ಬಾಡಿಗೆಗೆ ನಿಮ್ಮ ಬ್ಯಾಂಕ್‌ ಖಾತೆ ವಿವರ ಕೊಟ್ಟೀರಾ ಜೋಕೆ !

KannadaprabhaNewsNetwork |  
Published : Feb 10, 2026, 02:15 AM ISTUpdated : Feb 10, 2026, 11:02 AM IST
Bank

ಸಾರಾಂಶ

ಬಹುಕೋಟಿ ವಂಚನೆಯ ಮ್ಯೂಲ್ ಅಕೌಂಟ್ (ಬಾಡಿಗೆ ಖಾತೆ) ಫ್ರಾಡ್ ಜಾಲವನ್ನು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು ಪತ್ತೆ ಹಚ್ಚಿದ್ದು, ದೇಶಾದ್ಯಂತ 96ಕ್ಕೂ ಹೆಚ್ಚು ಪ್ರಕರಣಗಳಿಂದ ₹55 ಕೋಟಿಗೂ ಅಧಿಕ ಹಣವನ್ನು ವಂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 ಶಿವಮೊಗ್ಗ :  ಬಹುಕೋಟಿ ವಂಚನೆಯ ಮ್ಯೂಲ್ ಅಕೌಂಟ್ (ಬಾಡಿಗೆ ಖಾತೆ) ಫ್ರಾಡ್ ಜಾಲವನ್ನು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು ಪತ್ತೆ ಹಚ್ಚಿದ್ದು, ದೇಶಾದ್ಯಂತ 96ಕ್ಕೂ ಹೆಚ್ಚು ಪ್ರಕರಣಗಳಿಂದ ₹55 ಕೋಟಿಗೂ ಅಧಿಕ ಹಣವನ್ನು ವಂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ದೇಶವನ್ನೇ ಬೆಚ್ಚಿ ಬೀಳಿಸುವ ಬ್ಯಾಂಕಿಂಗ್ ವಂಚನೆ ಬಯಲಾಗಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ತುಂಗಾನಗರದ ನಿವಾಸಿ ಶರತ್ ಕುಮಾರ್‌ (29) ಬಂಧಿತ. ಈತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಈತ ಹಣದ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್‌ ಖಾತೆಯ ವಿವರ ಪಡೆದು ಸೈಬರ್‌ ವಂಚಕರಿಗೆ ನೀಡುತ್ತಿದ್ದ. ಈತನ ವಿರುದ್ಧ ಇತ್ತೀಚೆಗೆ ಶಿವಮೊಗ್ಗ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಆಧಾರದ ಮೇರೆಗೆ ಶರತ್‌ನನ್ನು ಬಂಧಿಸಲಾಗಿದ್ದು, ಹಲವು ಬ್ಯಾಂಕ್‌ಗಳ ಪಾಸ್‌ಬುಕ್‌, ಎಟಿಎಂ ಕಾರ್ಡ್‌, ಚೆಕ್‌ ಬುಕ್‌ಗಳನ್ನು ಜಪ್ತಿ ಮಾಡಲಾಗಿದೆ.

ವಂಚನೆ ಬಯಲಾಗಿದ್ದು ಹೇಗೆ?:

ಶರತ್‌ ಕುಮಾರ್‌ ಈ ಹಿಂದೆ ಟೀ ಅಂಗಡಿ ನಡೆಸುತ್ತಿದ್ದ ತನ್ನ ಸ್ನೇಹಿತ ಅಮಿತ್‌ ಎಂಬುವವರ ಬ್ಯಾಂಕ್‌ ಖಾತೆಯ ವಿವರ ಪಡೆದಿದ್ದ. ಜೊತೆಗೆ ಪಾಸ್‌ಬುಕ್‌, ಎಟಿಎಂ ಕಾರ್ಡ್‌ ಮೊಬೈಲ್‌ ನಂಬರ್‌ಗಳನ್ನು ಕೂಡ ಪಡೆದುಕೊಂಡಿದ್ದ. ಇದಕ್ಕೆ ಪ್ರತಿಯಾಗಿ 15 ದಿನಕ್ಕೊಮ್ಮೆ ಕಮಿಷನ್‌ ಕೊಡುವುದಾಗಿ ಆತನಿಗೆ ನಂಬಿಸಿದ್ದ. ಕಮಿಷನ್‌ ಆಸೆಗೆ ಅಮಿತ್‌ ಎಲ್ಲ ವಿವರವನ್ನು ಶರತ್‌ಗೆ ಕೊಟಿದ್ದ. ಆ ಬಳಿಕ ಶರತ್‌, ಸ್ನೇಹಿತ ಅಮಿತ್‌ನ ಬ್ಯಾಂಕ್‌ ಖಾತೆ ಫ್ರೀಜ್‌ ಆಗಿದೆ ಎಂದು ತಿಳಿಸಿದ್ದ. ಅನುಮಾನಗೊಂಡ ಅಮಿತ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗೆ ಹೋಗಿ ತಮ್ಮ ಖಾತೆಯ ಕುರಿತು ವಿಚಾರಿಸಿದ್ದರು. ಈ ಬ್ಯಾಂಕ್‌ ಖಾತೆಯ ವಿರುದ್ಧ 51 ಸೈಬರ್‌ ಕ್ರೈಮ್‌ ಪ್ರಕರಣ ದಾಖಲಾಗಿವೆ ಎಂದು ಬ್ಯಾಂಕ್‌ ಸಿಬ್ಬಂದಿ ತಿಳಿಸಿದ್ದರು. ಆತಂಕಗೊಂಡ ಅಮಿತ್‌ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದಾಗ ವಂಚನೆ ಪ್ರಕರಣ ಬಯಲಾಗಿದೆ.

₹55 ಕೋಟಿ ನಷ್ಟದ ಆರೋಪ:

ದೂರಿನ ಮೇರೆಗೆ ಶಿವಮೊಗ್ಗ ಪೊಲೀಸರು ಶರತ್‌ನನ್ನು ಬಂಧಿಸಿದ್ದು, ಈತನ ಬಳಿ ಇದ್ದ 19 ಬಾಡಿಗೆ ಬ್ಯಾಂಕ್ ಖಾತೆಗಳ ವಿರುದ್ಧ ದೇಶಾದ್ಯಂತ 96ಕ್ಕೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿವೆ. ಈ ಖಾತೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ₹55,43,56,248 ಹಣ ವಂಚನೆ ಎಸಗಲಾಗಿದೆ. ಅಲ್ಲದೆ ಈ 19 ಖಾತೆಗಳಿಂದ ₹11,48,42,898 ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ.

ದಂಧೆಕೋರರಿಗೆ ಸಿಗುತ್ತಿದ್ದ ಕಮಿಷನ್‌ ಎಷ್ಟು?

2021ರಿಂದ ಇದುವರೆಗೆ ನಡೆಸಿದ ತನಿಖೆಯಲ್ಲಿ ಸುಮಾರು 48,000 ಬಾಡಿಗೆ ಬ್ಯಾಂಕ್ ಖಾತೆಗಳು (ಮ್ಯೂಲ್ ಅಕೌಂಟ್ಸ್‌) ಅಕ್ರಮ ಚಟುವಟಿಕೆಗೆ ಬಳಕೆಯಾಗಿರುವುದು ಪತ್ತೆಯಾಗಿದೆ. ಈ ಖಾತೆಗಳ ಮೂಲಕ ಅಂದಾಜು ₹100 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ಹಣಕಾಸು ವಹಿವಾಟು ನಡೆಸಲಾಗಿದೆ. ಒಂದು ನಕಲಿ ಖಾತೆಯನ್ನು ವಂಚಕರಿಗೆ ಹಸ್ತಾಂತರಿಸಲು ಆರೋಪಿಗಳು ₹10,000 ರಿಂದ ₹20,000 ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಕಮಿಷನ್ ದಂಧೆ:

ಮಾರಾಟ ಮಾಡಿದ ಖಾತೆಯಲ್ಲಿ ಪ್ರತಿ ₹1 ಲಕ್ಷ ವರ್ಗಾವಣೆಯಾದಾಗ, ಆರೋಪಿಗಳಿಗೆ ₹3000 ರಿಂದ ₹5000 ಕಮಿಷನ್ ಸಿಗುತ್ತಿತ್ತು. ಕೆಲವರು ಇದನ್ನೇ ಒಂದು ಲಾಭದಾಯಕ ವೃತ್ತಿಯನ್ನಾಗಿಸಿಕೊಂಡು ವ್ಯವಸ್ಥಿತವಾಗಿ ದಂಧೆ ನಡೆಸುತ್ತಿರುವುದು ತನಿಖೆಯಿಂದ ಬಯಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಲೆ ಏರಿಸಿ ಜನರ ಜೇಬಿಗೆ ಕೇಂದ್ರ ಕನ್ನ: ಕೈ ಟೀಕೆ
ನಾನು ಸಾಲರಾಮಯ್ಯ ಅಲ್ಲ : ಸಿದ್ದರಾಮಯ್ಯ ತಿರುಗೇಟು