ಡಾ. ಹೆಗ್ಗಡೆ ಕಾರ್ಯವೈಖರಿಗೆ ಪ್ರಧಾನಿ ಮೋದಿ ಮೆಚ್ಚುಗೆ

KannadaprabhaNewsNetwork |  
Published : Aug 11, 2024, 01:37 AM IST
ಭೇಟಿ | Kannada Prabha

ಸಾರಾಂಶ

ಅನೇಕ ವಿಷಯಗಳ ಬಗ್ಗೆ ಮೋದಿ ಅವರೊಂದಿಗೆ ಹೆಗ್ಗಡೆ ಅವರು ಸುದೀರ್ಘ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಪಾರ್ಲಿಮೆಂಟ್ ಭವನದ ಪ್ರಧಾನ ಕಚೇರಿಯಲ್ಲಿ ಭೇಟಿಯಾಗಿ ಮೂರನೇ ಬಾರಿ ಪ್ರಧಾನಮಂತ್ರಿ ಆಯ್ಕೆಯಾಗಿರುವುದಕ್ಕೆ ಶುಭಕೋರಿದರು. ಶ್ರೀ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದವನ್ನು ನೀಡಿ ದೇಶಕ್ಕೆ ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಆಶೀರ್ವದಿಸಿದರು.

ನಂತರ ಅನೇಕ ವಿಷಯಗಳ ಬಗ್ಗೆ ಮೋದಿ ಅವರೊಂದಿಗೆ ಹೆಗ್ಗಡೆ ಅವರು ಸುದೀರ್ಘ ಚರ್ಚೆ ನಡೆಸಿದರು. ರಾಜ್ಯಸಭಾ ಸಂಸದರ ವ್ಯಾಪ್ತಿಗೆ ಬರುವ ನಿಧಿಯನ್ನು ಹೆಗ್ಗಡೆಯವರು ಬೀದರ್‌ನಲ್ಲಿ ವಿನೂತನವಾಗಿ ವಿನಿಯೋಗಿಸಿ ಕ್ಷೀರಕ್ರಾಂತಿಗೆ ನಾಂದಿ ಹಾಡಿರುವ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಇದು ಒಂದು ಮಾದರಿ ಸಂಸದರ ನಿಧಿಯ ಸದ್ವಿನಿಯೋಗ ಎಂದು ಪ್ರಧಾನಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಗೆಯೇ ರಾಜ್ಯಾದ್ಯಂತ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ವಹಿಸಲ್ಪಡುತ್ತಿರುವ 10 ಸಾವಿರ ಸಿ.ಎಸ್.ಸಿ. ಕೇಂದ್ರಗಳ ಮೂಲಕ ಕೇಂದ್ರ ಸರ್ಕಾರದ ಹಾಗೂ ಸಿ.ಎಸ್.ಸಿ.ಯ ಪ್ರಮುಖ ಸೇವೆಗಳನ್ನು ಗ್ರಾಮೀಣ ಜನತೆಯ ಮನೆ ಬಾಗಿಲಿಗೆ ತಲುಪಿಸುತ್ತಿರುವ ಬಗ್ಗೆ ಶ್ರೀ ಹೆಗ್ಗಡೆಯವರು ವಿವರಿಸಿದರು. ಇಲ್ಲಿಯವರೆಗೆ ಸುಮಾರು 3 ಕೋಟಿ ಸಿ.ಎಸ್.ಸಿ. ಸೇವೆಗಳು ಯೋಜನೆಯ ಮೂಲಕ ಜನಸಾಮಾನ್ಯರಿಗೆ ತಲುಪಿರುವ ಬಗ್ಗೆ ಪ್ರಧಾನಮಂತ್ರಿಗಳು ಅಚ್ಚರಿ ವ್ಯಕ್ತಪಡಿಸಿದರು. ಹೆಗ್ಗಡೆಯವರ ಈ ಎಲ್ಲ ಕಾರ್ಯಗಳ ಚಿಂತನೆಯು ದೇಶಕ್ಕೆ ಮಾದರಿಯಾಗಲಿ ಎಂದು ಪ್ರಧಾನಮಂತ್ರಿಗಳು ಶ್ಲಾಘಿಸಿದರು. ಬೀದರ್‌ನಲ್ಲಿ ಕ್ಷೀರಕ್ರಾಂತಿ: ಹೆಗ್ಗಡೆಯವರು ತಮ್ಮ ಸಂಸದರ ನಿಧಿಯಿಂದ ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಯಾದ ಬೀದರ್‌ನಲ್ಲಿ ಕ್ಷೀರಕ್ರಾಂತಿ ಮಾಡುವ ಯೋಜನೆ ಹಾಕಿಕೊಂಡು ಕೆ.ಎಂ.ಎಫ್. ಸಹಯೋಗದೊಂದಿಗೆ ಅನೇಕ ಹಾಲು ಒಕ್ಕೂಟಗಳನ್ನು ಅಭಿವೃದ್ಧಿಪಡಿಸಿದರು. ಈ ಮೂಲಕ ಹೈನುಗಾರಿಕೆ ಮಾಡಲು ಅನೇಕ ಪ್ರೋತ್ಸಾಹಗಳನ್ನು ನೀಡಿದ್ದಾರೆ.

ಸಂಸದರ ನಿಧಿಯಿಂದ ಹಾಲು ಸಂಗ್ರಹಣಾ ಕಟ್ಟಡಗಳನ್ನು ನಿರ್ಮಿಸಿದ್ದಲ್ಲದೆ, ಹಾಲು ಸಂಗ್ರಹವನ್ನು ಹೆಚ್ಚಿಸಿಕೊಳ್ಳಲು ಅತ್ಯಾಧುನಿಕ ಯಂತ್ರಗಳಾದ ಆಟೋಮ್ಯಾಟಿಕ್ ಮಿಲ್ಕ್ ಕಲೆಕ್ಟಿಂಗ್ ಯುನಿಟ್(ಎ.ಎಂ.ಸಿ.ಯು.), ಸ್ಟೈನ್‍ಲೆಸ್ ಸ್ಟೀಲ್ ಕ್ಯಾನ್, ಪ್ಯಾಟೋಮ್ಯಾಟಿಕ್ ಯಂತ್ರ, ಹಾಲು ತೂಕದ ಯಂತ್ರಗಳನ್ನು ಒದಗಿಸಿರುತ್ತಾರೆ. ಯೋಜನೆಯ ಕೃಷಿ ಅಧಿಕಾರಿಗಳನ್ನು ನಿಯೋಜಿಸಿ ಗ್ರಾಮೀಣ ರೈತರರಿಗೆ ಹೈನುಗಾರಿಕೆಯ ಬಗ್ಗೆ ಸೂಕ್ತ ತರಬೇತಿಯನ್ನು ನೀಡಿದ್ದಾರೆ. ಈ ಯೋಜನೆ ಪ್ರಾರಂಭವಾಗುವುದಕ್ಕಿಂತ ಮುಂಚೆ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರತಿನಿತ್ಯ 18 ಸಾವಿರ ಲೀಟರ್ ಮಾತ್ರ ಇತ್ತು. ಇದು ಯೋಜನೆಯಿಂದಾಗಿ ಪ್ರತಿ ದಿನ ಗರಿಷ್ಠ 60 ಸಾವಿರ ಲೀಟರ್‌ಗೆ ಏರಿಕೆ ಕಂಡಿದ್ದು ಕೆಲವೇ ತಿಂಗಳುಗಳಲ್ಲಿ ಪ್ರತಿನಿತ್ಯ 1 ಲಕ್ಷ ಲೀಟರ್ ಹಾಲು ಸಂಗ್ರಹದ ಗುರಿಯನ್ನು ತಲುಪಲಿದೆ. ಆ ಮೂಲಕ ಇದೊಂದು ಐತಿಹಾಸಿಕ ಉತ್ಪಾದನೆಯಾಗಿರುತ್ತದೆ ಎಂದು ಹೆಗ್ಗಡೆಯವರು ಪ್ರಧಾನಿಗೆ ವಿವರಿಸಿದಾಗ ಸಂಸದರ ನಿಧಿಯ ಬಳಕೆಗೆ ಇದು ಒಂದು ಉತ್ತಮ ಮಾದರಿ ಎಂದು ಪ್ರಧಾನಮಂತ್ರಿಗಳು ಶ್ಲಾಘಿಸಿದರು.

ಆಯುಷ್ಮಾನ್ ಸೇವೆಗೂ ಮೆಚ್ಚುಗೆ : ವೀರೇಂದ್ರ ಹೆಗ್ಗಡೆಯವರು ಮುನ್ನಡೆಸುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಕೇಂದ್ರ ಸರಕಾರದ ತಂತ್ರಜ್ಞಾನ ಮತ್ತು ಮಾಹಿತಿ ವಿದ್ಯುನ್ಮಾನ ಸಚಿವಾಲಯದ ಮಹತ್ವದ ಕಾರ್ಯಕ್ರಮವಾದ ಸಿ.ಎಸ್.ಸಿ. ಸೇವೆಗಳನ್ನು ಜನ ಸಾಮಾನ್ಯರಿಗೆ ನೀಡುವ ಒಂದು ಪಾಲುದಾರಿಕಾ ಒಪ್ಪಂದವಾಗಿರುತ್ತದೆ. ರಾಜ್ಯಾದ್ಯಾಂತ ಯೋಜನೆಯು 10 ಸಾವಿರ ಗ್ರಾಹಕ ಸೇವಾಕೇಂದ್ರಗಳ ಮೂಲಕ ಸಿ.ಎಸ್.ಸಿ. ಸೇವೆಯನ್ನು ಯಶಸ್ವಿಯಾಗಿ ಜನಸಾಮಾನ್ಯರಿಗೆ ಯೋಜನೆಯಿಂದ ನೀಡಲಾಗುತ್ತಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ