ಪರಿಸರ ಸಂರಕ್ಷಣೆಗಾಗಿ ಕಪ್ಪತ್ತಗುಡ್ಡದಲ್ಲೀಗ ಹಸ್ತ ಪ್ರತಿಜ್ಞೆ

KannadaprabhaNewsNetwork |  
Published : Aug 20, 2025, 01:30 AM IST
ಪೋಟೋ ಇದೆ. | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದಿರುವ ಮತ್ತು ಶುದ್ಧ ಗಾಳಿಗೆ ಹೆಸರಾದ ಕಪ್ಪತ್ತಗುಡ್ಡ ಈಗ ಕೇವಲ ಪ್ರವಾಸಿ ತಾಣವಾಗಿ ಉಳಿದಿಲ್ಲ. ಅರಣ್ಯ ಇಲಾಖೆಯ ವಿನೂತನ ಪ್ರಯೋಗದಿಂದಾಗಿ ಪರಿಸರ ಪ್ರಜ್ಞೆಯ ಕೇಂದ್ರವಾಗಿ ರೂಪುಗೊಂಡಿದೆ.

ಶಿವಕುಮಾರ ಕುಷ್ಟಗಿ

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದಿರುವ ಮತ್ತು ಶುದ್ಧ ಗಾಳಿಗೆ ಹೆಸರಾದ ಕಪ್ಪತ್ತಗುಡ್ಡ ಈಗ ಕೇವಲ ಪ್ರವಾಸಿ ತಾಣವಾಗಿ ಉಳಿದಿಲ್ಲ. ಅರಣ್ಯ ಇಲಾಖೆಯ ವಿನೂತನ ಪ್ರಯೋಗದಿಂದಾಗಿ ಪರಿಸರ ಪ್ರಜ್ಞೆಯ ಕೇಂದ್ರವಾಗಿ ರೂಪುಗೊಂಡಿದೆ.

ಕಪ್ಪತ್ತಗುಡ್ಡಕ್ಕೆ ಭೇಟಿ ನೀಡುವ ಪ್ರವಾಸಿಗರು ಈಗ ಹಸ್ತ ಪ್ರತಿಜ್ಞೆ ಎಂಬ ಈ ಅನನ್ಯ ಕಾರ್ಯಕ್ರಮದ ಮೂಲಕ ಪ್ರತಿಜ್ಞೆ ಮಾಡಿ, ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಪರಿಸರ ಸಂರಕ್ಷಣೆಯ ಭಾಗವನ್ನಾಗಿಸಿದೆ.

​ಹಸ್ತ ಪ್ರತಿಜ್ಞೆ ಎಂದರೇನು?: ​ಕಪ್ಪತ್ತಗುಡ್ಡಕ್ಕೆ ಬರುವ ಪ್ರವಾಸಿಗರಿಗೆ ಇದೊಂದು ವಿನೂತನ ಅನುಭವ. ಡೋಣಿ ಗ್ರಾಮದ ಪ್ರವೇಶ ದ್ವಾರದಲ್ಲಿರುವ ಟಿಕೆಟ್ ಕೌಂಟರ್ ಬಳಿ, ಪ್ರವಾಸಿಗರಿಗೆ ಪರಿಸರ ಸ್ನೇಹಿ ಬಣ್ಣವನ್ನು ಕೈಗೆ ಹಚ್ಚಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆ ಬಣ್ಣದ ಕೈಯನ್ನು ಅಲ್ಲಿಯೇ ಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಸಲಾದ ಬೋರ್ಡ್‌ ಮೇಲೆ ಒತ್ತಿ ತಮ್ಮ ಗುರುತನ್ನು ಮೂಡಿಸಬೇಕು. ನಂತರ, ಬೋರ್ಡ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಿದ ತಕ್ಷಣ, ಅವರ ಹೆಸರಿನಲ್ಲಿರುವ ಪ್ರಮಾಣಪತ್ರವು ಅವರ ಮೊಬೈಲ್‌ಗೆ ಬರುತ್ತದೆ. ಈ ಪ್ರಮಾಣಪತ್ರದಲ್ಲಿ ಕಪ್ಪತ್ತಗುಡ್ಡದ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣಕ್ಕೆ ಸಹಕರಿಸುವ ಪ್ರತಿಜ್ಞೆ ಇರುತ್ತದೆ. ಇದು ಪ್ರವಾಸಿಗರಲ್ಲಿ ಹೆಮ್ಮೆಯ ಭಾವನೆ ಮೂಡಿಸುತ್ತಿದ್ದು, ಪರಿಸರ ರಕ್ಷಣೆಯಲ್ಲಿ ತಾವು ಕೂಡ ಭಾಗಿಯಾಗಿದ್ದೇವೆ ಎಂಬ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ.

ಪ್ರವಾಸಿಗರಿಗೆ ಹೊಸ ಸೌಲಭ್ಯ: ​ಅರಣ್ಯ ಇಲಾಖೆಯ ವಿನೂತನ ಯೋಜನೆಗಳಿಂದ ಕಪ್ಪತ್ತಗುಡ್ಡಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅವರಿಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲು ಆ. 15ರಂದು ಎರಡು ಹೊಸ ಸಫಾರಿ ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಇದು ಪ್ರವಾಸಿಗರಿಗೆ ಕಪ್ಪತ್ತಗುಡ್ಡದ ಪರಿಸರದಲ್ಲಿ ಸುಲಭವಾಗಿ ಸಂಚರಿಸಲು ಸಹಾಯಕವಾಗಿದೆ. ಪ್ರವಾಸಿಗರು ಆನ್‌ಲೈನ್ ಮೂಲಕವೇ ಸಫಾರಿ ಮತ್ತು ಇತರ ಚಟುವಟಿಕೆಗಳಿಗೆ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.

​ವಿಶೇಷತೆಗಳು: ​ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ, ಇಲ್ಲಿನ ವನ್ಯಜೀವಿಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದು. ಕಪ್ಪತ್ತಗುಡ್ಡ ಒಡಲಿನಲ್ಲಿರುವ ಹಾಗೂ ಸುತ್ತಮುತ್ತಲಿನ 93 ಕೆರೆಗಳ ಅಭಿವೃದ್ಧಿಗೆ ಒತ್ತು ಹಾಗೂ ಹೊಸ ಟ್ರಕಿಂಗ್ ಪಾಥ್ ಗುರುತಿಸಲಾಗಿದ್ದು, ಇದರಿಂದ ಯುವ ಸಮುದಾಯವನ್ನು ಕಪ್ಪತ್ತಗುಡ್ಡದತ್ತ ಆಕರ್ಷಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿಕೊಂಡಿದೆ.

ಕಪ್ಪತ್ತಗುಡ್ಡದ ಈ ಹಸ್ತ ಪ್ರತಿಜ್ಞೆ ಪರಿಸರ ಜಾಗೃತಿಯ ಹೊಸ ಮಾರ್ಗವಾಗಿದೆ. ಪ್ರವಾಸಿಗರು ಕಪ್ಪತ್ತಗುಡ್ಡಕ್ಕೆ ಭೇಟಿ ನೀಡುವಾಗ ಕೇವಲ ವೀಕ್ಷಕರಾಗಿರದೇ, ಅವರು ಕೂಡಾ ಅದರ ಸಂರಕ್ಷಕರಾಗಿ ಬದಲಾಗುತ್ತಿದ್ದಾರೆ.

ಕಪ್ಪತ್ತಗುಡ್ಡವನ್ನು ಒಂದು ಸುಸ್ಥಿರ ಪ್ರವಾಸಿ ತಾಣವನ್ನಾಗಿ ಮಾಡುವಲ್ಲಿ ಅರಣ್ಯ ಇಲಾಖೆ ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸುತ್ತಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಸಾಕಷ್ಟು ಜನರು ಈ ವಿನೂತನ ಹಸ್ತಪ್ರತಿಜ್ಞೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಯೋಜನೆ ರೂವಾರಿಯಾದ ಆರ್‌ಎಫ್‌ಓ ಮಂಜುನಾಥ ಮೇಗಲಮನಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌