ಹೋಟೆಲ್‌ಗಳಿದ್ದರೂ ಧೂಳಿನ ಭಯದಿಂದ ಉಪಾಹಾರ, ಊಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿಯಲ್ಲೀಗ ಧೂಳಿನಿಂದ ರಕ್ಷಣೆ ಪಡೆದುಕೊಳ್ಳಲು ಅಂಗಡಿ ಮಾಲೀಕರು ಹರಸಾಹಸ ಪಡುತ್ತಿದ್ದು ಪ್ಲಾಸ್ಟಿಕ್‌ ಪರದೆ ಮೊರೆ ಹೋಗುತ್ತಿದ್ದಾರೆ. ಈ ಮೂಲಕ ದೂರವಾಗಿರುವ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ವಾಣಿಜ್ಯನಗರಿ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಹೋಲ್‌ಸೆಲ್‌, ರಿಟೇಲ್‌ ಮಾರಾಟಗಾರರಿದ್ದು ಜಿಲ್ಲೆ ಸೇರಿದಂತೆ ಅನ್ಯ ಜಿಲ್ಲೆಗಳಿಂದ ನಿತ್ಯ ಸಾವಿರಾರು ಜನರು ನಗರಕ್ಕೆ ಆಗಮಿಸುತ್ತಾರೆ. ಹೀಗೆ ಆಗಮಿಸುವ ಜನರಿಗೆ ಚೆನ್ನಮ್ಮ ಸರ್ಕಲ್‌, ಕೋರ್ಟ್‌ ವೃತ್ತ ಸೇರಿದಂತೆ ವಿವಿಧೆಡೆ ನೂರಾರು ಹೋಟೆಲ್‌ಗಳಿದ್ದರೂ ಧೂಳಿನ ಭಯದಿಂದ ಉಪಾಹಾರ, ಊಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಧೂಳಿನ ಸಾಮ್ರಾಜ್ಯ:

2ನೇ ದೊಡ್ಡ ನಗರ ಎನಿಸಿದರೂ ಇಲ್ಲಿ ಧೂಳಿನ ಕಣಗಳ ಸಾಮ್ರಾಜ್ಯ ಕಡಿಮೆಯಾಗುತ್ತಲೇ ಇಲ್ಲ. ಯಾವುದಾದರೂ ಕಾಮಗಾರಿ ನಡೆಯಲಿ, ಬಿಡಲಿ. ಹೊರಗೆ ಹೋದ ನಾಗರಿಕರಿಗೆ ಧೂಳಿನ ಮಜ್ಜನ ಆಗುವುದು ಖಚಿತ. ಬಿಳಿ ಬಣ್ಣದ ಬಟ್ಟೆ ಧರಿಸಿಕೊಂಡು ಹೋದರೆ ಮರಳಿ ಬರುವವರೆಗೂ ಅವು ಕೆಂಪು ಬಣ್ಣಕ್ಕೆ ತಿರುಗಿರುತ್ತವೆ. ಅಷ್ಟೊಂದು ಧೂಳೇ ಧೂಳು ಇಲ್ಲಿ.

ಪ್ಲಾಸ್ಟಿಕ್‌ ಪರದೆ:

ಕಳೆದ ಮೂರು ವರ್ಷಗಳಿಂದ ಫ್ಲೈಓವರ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಹೊಸೂರು, ಹಳೇ ಬಸ್‌ ನಿಲ್ದಾಣ,. ಚೆನ್ನಮ್ಮನ ಸರ್ಕಲ್‌, ಹಳೇ ಕೋರ್ಟ್‌ ಸರ್ಕಲ್‌, ದೇಸಾಯಿ ಸರ್ಕಲ್‌, ಕಾರ್ಪೋರೇಷನ್‌ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಧೂಳಿನ ದರ್ಶನವಾಗುತ್ತಿದೆ. ಜತೆಗೆ ಕಾಮಗಾರಿಯಿಂದ ಅಂಗಡಿ-ಮುಗ್ಗಟ್ಟುಗಳು ವ್ಯಾಪಾರ ವಹಿವಾಟು ಆಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇದರ ನಡುವೆ ಧೂಳಿನ ಕಾರುಬಾರು ವಿಪರೀತವಾಗಿದ್ದು ಅಂಗಡಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಅಂಗಡಿಯ ಪ್ರತಿ ವಸ್ತುವಿನ ಮೇಲೆ ಧೂಳು ಇಂಚುಗಟ್ಟಲೇ ಮೆತ್ತಿಕೊಂಡಿದೆ.

ನೀರು ಹಾಕಿದರು ಕಡಿಮೆ ಆಗಿಲ್ಲ:

ಧೂಳಿನ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ನಿತ್ಯ ರಸ್ತೆಗೆ ನೀರು ಹಾಕುತ್ತಿದೆ. ಜತೆಗೆ ಧೂಳಿನ ಕಣ ಎಳೆದುಕೊಳ್ಳುವ ಯಂತ್ರ ಅಳವಡಿಸಿ ಧೂಳು ಕಡಿಮೆ ಮಾಡುವ ಪ್ರಯತ್ನಿಸುತ್ತಿದೆ. ಆದರೆ, ವಾಹನ ಸಂಚಾರ ಹೆಚ್ಚಳವಾಗಿರುವುದರಿಂದ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಧೂಳಿನ ಕಣ ಹೆಚ್ಚಾಗಿ ಹೋಟೆಲ್‌, ದರ್ಶಿನಿ, ಮಟಕಿ ಚಾಯ್‌, ಬೆಲ್ಲದ ಚಾಯ್‌, ಜ್ಯೂಸ್‌ ಸೆಂಟರ್‌, ಪಾನ್‌ ಶಾಪ್‌, ಮೆಡಿಕಲ್‌ ಶಾಪ್‌ಗೆ ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಧೂಳಿನಿಂದ ರಕ್ಷಿಸಿಕೊಂಡು ಗ್ರಾಹಕರನ್ನು ಸೆಳೆಯಲು ಮಾಲೀಕರು ಇದೀಗ ಅಂಗಡಿಗೆ ಪ್ಲಾಸ್ಟಿಕ್‌ ಪರದೆ, ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿದ್ದರೆ. ಅದರಲ್ಲೂ ಹಳೇ ಕೋರ್ಟ್‌ ವೃತ್ತದ ಅಂಗಡಿಗಳಿಗೆ ಪ್ಲಾಸಿಕ್ಟ್‌ ಪರದೆ ಕಡ್ಡಾಯವೆಂಬಂತೆ ಆಗಿದೆ.

ಕಾಮಗಾರಿ ಬೇಗ ಮುಗಿಸಿ:

ಫ್ಲೈಓವರ್‌ ಕಾಮಗಾರಿಯಿಂದಲೇ ಇಷ್ಟೆಲ್ಲ ಧೂಳಾಗುತ್ತಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಹಾಳಾದ ರಸ್ತೆ ದುರಸ್ತಿ ಮಾಡಿಸಿ ಧೂಳು ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಭೆ ನಡೆಸಿ ಗುತ್ತಿಗೆ ಪಡೆದ ಕಂಪನಿಗೆ ಕಾಮಗಾರಿ ಬೇಗ ಮುಗಿಸಲು ತಾಕೀತು ಮಾಡಿ ನಮ್ಮನ್ನು ರಕ್ಷಿಸಬೇಕೆಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

ಫ್ಲೈಓವರ್‌ ಕೆಲಸದಿಂದಾಗಿ ಧೂಳು ವಿಪರೀತವಾಗುತ್ತಿದೆ. ಇದರಿಂದಾಗಿ ನಮ್‌ ಕಾಂಪ್ಲೆಕ್ಸ್‌ಗೆ ಗ್ರಾಹಕರು ಬರಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಕಾಂಪ್ಲೆಕ್ಸ್‌ಗೆ ಪ್ಲಾಸ್ಟಿಕ್‌ ಪರದೆ ಹಾಕಿಸಿಕೊಳ್ಳಲಾಗಿದೆ.

ರಾಮಣ್ಣ, ದರ್ಶಿನಿ ಮಾಲೀಕರು, ಹಳೇ ಕೋರ್ಟ್‌ ಸರ್ಕಲ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಗಾದಿ ಹೊಸ ಚಿಂತನೆ, ಹೊಸ ಸಂಕಲ್ಪಗಳ ಆರಂಭ: ಡಾ. ಚಂದ್ರಕಾಂತ ಭಟ್
ಸಂಪಾಜೆ ಗ್ರಾಮ ಪಂಚಾಯಿತಿಗೆ 3ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ