ಕೇಂದ್ರ ಸರ್ಕಾರವು ಪಿಎಂ-ಕಿಸಾನ್ ಯೋಜನೆಯಡಿ ಹಣ ಪಡೆಯುವ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯಗೊಳಿಸಿದೆ. ಹೀಗಾಗಿ ಕಂತು ಬಿಡುಗಡೆಯಾಗುವ ಮುನ್ನ ಬಾಕಿ ಇರುವ ರೈತರು ಇ-ಕೆವೈಸಿ ಪೂರ್ಣಗೊಳಿಸಬೇಕಾಗಿದೆ.
ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ 24ನೇ ಕಂತಿನ ಹಣ ಇದೇ ತಿಂಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ ಕುಷ್ಟಗಿ ತಾಲೂಕಿನಲ್ಲಿ ಸುಮಾರು 70 ಸಾವಿರ ರೈತರ ಪೈಕಿ 35,793 ರೈತರ ಇ-ಕೆವೈಸಿ ಪ್ರಕ್ರಿಯೆ ಬಾಕಿ ಉಳಿದಿದೆ. ಇ-ಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳಿಗೆ ಕಂತಿನ ಹಣ ದೊರೆಯದೇ ಇರುವ ಸಾಧ್ಯತೆ ಇರುವುದರಿಂದ ರೈತರು ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೃಷಿ ಇಲಾಖೆ ಸೂಚಿಸಿದೆ.
ಕೇಂದ್ರ ಸರ್ಕಾರವು ಪಿಎಂ-ಕಿಸಾನ್ ಯೋಜನೆಯಡಿ ಹಣ ಪಡೆಯುವ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯಗೊಳಿಸಿದೆ. ಹೀಗಾಗಿ ಕಂತು ಬಿಡುಗಡೆಯಾಗುವ ಮುನ್ನ ಬಾಕಿ ಇರುವ ರೈತರು ಇ-ಕೆವೈಸಿ ಪೂರ್ಣಗೊಳಿಸಬೇಕಾಗಿದೆ.
ಹೋಬಳಿವಾರು ಬಾಕಿ: ಕುಷ್ಟಗಿ ಹೋಬಳಿಯಲ್ಲಿ 10,918, ಹನುಮಸಾಗರದಲ್ಲಿ 10,792, ಹನಮನಾಳದಲ್ಲಿ 7,383 ಹಾಗೂ ತಾವರಗೇರಾ ಹೋಬಳಿಯಲ್ಲಿ 6,700 ರೈತರ ಇ-ಕೆವೈಸಿ ಬಾಕಿ ಇದೆ. ನಾಲ್ಕು ಹೋಬಳಿಗಳಲ್ಲಿ ಒಟ್ಟು 35,793 ರೈತರು ಇ-ಕೆವೈಸಿ ಪೂರ್ಣಗೊಳಿಸಬೇಕಾಗಿದೆ.
ಮೊಬೈಲ್‌ನಲ್ಲೇ ಮಾಡಿಕೊಳ್ಳಬಹುದು: ರೈತರು ಮುಖ ದೃಢೀಕರಣ (ಫೇಸ್ ಆಥೆಂಟಿಕೇಷನ್) ಸೌಲಭ್ಯ ಹೊಂದಿರುವ ಸಂಬಂಧಿತ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ನಲ್ಲೇ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದು. ಮೊಬೈಲ್ ಮೂಲಕ ಮಾಡಲು ಸಾಧ್ಯವಾಗದವರು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ), ಗ್ರಾಮ ಒನ್ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ಖಾತೆಗೆ ನೇರ ಜಮೆ: ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 24ನೇ ಕಂತಿನ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಬಯೋಮೆಟ್ರಿಕ್ ಅಥವಾ ಮುಖ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಿರುವ ಫಲಾನುಭವಿಗಳಿಗೆ ಮಾತ್ರ ಕಂತಿನ ಹಣ ಲಭ್ಯವಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.ಇ-ಕೆವೈಸಿ ಮಾಡಿಸಬೇಕು: ಇ-ಕೆವೈಸಿ ಮಾಡಿಸಿಕೊಳ್ಳಲು ರೈತರು ಕೊನೆಯ ಕ್ಷಣದ ವರೆಗೆ ಕಾಯದೆ ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇ-ಕೆವೈಸಿ ಬಾಕಿ ಉಳಿಸಿಕೊಂಡರೆ ಪಿಎಂ-ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಪಡೆಯಲು ತೊಂದರೆಯಾಗಬಹುದು. ರೈತರು ಸ್ವತಃ ಮೊಬೈಲ್ ಮೂಲಕ ಅಥವಾ ಸಮೀಪದ ಸಿಎಸ್‌ಸಿ, ಗ್ರಾಮ ಒನ್ ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಕುಷ್ಟಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.