ಶಿವಮೊಗ್ಗ, ಎನ್.ಆರ್.ಪುರ ಮಾರ್ಗವಾಗಿ ಶೃಂಗೇರಿಗೆ ರೈಲು ಕೊಡಿ

KannadaprabhaNewsNetwork |  
Published : Jun 23, 2026, 02:00 AM IST
ನರಸಿಂಹರಾಜಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ 200 ವರ್ಷ ಹಿಂದೆ ಬಿಟಿಷರು ಕಟ್ಟಿದ್ದ  ತಡಸಾ ಸೇತುವೆ ಮೇಲೆ ತರೀಕೆರೆ- ಲಕ್ಕವಳ್ಳಿ ಮಾರ್ಗವಾಗಿ ರೈಲು ಸಂಚಾರವಾಗುತ್ತಿತ್ತು. | Kannada Prabha

ಸಾರಾಂಶ

ನರಸಿಂಹರಾಜಪುರಹಲವು ವರ್ಷಗಳಿಂದ ಈ ಭಾಗದ ಜನರ ಒತ್ತಾಸೆಯಾಗಿದ್ದ ಶಿವಮೊಗ್ಗ- ನರಸಿಂಹರಾಜಪುರ- ಕೊಪ್ಪ- ಶೃಂಗೇರಿ ಮೂಲಕ ಮಂಗಳೂರು ತಲುಪುವ ರೈಲು ಮಾರ್ಗ ಇದೀಗ ಮರೀಚಿಕೆಯಾಗುವ ಲಕ್ಷಣದಿಂದ ಎನ್.ಆರ್.ಪುರ, ಕೊಪ್ಪ ಜನರಲ್ಲಿ ನಿರಾಸೆ ಕಾರ್ಮೋಡ ಕವಿದಿದೆ.

- 22 ಕಿ.ಮೀ.ಮಾರ್ಗಕ್ಕೆ ಇದ್ದರೂ ಒಪ್ಪಿಗೆ ಯೋಜನೆ ಮರೀಚಿಕೆ । ಬಯಲು ಸೀಮೆಗೆ ನೀರು ಕೊಟ್ಟು ಅರ್ಧ ಮುಳುಗಿದ ಎನ್.ಆರ್.ಪುರ ಪ್ರವಾಸೋದ್ಯಮಕ್ಕೆ ರೈಲು ಅನಿವಾರ್ಯ

ಯಡಗೆರೆ ಮಂಜುನಾಥ್

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಹಲವು ವರ್ಷಗಳಿಂದ ಈ ಭಾಗದ ಜನರ ಒತ್ತಾಸೆಯಾಗಿದ್ದ ಶಿವಮೊಗ್ಗ- ನರಸಿಂಹರಾಜಪುರ- ಕೊಪ್ಪ- ಶೃಂಗೇರಿ ಮೂಲಕ ಮಂಗಳೂರು ತಲುಪುವ ರೈಲು ಮಾರ್ಗ ಇದೀಗ ಮರೀಚಿಕೆಯಾಗುವ ಲಕ್ಷಣದಿಂದ ಎನ್.ಆರ್.ಪುರ, ಕೊಪ್ಪ ಜನರಲ್ಲಿ ನಿರಾಸೆ ಕಾರ್ಮೋಡ ಕವಿದಿದೆ.

2018ರಲ್ಲಿ ಸದಾನಂದ ಗೌಡರು ರೈಲ್ವೆ ಮಂತ್ರಿಯಾಗಿದ್ದಾಗ ಶಿವಮೊಗ್ಗ- ಎನ್.ಆರ್.ಪುರ- ಕೊಪ್ಪ- ಶೃಂಗೇರಿ ಮೂಲಕ ಮಂಗಳೂರು ಮಾರ್ಗದ ರೈಲು ಸಂಚಾರದ ಬಗ್ಗೆ ಲೋಕಸಭೆಯಲ್ಲಿ ಮಾಡಿದ್ದ ಪ್ರಸ್ತಾವನೆ ಈ ಭಾಗದ ಜನರಲ್ಲಿ ಆಶಾಭಾವನೆ ಮೂಡಿಸಿತ್ತು. ಜಯಪ್ರಕಾಶ ಹೆಗಡೆ ಸಂಸದರಾಗಿದ್ದಾಗಲೂ ಇದೇ ರೈಲು ಮಾರ್ಗದ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರು. ಈ ಮಾರ್ಗದಿಂದ ಜನ ಸಂಚಾರ ಜತೆ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದಲೂ ಉತ್ತಮ ಎಂಬುದು ಸುಳ್ಳಲ್ಲ. ಹಾಗಾಗಿ ಸಾಕಷ್ಟು ಭರವಸೆ ಮೂಡಿಸಿದ್ದ ಈ ಯೋಜನೆ ಇದೀಗ ಶಿವಮೊಗ್ಗ- ಅರಸಾಳು,ಹೊಸನಗರ- ರಿಪ್ಪಿನಪೇಟೆ, ತೀರ್ಥಹಳ್ಳಿ-ಕೋಣಂದೂರು-ಕಮ್ಮರಡಿ, ಶೃಂಗೇರಿ- ಕೆರಕಟ್ಟೆ ಮಾರ್ಗವಾಗಿ ಮಂಗಳೂರು ತಲಪುವ ಯೋಜನೆಯಾಗುವ ಮಾಹಿತಿ ತಿಳಿದು ಸ್ಥಳಿಯರಲ್ಲಿ ನಿರಾಸೆ ತಂದಿದೆ.

ಒಂದೆಡೆ ಈಗ ಪ್ರಸ್ತಾಪಿಸಲಾಗುತ್ತಿರುವ ರೈಲ್ವೆ ಮಾರ್ಗ 332 ಕಿ.ಮೀ.ದೂರವಾಗಲಿದೆ. ಅಲ್ಲದೆ ಈ ಯೋಜನೆ ಕಾರ್ಯಗತ ವಾದರೆ ಶೃಂಗೇರಿ- ಮಂಗಳೂರು ಮಾರ್ಗದಲ್ಲಿ ಎನ್.ಆರ್.ಪುರ-ಕೊಪ್ಪ ತಾಲೂಕು ಸಂಪರ್ಕ ಬಿಟ್ಟು ಹೋಗಲಿದೆ. ಇದರಿಂದ ಗತಕಾಲದಿಂದ ಎನ್‌ ಆರ್‌ ಪುರದಲ್ಲಿ ಸಂಚರಿಸುತ್ತಿದ್ದ ರೈಲಿಗೆ ಮರು ಜೀವ ಸಿಗಲಿದೆ ಎಂದು ಕಾಯುತ್ತಾ ಭದ್ರೆಗಾಗಿ ಮುಳುಗಿ ಅಭಿವೃದ್ಧಿಯಲ್ಲೂ ಹಿನ್ನೆಡೆಯಾಗಿದ್ದ ಎನ್‌ ಆರ್‌ ಪುರಕ್ಕೆ ಸಂಪರ್ಕ ಸಾಧ್ಯವಾಗದೆ ಯೋಜನೆ ನೆನೆಗುದಿಗೆ ಬೀಳುವ ಆತಂಕ ಎದುರಾಗಿದೆ.

-- ಬಾಕ್ಸ್ ---

80 ವರ್ಷಗಳ ಹಿಂದಿತ್ತು 2 ರೈಲು

ನರಸಿಂಹರಾಜಪುರಕ್ಕೆ 80 ವರ್ಷಗಳ ಹಿಂದೆಯೇ 2 ರೈಲು ಬರುತ್ತಿದ್ದವು. ಒಂದು ಭದ್ರಾವತಿ ವಿಶ್ವೇಶ್ವರಯ್ಯ ಉಕ್ಕು ಹಾಗೂ ಕಬ್ಬಿಣ ಕಾರ್ಖಾನೆ ಕಲ್ಲಿದ್ದಲು ಹಾಗೂ ಕಾಗದ ಕಾರ್ಖಾನೆಗೆ ಬಿದಿರು ಬೊಂಬು ಸಾಗಿಸಲು ಟ್ರ್ಯಾಂಬೆ ಗೂಡ್ಸ್ ರೈಲು ಕಾರ್ಯಾಚರಿಸುತ್ತಿತ್ತು.

ಈ ರೈಲು ಭದ್ರಾವತಿಯಿಂದ 22 ಕಿ.ಮೀ.ದೂರದ ಜಂಕ್ಷನ್-ಕಣಗಲಸರ- ಮಾರಿದಿಬ್ಬ, ನೆಲಗದ್ದೆ-ಕೋಡಿಹಳ್ಳಿ, ಮುತ್ತಿನಕೊಪ್ಪ- ಆರಂಬಳ್ಳಿಗೆ 1970 ರವರೆಗೂ ಕಾರ್ಯನಿರ್ವಹಿಸಿತ್ತು. ನಂತರ ಸ್ಥಗಿತಗೊಂಡಿತ್ತು. ಕಾಲ ಕ್ರಮೇಣ ರೈಲು ಹಳಿಯೂ ಇಲ್ಲವಾಗಿದೆ. ಆದರೆ, ಈಗಲೂ ಪಹಣಿಯಲ್ಲಿ ಆ ರೈಲು ಮಾರ್ಗ ಇದೆ. ಅದೇ ಮಾರ್ಗದಲ್ಲಿ ಮತ್ತೆ ರೈಲು ಓಡಿಸಿ ಎಂಬುದೇ ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಜನರ ಪ್ರಮುಖ ಆಗ್ರಹವಾಗಿದೆ.

ಇದಲ್ಲದೆ ಮತ್ತೊಂದು ಪ್ಯಾಸೆಂಜರ್ ರೈಲು ತರೀಕೆರೆ-ಲಕ್ಕವಳ್ಳಿ- ತಡಸಾ ಮಾರ್ಗವಾಗಿ ಎನ್.ಆರ್.ಪುರಕ್ಕೆ ಬರುತ್ತಿತ್ತು. 1960ರಲ್ಲಿ ಲಕ್ಕವಳ್ಳಿಯಲ್ಲಿ ಭದ್ರಾ ಡ್ಯಾಂ ನಿರ್ಮಾಣದ ನಂತರ ಭದ್ರಾ ಹಿನ್ನೀರು ನಿಂತು ತಡಸಾ ಸೇತುವ ಮುಳುಗಡೆಯಾಗಿದ್ದರಿಂದ ಆ ರೈಲು ಮಾರ್ಗವೂ ಸ್ಥಗಿತವಾಯಿತು.

-- ಬಾಕ್ಸ್ --

ಹಳೆಯ ಮಾರ್ಗದ ಪುನಃಶ್ಚೇತನದಿಂದ ಪ್ರವಾಸೋದ್ಯಮ ಅಭಿವೃದ್ಧಿ

ಭದ್ರಾವತಿಯಿಂದ ನರಸಿಂಹರಾಜಪುರದ ಆರಂಬಳ್ಳಿವರೆಗಿನ 22 ಕಿ.ಮೀ. ದೂರದ ಹಳೆಯ ರೈಲು ಮಾರ್ಗಕ್ಕೆ ಅರಣ್ಯ ಇಲಾಖೆ ಒಪ್ಪಿಗೆಯೂ ಇದೆ. ಭೂ ಸ್ವಾಧೀನವೂ ಆಗಿದೆ. ಇಲ್ಲಿಂದ ಮುಂದೆ ಕೊಪ್ಪ ಮಾರ್ಗವಾಗಿ ಕೇವಲ 55 ಕಿಮೀ.ದೂರ ಕ್ರಮಿಸಿದರೆ ಶೃಂಗೇರಿ ತಲುಪಬಹುದು. ಈ ಮಾರ್ಗದಲ್ಲಿ ಹೆಚ್ಚು ಅರಣ್ಯ ನಾಶದ ಚಿಂತೆಯೂ ಇಲ್ಲ. ಎನ್.ಆರ್.ಪುರ ಸಿಂಹನ ಗದ್ದೆ ಬಸ್ತಿಮಠ, ಕೊಪ್ಪದ ಹರಿಹರಪುರ ಮಠ, ಬಂಡಿಗಡಿ ಮಠ ಈ ಮಾರ್ಗದಲ್ಲಿ ಸಿಗುವುದರಿಂದ ಈ ಮಠಗಳಿಗೆ ಪ್ರತಿ ದಿನ ಬರುವ ಸಾವಿರಾರು ಭಕ್ತರಿಗೆ ಅನುಕೂಲ. ರಸ್ತೆ ಮಾರ್ಗವನ್ನೇ ಆಶ್ರಯಿಸಿರುವ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಈ ಮಾರ್ಗ ಹೆಚ್ಚು ಉಪಯುಕ್ತ.

ಭತ್ತದ ಕಣಜ ಎಂದೇ ಪ್ರಸಿದ್ಧಿಯಾಗಿದ್ದ ನರಸಿಂಹರಾಜಪುರ ತಾಲೂಕು ಭದ್ರಾ ಡ್ಯಾಂನಿಂದ ಅರ್ಧ ಮುಳುಗಡೆಯಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದೆ. ತಾಲೂಕಿನ ಸುತ್ತಲೂ ಭದ್ರಾ ಹಿನ್ನೀರು ನಿಂತು ಸಮೀಪದಲ್ಲಿದ್ದ ಗ್ರಾಮಗಳೆಲ್ಲಾ ದೂರವಾಗಿವೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಮ್ಮ ಹುಟ್ಟೂರು ಎನ್.ಆರ್.ಪುರ ಅಭಿವೃದ್ಧಿ ಪಡಿಸುತ್ತಿದ್ದು ರೈಲು ಮಾರ್ಗವೂ ಬಂದರೆ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮವೂ ಬೆಳೆಯಲಿದೆ.

-- ಬಾಕ್ಸ್ --

ಜನಾಂದೋಲನ ಅಗತ್ಯ

ಶಿವಮೊಗ್ಗದಿಂದ ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ತೆರಳುವ ರೈಲು ಮಾರ್ಗದ ಪ್ರಸ್ತಾವನೆ ಬದಲಾಗದಂತೆ ತಡೆಯಲು ಪ್ರಮುಖವಾಗಿ ಚಿಕ್ಕಮಗಳೂರು ಸಂಸದರು, ಶಾಸಕರು ಹಾಗೂ ಮಾಜಿ ಸಚಿವರು ಒತ್ತಡ ತಂದು ಎನ್.ಆರ್.ಪುರ, ಕೊಪ್ಪ ಮಾರ್ಗದಲ್ಲೇ ಈ ರೈಲು ಬರುವಂತೆ ಮಾಡಲು ಜನಾಂದೋಲನ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ಒತ್ತಡ ಹೆಚ್ಚಿ ಪ್ರಸ್ತಾವಿತ ಈ ರೇಲ್ವೆ ಮಾರ್ಗ ಕೈ ತಪ್ಪದಿರಲು ಸ್ಥಳೀಯ ಜನಪ್ರತಿ ನಿಧಿಗಳು ಎಚ್ಚೆತ್ತು ಯೋಜನೆ ಜಾರಿಗೆ ಒತ್ತಡ ತರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-- ಕೋಟ್ --

ಶಿವಮೊಗ್ಗದಿಂದ ನರಸಿಂಹರಾಜಪುರ, ಕೊಪ್ಪ ಮಾರ್ಗದ ರೈಲಿನಿಂದ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. 22 ಕಿ.ಮೀ.ರೈಲು ಮಾರ್ಗವೂ ಇರುವುದರಿಂದ ಸುಲಭವಾಗಲಿದೆ.

ಎಂ.ಶ್ರೀನಿವಾಸ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ

--ಕೋಟ್ ---

ಈ ಮಾರ್ಗದ ರೈಲು ಸಂಚಾರ ಪ್ರಾರಂಭವಾದರೆ ರೈತರು ಬೆಳೆದ ಬೆಳೆಗಳ ಬೆಲೆ ಏರಿಕೆ ಸಾಧ್ಯತೆ ಇದ್ದು ಬೆಂಗಳೂರು ಹಾಗೂ ಇತರ ದೊಡ್ಡ ನಗರಗಳ ಸಂಪರ್ಕಕ್ಕೂ ರಹದಾರಿಯಾಗಲಿದೆ. ಇದೇ ಮಾರ್ಗದಲ್ಲಿ ರೈಲು ಆರಂಭಕ್ಕೆ ಒತ್ತಾಯಿಸಿ ಆಂದೋಲನ ನಡೆಯಬೇಕಿದೆ.

- ಸುಧಾಕರ ಎಸ್ ಶೆಟ್ಟಿ, ಜೆಡಿಎಸ್ ರಾಷ್ಟ್ರೀಯ ವಕ್ತಾರ, ತುಮಕಾನೆ, ಕೊಪ್ಪ ತಾಲೂಕು

-- ಕೋಟ್--

ಮುಂದಿನ 1 ವಾರದಲ್ಲಿ ರೇಲ್ವೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲರಿಗೂ ಅನುಕೂಲವಾಗುವ ರೈಲು ಸಂಚಾರ ಯೋಜನೆಗೆ ಒತ್ತಾಯಿಸುತ್ತೇನೆ.

- ಕೋಟಾ ಶ್ರೀನಿವಾಸ ಪೂಜಾರಿ, ಸಂಸದ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಲಿಗಿ ಕ್ರಾಸ್ ಮೇಲ್ಸೇತುವೆ ಲೋಕಾರ್ಪಣೆ
ಅಡವಿಟ್ಟ ಚಿನ್ನ ಕೇಳಿದ್ದಕ್ಕೆ ಗುಂಡಿನ ದಾಳಿ