ಹಿಂಬಾಗಿಲ ಮೂಲಕ ಕರ್ನಾಟಕದಲ್ಲಿ ಮುಸ್ಲಿಂ ಮೀಸಲು: ಮೋದಿ ಕಿಡಿ

KannadaprabhaNewsNetwork |  
Published : Apr 25, 2024, 01:05 AM ISTUpdated : Apr 25, 2024, 06:23 AM IST
ಪ್ರಧಾನಿ ಮೋದಿ | Kannada Prabha

ಸಾರಾಂಶ

ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕೆ ಅನ್ಯಾಯ ಮಾಡಿ ಜಾತ್ಯತೀತತೆಯ ಹತ್ಯೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.

ಸಾಗರ್‌/ಅಂಬಿಕಾಪುರ: ‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು, ಇತರೆ ಹಿಂದುಳಿದ ಸಮುದಾಯಗಳ ಕೋಟಾದಲ್ಲೇ ಮುಸ್ಲಿಮರನ್ನೂ ಸೇರಿಸುವ ಮೂಲಕ ಒಬಿಸಿ ಮೀಸಲು ಪ್ರಮಾಣ ಕಡಿತ ಮಾಡಿದೆ. ಹಿಂಬಾಗಿಲ ಮೂಲಕ ಧರ್ಮಾಧಾರಿತ ಮೀಸಲು ಜಾರಿಯ ಈ ಮಾದರಿಯನ್ನು ದೇಶವ್ಯಾಪಿ ವಿಸ್ತರಿಸುವ ಉದ್ದೇಶವನ್ನು ಕಾಂಗ್ರೆಸ್‌ ಹೊಂದಿದೆ. 

ಒಬಿಸಿಗಳ ಅತಿದೊಡ್ಡ ಶತ್ರು ಎಂದರೆ ಕಾಂಗ್ರೆಸ್‌’ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.ಮಂಗಳವಾರ ರಾಜಸ್ಥಾನದ ಟೋಂಕ್‌ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ‘ಧರ್ಮದ ಆಧಾರದ ಮೇಲೆ ಮೀಸಲಾತಿ ವಿಸ್ತರಿಸಿ ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಪ್ರಯತ್ನಿಸಿದೆ’ ಎಂದು ದೂರಿದ್ದರು.

 ಅದರ ಬೆನ್ನಲ್ಲೇ ಬಿಡುಗಡೆಯಾದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಹೇಳಿಕೆಯಲ್ಲಿ ಕರ್ನಾಟಕ ಸರ್ಕಾರವು ಎಲ್ಲಾ ಮುಸ್ಲಿಮರನ್ನೂ ಏಕಪಕ್ಷೀಯವಾಗಿ ಹಿಂದುಳಿದ ವರ್ಗ ಎಂದು ಘೋಷಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು.ಬುಧವಾರ ಛತ್ತೀಸ್‌ಗಢದ ಅಂಬಿಕಾಪುರ ಮತ್ತು ಮಧ್ಯಪ್ರದೇಶದ ಸಾಗರ್‌ನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ಮೋದಿ ಹಿಂದುಳಿದ ವರ್ಗಗಳ ಆಯೋಗದ ಹೇಳಿಕೆ ಆಧರಿಸಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಧರ್ಮಾಧಾರಿತ ಮೀಸಲು ನೀಡಬಾರದು ಎಂದು ನಮ್ಮ ಸಂವಿಧಾನ ರಚನೆಕಾರರ ನಿರ್ಧಾರವಾಗಿತ್ತು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಕೂಡಾ ಇಂಥ ಮೀಸಲಿಗೆ ವಿರುದ್ಧವಾಗಿದ್ದರು. ಆದರೆ 2004ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಧರ್ಮಾಧಾರಿತ ಮೀಸಲು ಘೋಷಣೆ ಮೂಲಕ ಅಂಬೇಡ್ಕರ್‌ ಅವರ ನಿಲುವುಗಳಿಗೆ ಚೂರಿ ಇರಿಯಿತು. 2009 ಮತ್ತು 2014ರ ಚುನಾವಣಾ ಪ್ರಣಾಳಿಕೆಯಲ್ಲೂ ಇದೇ ನಿಲುವನ್ನು ಕಾಂಗ್ರೆಸ್‌ ವ್ಯಕ್ತಪಡಿಸಿತು. ಜೊತೆಗೆ ಆಂಧ್ರದಲ್ಲಿ ಇಂಥ ನೀತಿ ಜಾರಿಗೆ ಮುಂದಾಯಿತಾದರೂ ಅದು ಜಾರಿಗೊಳ್ಳಲಿಲ್ಲ’ ಎಂದು ಮೋದಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಈ ನಡುವೆ ‘ಕೆಲ ವರ್ಷಗಳ ಹಿಂದೆ ಕರ್ನಾಟಕದಲ್ಲೂ ಕಾಂಗ್ರೆಸ್‌ ಇದೇ ರೀತಿ ಧರ್ಮಾಧಾರಿತ ಮೀಸಲು ಜಾರಿ ಮಾಡಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ (ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ) ಸಂವಿಧಾನಕ್ಕೆ ವಿರುದ್ಧವಾಗಿದ್ದ ಈ ಮೀಸಲು ರದ್ದುಪಡಿಸಿತು. ಆದರೆ ಇದೀಗ ಮತ್ತೆ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಮುಸ್ಲಿಮರನ್ನೂ, ಒಬಿಸಿಗಳ ಕೋಟಾದಲ್ಲೇ ಸೇರಿಸುವ ಹಿಂಬಾಗಿಲ ಮೂಲಕ ಧರ್ಮಾಧಾರಿತ ಮೀಸಲು ಜಾರಿಯ ತಪ್ಪು ಮಾಡಿದೆ. ಈ ಮೂಲಕ ಅದು ಒಬಿಸಿಗಳ ಬಹುಪಾಲು ಮೀಸಲು ಕಸಿದುಕೊಂಡಿದೆ. ಈ ಮಾದರಿಯನ್ನು ಅದು ದೇಶವ್ಯಾಪಿ ಜಾರಿಗೊಳಿಸುವ ಉದ್ದೇಶ ಹೊಂದಿದ್ದು, ಇದು ನಿಮ್ಮ ಭವಿಷ್ಯದ ತಲೆಮಾರನ್ನು ನಾಶಪಡಿಸಲಿದೆ’ ಎಂದು ಮೋದಿ ಎಚ್ಚರಿಸಿದರು.

‘ಕಾಂಗ್ರೆಸ್‌ ಒಬಿಸಿಗಳ ಅತಿದೊಡ್ಡ ಶತ್ರು. ಅದು ಒಬಿಸಿಗಳ ಹಕ್ಕನ್ನು ಕಸಿದುಕೊಂಡಿದೆ. ಕಾಂಗ್ರೆಸ್‌ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕೆ ಅನ್ಯಾಯ ಮಾಡಿದೆ, ಜಾತ್ಯತೀತೆಯನ್ನು ಹತ್ಯೆಗೈದಿದೆ, ಸಂವಿಧಾನದ ಸ್ಫೂರ್ತಿಯನ್ನು ಉಲ್ಲಂಘಿಸಿದೆ ಮತ್ತು ಬಾಬಾಸಾಹೇಬ್‌ ಅವರನ್ನು ಅವಮಾನಿಸಿದೆ. ಕಾಂಗ್ರೆಸ್‌ ಸಂವಿಧಾನವನ್ನೇ ಬದಲಾಯಿಸಿ ಎಸ್‌ಸಿ, ಎಸ್ಟಿ, ಒಬಿಸಿಗಳ ಹಕ್ಕನ್ನು ಕಸಿದುಕೊಂಡು ತನ್ನ ವೋಟ್‌ಬ್ಯಾಂಕ್‌ಗೆ ನೀಡಲು ಬಯಸಿದೆ’ ಎಂದು ಮೋದಿ ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ