ಪಿಎಂ ಸೂರ್ಯಘರ್ ಉಡುಪಿಯಲ್ಲಿ ಗುರಿ ಮೀರಿದ ಸಾಧನೆ : ಕೋಟ ಸಂತಸ

KannadaprabhaNewsNetwork |  
Published : Apr 11, 2026, 02:45 AM IST
ಸಂಸದ ಕೋಟ ಅವರು ಪಿಎಂ ಸೂರ್ಯಘರ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು | Kannada Prabha

ಸಾರಾಂಶ

ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಗುರಿ ಮೀರಿದ ಸಾಧನೆ ಮಾಡಲಾಗಿದ್ದು, ಫಲಾನುಭವಿಗಳಿಗೆ 10 ಕೋಟಿ ರು. ಸಬ್ಸಿಡಿ ಪಾವತಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿ: ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಗುರಿ ಮೀರಿದ ಸಾಧನೆ ಮಾಡಲಾಗಿದ್ದು, ಫಲಾನುಭವಿಗಳಿಗೆ 10 ಕೋಟಿ ರು. ಸಬ್ಸಿಡಿ ಪಾವತಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಶುಕ್ರವಾರ ಪಿಎಂ ಸೂರ್ಯಘರ್ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.ಈ ಯೋಜನೆಯಡಿ ಉಡುಪಿ ಜಿಲ್ಲೆಗೆ 2024 - 25ರಲ್ಲಿ 302 ಮನೆಗಳಿಗೆ ಸೌರಶಕ್ತಿ ಅಳ‍ವಡಿಕೆಯ ಗುರಿಯಿದ್ದರೂ 490 ಮನೆಗಳಿಗೆ ಯೋಜನೆ ಅ‍ಳವಡಿಸಲಾಗಿದೆ. 2025 - 26ರಲ್ಲಿ 240 ಮನೆಗಳ ಗುರಿ ಇದ್ದು, ಈಗಾಗಲೇ 868 ಮನೆಗಳಿಗೆ ಸೌರಫಲಕ ಅಳವಡಿಸಲಾಗಿದೆ ಎಂದವರು ಸಂತಸ ವ್ಯಕ್ತಪಡಿಸಿದರು.ಮುಂದಿನ ದಿನಗಳಲ್ಲಿ ಮತ್ತಷ್ಟು ಮನೆಗಳ ಮೇಲ್ಛಾವಣಿಯ ಮೇಲೆ ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಡಿ ಸೋಲಾರ್ ವಿದ್ಯುತ್ ಅಳವಡಿಕೆ ಮಾಡಬೇಕು ಎಂದು ಸಂಸದರು ಮೆಸ್ಕಾಂ ಅಧಿಕಾರಿಗಳಿಗೆ ಸಲಹೆ ನೀಡಿದರು. ಉಡುಪಿ ಜಿಲ್ಲೆಯಲ್ಲಿ ಈ ಬಾರಿ 4,546 ಅರ್ಜಿಗಳು ಬಂದಿವೆ, ಅವುಗಳಲ್ಲಿ 1285 ಕುಟುಂಬಗಳಿಗೆ ಸಬ್ಸಿಡಿ ಮಂಜೂರಾತಿ ರಾಗಿದ್ದು, 1280 ಕುಟುಂಬಗಳಿಗೆ ತಲಾ 78,000 ರು. ನಂತೆ 9.98 ಕೋಟಿ ರು. ಸಬ್ಸಿಡಿಯನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದವರು ಹೇಳಿದರು.ಸಭೆಯಲ್ಲಿ ಜಿಪಂನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಯೋಜನಾ ಅಧಿಕಾರಿ ಉದಯ್ ಕುಮಾರ್ ಶೆಟ್ಟಿ, ಮೆಸ್ಕಾಂ ಅಧೀಕ್ಷಕ ರಾಕೇಶ್, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ್, ಯೋಜನೆಯ ಅನುಷ್ಠಾನದ ಸದಸ್ಯರಾದ ಶೇಖರ್ ಉಪಸ್ಥಿತರಿದ್ದರು. ಕುಸುಮ್ ಸಿ ಯೋಜನೆಗೆ ಅರಣ್ಯ ಇಲಾಖೆ ಅಡ್ಡಿ: ಬೈಂದೂರು ತಾಲೂಕಿನ ಕಿರಿಮಂಜೇಶ್ವರ, ಬ್ರಹ್ಮಾವರ ತಾಲೂಕಿನ ಕಾವಡಿ, ಕಾಪು ತಾಲೂಕಿನ ಬೆಳ್ಳೆಗಳಲ್ಲಿ ರೈತರಿಗೆ ಸೌರಶಕ್ತಿಯನ್ನು ಒದಗಿಸುವ ಕುಸುಮ್-ಸಿ ಯೋಜನೆಯಡಿ ಸೋಲಾರ್ ಪ್ಲ್ಯಾಂಟ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 40 ಕೋಟಿ ರು. ಮಂಜೂರು ಮಾಡಿದೆ. ಆದರೆ ಅರಣ್ಯ ಇಲಾಖೆ ಸಾಮಾಜಿಕ ಅರಣ್ಯದ ನೆಪವೊಡ್ಡಿ ಅಡ್ಡಿ ಮಾಡಿದೆ ಎಂದು ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಹೇಳಿದರು.ಇದಕ್ಕೆ ಸಂಸದರು ರಾಜ್ಯದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತಾಡಿದ್ದು, ಅವರ ನಿರ್ದೇಶನ ನೀಡಿದ್ದಾರೆ. ಆದರೂ ಅರಣ್ಯ ಇಲಾಖೆ ಅದನ್ನು ಪಾಲಿಸುತ್ತಿಲ್ಲ ಎಂದ ವಿಚಾರ ತೀವ್ರ ಚರ್ಚೆಯಾಯಿತು. ನಂತರ ದೂರವಾಣಿ ಮೂಲಕ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದ ಸಂಸದರು ನಿಮ್ಮದಲ್ಲದ ಅರಣ್ಯಕ್ಕೆ ಸುಮ್ಮನೆ ನೆಪವನ್ನೊಡ್ಡಿ ಅಭಿವೃದ್ಧಿ ಕೆಲಸ ತೊಂದರೆ ಕೊಡಬೇಡಿ, ಕೇಂದ್ರ ಸರ್ಕಾರದ ನೂರಾರು ಕೋಟಿ ರು. ವಾಪಾಸ್ಸಾಗಂದಂತೆ ಎಚ್ಚರ ವಹಿಸಿ ಎಂದು ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವಿತೀಯ ಪಿಯುಸಿ ಫಲಿತಾಂಶ: ಅಂಬಿಕಾ ಪದವಿ ಪೂರ್ವ ವಿದ್ಯಾಲಯಕ್ಕೆ ದ್ವಿತೀಯ ರ‍್ಯಾಂಕ್
ಕೊರಗರ ಕಟ್ಟುಕಟ್ಟಲೆಗಳು: ಆರಾಧನೆ ಮತ್ತು ಆಚರಣೆ ಪುಸ್ತಕ ಬಿಡುಗಡೆ